ಪೂರ್ವ ತಯಾರಿ ಇಲ್ಲದೇ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಸ್ವಾಗತ ಕೋರಿದ ಆರೋಪ: ಹೆಗ್ಗಡಿಹಳ್ಳಿ ಗ್ರಾ.ಪಂ ಪಿಡಿಒ ಅವರನ್ನ ಅಮಾನತು ಮಾಡುವಂತೆ ಪ್ರಜಾ ವಿಮೋಚನಾ ಸಮಿತಿ ಆಗ್ರಹ

ಫೆ.10 ರಂದು ತಾಲ್ಲೂಕಿಗೆ ಪ್ರವೇಶ ಪಡೆದ ಸಂವಿಧಾನ ಜಾಗೃತಿ ಜಾಥಾ ರಥವನ್ನ ಯಾವ ಪೂರ್ವ ತಯಾರಿ ಇಲ್ಲದೇ ಕಾಟಾಚಾರಕ್ಕೆ ಸ್ವಾಗತ ಕೋರಿದ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸೇವೆಯಿಂದ ಅಮಾನತು ಮಾಡಬೇಕು ಎಂದು ಪ್ರಜಾ ವಿಮೋಚನಾ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ ಅವರು ಒತ್ತಾಯಿಸಿದ್ದಾರೆ.

ಈ ವೇಳೆ ಮಾತನಾಡಿದ ಗೂಳ್ಯ ಹನುಮಣ್ಣ ಅವರು, ಸಂವಿಧಾನ ಜಾಗೃತಿ ಸ್ವಾಗತ ವೇಳೆ ಕನಿಷ್ಠ 5 ಸಾವಿರ ಜನರನ್ನ ಸೇರಿಸಿ ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ, ಬೆರಳೆಣಿಕೆ ಮಾತ್ರ ಜನರನ್ನ ಒಗ್ಗೂಡಿಸಿ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೌಮ್ಯ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸೌಮ್ಯ ಅವರು ಈ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬಂದು ಸುಮಾರು ಒಂದು ವರ್ಷಕ್ಕಿಂತ ಹೆಚ್ಚು ಸಮಯವಾಗಿದ್ದು, ಸಂವಿಧಾನ ಬದ್ಧವಾಗಿ ಯಾವುದೇ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ, ತಮ್ಮ ಕೆಲಸಗಳಿಗಾಗಿ ಸಾರ್ವಜನಿಕರು ಪಂಚಾಯತಿ ಕಚೇರಿ ಬಳಿ ಬಂದರೆ ನಿರ್ಲಕ್ಷ್ಯ ತೋರಿಸುತ್ತಿದ್ದು, ಅವರನ್ನು ನಾಲ್ಕೈದು ತಿಂಗಳುಗಳ ಕಾಲ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಸಮುದಾಯದ ಜನರು ವಾಸಮಾಡುತ್ತಿದ್ದಾರೆ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರನ್ನು ಒಟ್ಟುಗೂಡಿಸಿ ಕಾರ್ಯ ನಿರ್ವಹಿಸಬೇಕಾದುದು ಅವರ ಜವಾಬ್ದಾರಿಯಾಗಿದೆ. ಆದರೆ, ಗ್ರಾ.ಪಂ.ಯಲ್ಲಿ ಸವರ್ಣೀಯ ಸಮುದಾಯದ ಜೊತೆಗೆ ಸೇರಿಕೊಂಡು ಕೆಲವೊಂದು ಜಾತಿಗೆ ಮಾತ್ರ ಪಂಚಾಯಿತಿಯನ್ನು ಸೀಮಿತಗೊಳಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಆಯೋಜನೆ ಮಾಡುತ್ತಿರುವ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ಫೆ.10‌ರಂದು ಹೆಗ್ಗಡಿಹಳ್ಳಿ ಮೂಲಕ ತಾಲ್ಲೂಕಿಗೆ ಪ್ರವೇಶ ಮಾಡಿದ್ದು, ಅಂದು ಎಲ್ಲಾ ಸಮುದಾಯಗಳನ್ನೂ ಒಟ್ಟಿಗೆ ಸೇರಿಸಿ ಪಿಡಿಒ ಅವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿತ್ತು. ಆದರೆ, ಕಾರ್ಯಕ್ರಮವನ್ನು ಹಾಳು ಮಾಡುವ ಉದ್ದೇಶದಿಂದ ಯಾವುದೇ ಸಮುದಾಯದಗಳಿಗೂ ಸಂವಿಧಾನ ಜಾಗೃತಿ ಜಾಥಾದ ಬಗ್ಗೆ ತಿಳಿಸಿಲ್ಲ ಎಂದು ಆರೋಪಿಸಿದರು.

ಎಲ್ಲ ಸಮುದಾಯದ ಮುಖಂಡರನ್ನು ಸೇರಿಸಿ ಸಭೆ ನಡೆಸಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಬಗ್ಗೆ ತಿಳಿಸಿ ಸಮುದಾಯಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕಿದ್ದ ಪಿಡಿಒ ಅವರು, ಪರಿಶಿಷ್ಟ ಜಾತಿ / ಪಂಗಡ ಸೇರಿದಂತೆ ಯಾವುದೇ ಸಮುದಾಯದ ಸಭೆ ನಡೆಸದೆ, ಕಾರ್ಯಕ್ರಮದಲ್ಲಿ ಕೆಲವೆ ಜನರನ್ನು ಸೇರಿಸಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಾಳು ಮಾಡಿದ್ದಾರೆ. ದಲಿತ ವಿರೋಧಿ ನೀತಿ ಅನುಸರಿಸಿ ಸರ್ಕಾರಿ ಕಾರ್ಯಕ್ರಮವನ್ನು ಹಾಳು ಮಾಡಿರುವ ಗ್ರಾಮ ಪಂಚಾಯತಿ ಪಿಡಿಒ ಸೌಮ್ಯ ಅವರನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.

ಈ ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಅನುರಾಧ ಕೆ.ಎನ್ ಮತ್ತು ಗ್ರಾಮಾಂತರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯ‌ ಮಾಡಿದ್ದಾರೆ.

Leave a Reply

Your email address will not be published. Required fields are marked *