ಪಿಎಸ್‌ಐ ಗಾದಿಲಿಂಗಪ್ಪ ಹಾಗೂ ಬಿಜೆಪಿ ಮುಖಂಡ ಹನುಮಂತೇಗೌಡ ನಡುವೆ ಗಲಾಟೆ ವಿಚಾರ: ಪಿಎಸ್ಐ ಗಾದಿಲಿಂಗಪ್ಪರನ್ನ ಈ ಕೂಡಲೇ ಅಮಾನತು ಮಾಡಬೇಕು- ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹ

ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಗಾದಿಲಿಂಗಪ್ಪ ಹಾಗೂ ಬಿಜೆಪಿ ಮಧುಗಿರಿ ಘಟಕದ ಹನುಮಂತೇಗೌಡ ನಡುವೆ ಹೊಡೆದಾಟ ನಡೆದಿದೆ ಎಂದು ಆರೋಪಿಸಲಾಗಿದೆ.

ಚಿತ್ರದುರ್ಗದಲ್ಲಿ ತುರುವನೂರು ರಸ್ತೆಯಲ್ಲಿ ಘಟನೆ ನಡೆದಿದೆ. ಶುಕ್ರವಾರ ತಡರಾತ್ರಿ, ಆರೋಪಿ ಹನುಮಂತೇಗೌಡ ತನ್ನ ಸಂಗಡಿಗರೊಂದಿಗೆ ಗುಂಪು ಕಟ್ಟಿಕೊಂಡು ರಸ್ತೆಯಲ್ಲಿ ನಿಂತಿದ್ದರು. ಅದನ್ನು ಪ್ರಶ್ನಿಸಿದ್ದಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂದು ಪಿಎಸ್‌ಐ ಗಾದಿಲಿಂಗಪ್ಪ ಆರೋಪಿಸಲಾಗಿದೆ.

ಆರೋಪಿ ಹನುಮಂತೇಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದಾಗ್ಯೂ ಪೊಲೀಸರೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹನುಮಂತೇಗೌಡ ಕೂಡ ಆರೋಪ ಮಾಡಿದ್ದಾರೆ. ತಮಗೂ ಎದೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನು ತೀವ್ರವಾಗಿ ಖಂಡಿಸಿದ  ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ, ಇದರ ನಡುವೆ ಕೆಲವು ಕೆಳಹಂತದ ಪೊಲೀಸ್ ಅಧಿಕಾರಿಗಳು ಸಾಮಾನ್ಯರು ಹಾಗೂ ಜವಾಬ್ದಾರಿಯುತ ನಾಗರಿಕರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸಿ ದೈಹಿಕ ಹಲ್ಲೆಗೂ ಮುಂದಾಗುತ್ತಿದ್ದಾರೆ ಎಂದು ದೂರಿದ್ದಾರೆ.

ಚಿತ್ರದುರ್ಗದಲ್ಲಿ ನಮ್ಮ ಪಕ್ಷದ ಮಧುಗಿರಿ (ಸಂಘಟನಾತ್ಮಕ ಜಿಲ್ಲೆ)  ಜಿಲ್ಲಾಧ್ಯಕ್ಷರಾದ ಹನುಮಂತೇಗೌಡ ಅವರ ಮೇಲೆ ಪಿಎಸ್​ಐ ಗಾದಿಲಿಂಗಪ್ಪ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದು ಇದನ್ನು ರಾಜ್ಯ ಬಿಜೆಪಿ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ನಾಗರಿಕ ಸಮಾಜದಲ್ಲಿ ಶಾಂತಿ ಸಂರಕ್ಷಿಸಲಾಗದ ಅಧಿಕಾರಿಗಳು ಮಧ್ಯರಾತ್ರಿಯಲ್ಲಿ ತಮ್ಮ ಪೊಲೀಸ್ ರೌದ್ರಾವತಾರ ಪ್ರದರ್ಶಿಸಲು ಹೊರಟಿದ್ದಾರೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುವ ಮುನ್ನ ಅವರ ಸಾಮಾಜಿಕ ಸ್ಥಾನಮಾನವನ್ನೂ ಲೆಕ್ಕಿಸದೆ ಗೂಂಡಾಗಿರಿ ಪ್ರದರ್ಶಿಸುವುದು ಪೋಲಿಸ್ ಇಲಾಖೆಯ ದಕ್ಷತೆಯ ಘನತೆಯನ್ನು ಕಳೆದಂತೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪ್ರಭಾವಿಗಳಿಂದ ಆಯಾ ಕಟ್ಟಿನ ಸ್ಥಾನದಲ್ಲಿ ಕುಳಿತುಕೊಂಡಿರುವ ಕೆಲವು ಪೊಲೀಸ್ ಅಧಿಕಾರಿಗಳು ತಮಗೆ ಯಾರೂ ಏನೂ ಮಾಡಲಾಗದು ಎಂಬ ಮನಸ್ಥಿತಿಯನ್ನು ಮೈಗೂಡಿಸಿಕೊಂಡಿದ್ದು ಎಲ್ಲೆಂದರಲ್ಲಿ ತಮ್ಮ ದರ್ಪ ಪ್ರದರ್ಶಿಸುತ್ತಿದ್ದಾರೆ. ಚಿತ್ರದುರ್ಗದ ಘಟನೆಯ ಹಿಂದೆ ರಾಜಕಾರಣದ ಪ್ರಚೋದನೆ ಇರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು, ಅಧಿಕಾರಸ್ತ ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಪೊಲೀಸರು ಇಲಾಖೆಯ ಗೌರವ ಕಳೆಯುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಚಿತ್ರದುರ್ಗದ ಪಿಎಸ್ಐ ಗಾದಿಲಿಂಗಪ್ಪ ಅವರನ್ನು ಈ ಕೂಡಲೇ ಪೊಲೀಸ್ ಮಹಾನಿರ್ದೇಶಕರು ಅಮಾನತ್ತಿನಲ್ಲಿಡದಿದ್ದರೆ ಬಿಜೆಪಿಯು ನಾಗರಿಕರೊಡಗೂಡಿ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *