ದೊಡ್ಡಬಳ್ಳಾಪುರ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್ಡಿ) ನಿಯಮಿತದ ಚುನಾವಣೆಯ ಅಂತಿಮ ಫಲಿತಾಂಶ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕಟವಾಗಿದೆ.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತಕ್ಕೆ ಫೆಬ್ರವರಿ 16 ರಿಂದ ಮುಂದಿನ 05 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಡೆಸಲಾಗಿತ್ತು.
ಈ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಸ್ಥಾನದ ರಾಜಘಟ್ಟ ಕ್ಷೇತ್ರ, ಮಹಿಳಾ ಮೀಸಲು ಸ್ಥಾನದ ದೊಡ್ಡಬೆಳವಂಗಲ ಹಾಗೂ ದೊಡ್ಡಬಳ್ಳಾಪುರ ನಗರ ಕ್ಷೇತ್ರ, ಹಿಂದುಳಿದ ವರ್ಗಗಳ ಪ್ರವರ್ಗ ‘ಎ’ ಸ್ಥಾನದ ತೂಬಗೆರೆ ಕ್ಷೇತ್ರ, ಹಿಂದುಳಿದ ವರ್ಗಗಳ ಪ್ರವರ್ಗ ‘ಎ’ ಕೊನಘಟ್ಟ ಕ್ಷೇತ್ರ, ಪರಿಶಿಷ್ಟ ಜಾತಿ ಸ್ಥಾನದ ಎಸ್.ಎಸ್.ಘಾಟಿ ಕ್ಷೇತ್ರ, ಪರಿಶಿಷ್ಟ ಪಂಗಡ ಸ್ಥಾನದ ಹೊಸಹಳ್ಳಿ ಕ್ಷೇತ್ರದಿಂದ ಹಾಗೂ ಸಾಲಗಾರರಲ್ಲದ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಸಾಲಗಾರರ ಸಾಮಾನ್ಯ ಸ್ಥಾನದ ಮೆಳೇಕೋಟೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಲಕ್ಷ್ಮೀದೇವಿಪುರದ ಬಸವರಾಜು ಬಿ 17 ಮತಗಳು, ಸಿ.ಡಿ.ಅಗ್ರಹಾರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಸಿ.ಅಶ್ವಥ್ ನಾರಾಯಣ ಗೌಡ 61 ಮತಗಳು, ಹಣಬೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ವಾಣಿಗರಹಳ್ಳಿ ವಿ.ವೇಣುಕುಮಾರ್ 43 ಮತಗಳು, ಮಧುರೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಕಸಾಘಟ್ಟ ಉಗ್ರಯ್ಯ 38 ಮತಗಳು, ಕೊಡಿಗೇಹಳ್ಳಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ತಳಗವಾರ ಟಿವಿ ಲಕ್ಷ್ಮೀನಾರಾಯಣ್ 17 ಮತಗಳು, ಮತ್ತು ಸಾಸಲು ಕ್ಷೇತ್ರದ ಸ್ಪರ್ಧಿಸಿದ್ದ ಚನ್ನವೀರನಹಳ್ಳಿಯ ಸಿವಿ ಲಕ್ಷ್ಮೀಪತಯ್ಯ 27 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.
ಚುನಾವಣೆ ಫಲಿತಾಂಶ ಪ್ರಕಟವಾಗುತ್ತಲೇ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಕಣ್ಣು ನೆಟ್ಟಿದ್ದು, ಚರ್ಚೆ ತೀವ್ರಗೊಂಡಿದೆ.
ಈ ಕುರಿತಾಗಿ ಇಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್ ಮಾತನಾಡಿ, ನಮಗೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್ ಡಿ) ನಿಯಮಿತದ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುತ್ತಾರೋ ಅವರ ಪರ ನಿಲ್ಲುವ ಬಯಕೆ ನನ್ನದು, ಇನ್ನೂ ಈ ಬಗ್ಗೆ ಜೆಡಿಎಸ್ ಜಿಲ್ಲಾಧ್ಯಕ್ಷರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ ಎಂದರು.
ಎಲ್ಲಾರಿಗೂ ಅಧಿಕಾರದ ಆಸೆ ಇದ್ದೇ ಇರುತ್ತದೆ. ನಮ್ಮ ಜೆಡಿಎಸ್ ಪಕ್ಷವನ್ನು ಹೊಡೆದು ಹೋಗದ ರೀತಿ ಕಾಪಾಡಬೇಕು. ಈಗಾಗಲೇ ನಮ್ಮ ಪಕ್ಷದಿಂದ ಗೆದ್ದಿರುವ ಐದು ಮಂದಿಯನ್ನು ಹಿಡಿದಿಟ್ಟುಕೊಂಡು ಆಮೇಲೆ ಬೇರೆ ಪಕ್ಷದ ಜೊತೆ ಹೊಂದಾಣಿಕೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಜೆಡಿಎಸ್ ಕಾಂಗ್ರೆಸ್ ಜೊತೆ ವಿಲೀನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಕಾಂಗ್ರೆಸ್ ಜೊತೆ ವಿಲೀನವಾಗುವುದಿಲ್ಲ. ಕೆಲವು ನಾಯಕರು ಅಧಿಕಾರದ ಆಸೆಗೋಸ್ಕರ ಕಾಂಗ್ರೆಸ್ ಜೊತೆ ಹೋಗಬಹುದು. ಅದು ಅವರ ವೈಯಕ್ತಿಕ ವಿಚಾರ ನಾವು ಏನೂ ಮಾಡುವುದಕ್ಕೆ ಆಗೋದಿಲ್ಲ. ಪಿಎಲ್ ಡಿ ಬ್ಯಾಂಕ್ ರೈತರ ಅಭಿವೃದ್ಧಿಗಾಗಿ ಇರುವ ಸಂಸ್ಥೆ. ಈ ಸಂಸ್ಥೆಗೆ ಅನುಕೂಲವಾಗುತ್ತೆ ಅಂದರೆ ಅಧಿಕಾರ ಹಂಚಿಕೆಗೂ ನಾವು ಬದ್ಧರಾಗಿರುತ್ತೇವೆ. ಚುನಾವಣೆ ಬೇಡ ಅಂತಾ ನನಗೆ ಅನಿಸುತ್ತದೆ ಎಂದರು.