ದೊಡ್ಡಬಳ್ಳಾಪುರ: 2019ರ ಜನವರಿಯಲ್ಲಿ ದೊಡ್ಡಬಳ್ಳಾಪುರ ನಗರದ ಕೊರಚರಹಟ್ಟಿಯ ಪ್ರೀತಿ ವೈನ್ಸ್ ವೃತ್ತದ ಸಮೀಪ ನಡೆದಿದ್ದ ಗಂಗಾಧರ್ ಅಲಿಯಾಸ್ ದಾಸ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆನಂದ್ ಅಲಿಯಾಸ್ ಕಬಾಬ್ ಆನಂದ್‌ಗೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಾಧೀಶರಾದ ನಿರ್ಮಲಾ ಕೆ. ಅವರು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 302ರಡಿ ಆರೋಪಿಯನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ನಾಲ್ಕು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
2019ರ ಜನವರಿ 8ರಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಐಪಿಸಿ ಕಲಂ 302 (ಕೊಲೆ), 324 (ಅಪಾಯಕಾರಿ ಆಯುಧದಿಂದ ಹಲ್ಲೆ) ಹಾಗೂ 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಹಣಕಾಸಿನ ವಿಚಾರದಿಂದ ವೈಮನಸ್ಸು
ಪೊಲೀಸ್ ತನಿಖೆ ಹಾಗೂ ದಾಖಲೆಗಳ ಪ್ರಕಾರ, ಮೃತ ಗಂಗಾಧರ್ ಮತ್ತು ಆರೋಪಿ ಆನಂದ್ ನಡುವೆ ಹಣಕಾಸಿನ ವಿಚಾರವಾಗಿ ಹಿಂದಿನಿಂದಲೂ ವೈಮನಸ್ಸು ಇತ್ತು. ಘಟನೆ ನಡೆದ ದಿನ ರಾತ್ರಿ ಸುಮಾರು 9.45ರ ವೇಳೆಗೆ ಪ್ರೀತಿ ವೈನ್ಸ್ ವೃತ್ತದ ಬಳಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಗಂಗಾಧರ್ ಮಚ್ಚು ಹಾಗೂ ಖಾರದ ಪುಡಿಯನ್ನು ತೆಗೆದುಕೊಂಡು ಹಲ್ಲೆ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದ್ದು, ಆತ್ಮರಕ್ಷಣೆ ವೇಳೆ ಆರೋಪಿ ಅದೇ ಮಚ್ಚನ್ನು ಪಡೆದು ಗಂಗಾಧರ್ ಮೇಲೆ ಹಲ್ಲೆ ನಡೆಸಿದ್ದಾನೆ..
ಗಂಭೀರವಾಗಿ ಗಾಯಗೊಂಡ ಗಂಗಾಧರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
36 ಸಾಕ್ಷಿದಾರರ ವಿಚಾರಣೆ
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ 36 ಸಾಕ್ಷಿದಾರರನ್ನು ಪರೀಕ್ಷಿಸಿತು. ವೈದ್ಯಕೀಯ ವರದಿಗಳು, ದಾಖಲೆ ಸಾಕ್ಷ್ಯಗಳು ಹಾಗೂ ವಸ್ತು ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ತನಿಖಾ ತಂಡದ ಪಾತ್ರ
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ನಟರಾಜ್ ಟಿ.ಎನ್. ಸರ್ಕಾರದ ಪರ ವಾದ ಮಂಡಿಸಿದರು. ತನಿಖಾಧಿಕಾರಿಯಾಗಿದ್ದ ಸಿಪಿಐ ಸಿದ್ದರಾಜು, ಕೋರ್ಟ್ ಪೊಲೀಸ್ ಸಿಬ್ಬಂದಿ ಶಿವಕುಮಾರ್ ಎ.ಜಿ. ಹಾಗೂ ಚಿತ್ರಲಿಂಗ ಬಿ. ಅವರು ತನಿಖೆಗೆ ಸಹಕರಿಸಿರುತ್ತಾರೆ.
ಏಳು ವರ್ಷಗಳ ಕಾಲ ನ್ಯಾಯಾಲಯದಲ್ಲಿ ನಡೆದಿದ್ದ ವಿಚಾರಣೆಗೆ ಇದೀಗ ಅಂತಿಮ ತೆರೆ ಬಿದ್ದಿದ್ದು, ದೊಡ್ಡಬಳ್ಳಾಪುರದಲ್ಲಿ ಬಹುಚರ್ಚೆಗೆ ಕಾರಣವಾಗಿದ್ದ ಈ ಕೊಲೆ ಪ್ರಕರಣಕ್ಕೆ ನ್ಯಾಯಾಂಗ ಅಂತಿಮ ತೀರ್ಪು ನೀಡಿದೆ.
ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (MIL)…
ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…
ದೊಡ್ಡಬಳ್ಳಾಪುರ: ಯಲಹಂಕ ಸಮೀಪದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದ ಎರಡು ರೈಲು ಬೋಗಿಗಳಿಗೆ ಬೆಂಕಿ…
ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 35 ಟ್ರ್ಯಾಕ್ಟರ್ಗಳು…
ನಮ್ಮ ತೆರಿಗೆ ನಮ್ಮ ಹಕ್ಕು, ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ…
ದೇವನಹಳ್ಳಿ: ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಳಕಾಲ್ಮೂರು ಕ್ಷೇತ್ರದ…