ನಗರದ ರೈಲ್ವೆ ನಿಲ್ದಾಣ ಹಾಗೂ ಡಿಕ್ರಾಸ್ ಬಳಿ ಟ್ರಾಫಿಕ್ ಸಿಗ್ನಲ್ ಹಾಗೂ ಸ್ಕೈವಾಕ್ ಅಳವಡಿಸಿ ಸಂಚಾರ ದಟ್ಟಣೆ ನಿಯಂತ್ರಿಸುವಂತೆ ಒತ್ತಾಯಿಸಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶಾಸಕ ಧೀರಜ್ ಮುನಿರಾಜ್ ಹಾಗೂ ಡಿವೈಎಸ್ಪಿ ನಾಗರಾಜ್, ನಗರಸಭೆ ಪೌರಾಯುಕ್ತ ಶಿವಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿದ ನಂತರ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸತೀಶ್ ಮಾತನಾಡಿ, ನಗರದ ಬಾಶೆಟ್ಟಿಹಳ್ಳಿಯ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಕೆಲಸಕ್ಕೆಂದು ವಿವಿಧ ಜಿಲ್ಲೆ, ತಾಲೂಕಿನಿಂದ ಪ್ರತಿನಿತ್ಯ ಸಾವಿರಾರು ಮಂದಿ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗುತ್ತಾರೆ, ನೂರಾರು ಮಂದಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ವಿವಿಧ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಲು ರೈಲ್ವೆ ನಿಲ್ದಾಣ ಬಳಸಿ ಹೋಗುತ್ತಾರೆ ಇದರಿಂದ ವಾಹನ ದಟ್ಟಣೆ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇಲ್ಲಿ ಯಾವ ಟ್ರಾಫಿಕ್ ಸಿಗ್ನಲ್, ಸ್ಕೈವಾಕ್ ಇಲ್ಲದೆ ವಾಹನ ಸವಾರರು, ಪ್ರಯಾಣಿಕರು, ನಗರ ನಿವಾಸಿಗಳು ನಿತ್ಯ ಪರದಾಡುವಂತಾಗಿದೆ. ಅದೇರೀತಿ ಅಪಘಾತ ಪ್ರಕರಣಗಳು ಇಲ್ಲಿ ಹೆಚ್ಚಾಗಿವೆ. ಆದ್ದರಿಂದ ಇಲ್ಲಿ ಟ್ರಾಫಿಕ್ ಸಿಗ್ನಲ್ ಹಾಗೂ ಸ್ಕೈವಾಕ್ ಅಳವಡಿಸಿ ಸಂಚಾರ ದಟ್ಟಣೆ ನಿಯಂತ್ರಿಸಿ ಅಪಘಾತ ತಪ್ಪಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ನಂತರ ಮಾತನಾಡಿದ ಉಪಾಧ್ಯಕ್ಷ ವಿನಯ್ ಮಾತನಾಡಿ, ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾತ್ರ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಲಾಗಿದೆ. ಬೇರೆಲ್ಲೂ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಿಲ್ಲ, ರೈಲ್ವೆನಿಲ್ದಾಣ, ಡಿಕ್ರಾಸ್ ನಲ್ಲೂ ಹೆಚ್ಚು ಅಪಘಾತ, ವಾಹನ ದಟ್ಟಣೆ ಉಂಟಾಗುತ್ತವೆ ಅಲ್ಲಿಯೂ ಸಹ ಟ್ರಾಫಿಕ್ ಸಿಗ್ನಲ್ ಅತ್ಯವಶ್ಯಕ, ಜೊತೆಗೆ ಸಿಸಿಟಿವಿ ಅಳವಡಿಕೆ, ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಬೇಕು. ಎಲ್ಲರ ಜೀವ ಮತ್ತು ಸಮಯ ಅತ್ಯಮೂಲ್ಯ. ಆದ್ದರಿಂದ ಎಲ್ಲರ ಜೀವ ಮತ್ತು ಸಮಯ ಕಾಪಾಡುವ ಸಲುವಾಗಿ ಸಂಚಾರ ನಿಯಮಗಳನ್ನು ಅಳವಡಿಸಿ ಪಾಲನೆ ಮಾಡುವಂತೆ ಮಾಡುವುದು ಸಂಬಂಧಪಟ್ಟ ಇಲಾಖೆಗಳ ಕರ್ತವ್ಯ ಎಂದು ತಿಳಿಸಿದರು.
ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ಸಹ ನೀಡಿದರು.