ಪಾಲನಜೋಗಿಹಳ್ಳಿ ಪ್ರವೇಶ ದ್ವಾರದ ಬಳಿ ದುರ್ವಾಸನೆಯೊಂದಿಗೆ ತ್ಯಾಜ್ಯ ರಾಶಿಗಳ ಸ್ವಾಗತ: ಕಣ್ಮುಚ್ಚಿ ಕುಳಿತ ಪಂಚಾಯಿತಿ: ಜನ ಆಕ್ರೋಶ

ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಪಾಲನಜೋಗಿಹಳ್ಳಿ ಪ್ರವೇಶ ದ್ವಾರದ ಬಳಿ ದುರ್ವಾಸನೆಯೊಂದಿಗೆ ತ್ಯಾಜ್ಯ ರಾಶಿ ಸ್ವಾಗತಿಸುತ್ತದೆ. ಪಾಲನಜೋಗಿಹಳ್ಳಿ ದಿನದಿನಕ್ಕೆ ನಗರಕ್ಕೆ ಹೊಂದಿಕೊಳ್ಳುತ್ತಿದ್ದು, ಇದಕ್ಕೆ ತಕ್ಕಂತೆ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗದೇ ಸಾರ್ವಜನಿಕರು ಪರದಾಡುವಂತಾಗಿದೆ.

ಪಾಲನಜೋಗಿಹಳ್ಳಿಯನ್ನು ಪ್ರವೇಶಿ ಸುತ್ತಿದ್ದಂತೆ ‘ಸುಸ್ವಾಗತ’ ಎಂಬ ಬೃಹತ್ ನಾಮಫಲಕ ಸ್ವಾಗತಿಸುತ್ತದೆ. ಅದನ್ನು ದಾಟಿ ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ದುರ್ವಾಸನೆಯೊಂದಿಗೆ ರಸ್ತೆಯ ಬದಿಯಲ್ಲಿ ತ್ಯಾಜ್ಯ ರಾಶಿಗಳು ಕಣ್ಣಿಗೆ ರಾಚುತ್ತದೆ.

ಸ್ಥಳದಲ್ಲಿ ಪಾರ್ಕ್, ಶಾಲೆ, ದೇವಸ್ಥಾನ, ಅಂಗಡಿಗಳು, ಮನೆಗಳು ಇದ್ದು, ಇದರ ಪಕ್ಕದಲ್ಲೇ ಇರುವ ತ್ಯಾಜ್ಯ ರಾಶಿಗಳು ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ರೋಗಿಗಳ ಆರೋಗ್ಯಕ್ಕೂ ಹಾನಿ ತರುತ್ತಿದೆ.

ಕಸದ ದುರ್ವಾಸನೆಯೊಂದಿಗೆ ಬೀದಿ ನಾಯಿಗಳ ಕಾಟವೂ ಇಲ್ಲಿ ವಿಪರೀತವಾಗಿದೆ. ಹೋಟೆಲ್ ಆಹಾರ ತ್ಯಾಜ್ಯ, ಮಾಂಸದಂಗಡಿಗಳ ತ್ಯಾಜ್ಯದಿಂದ ಹಲವು ಬೀದಿನಾಯಿಗಳು ಇಲ್ಲಿಯೇ ವಾಸವಾಗಿವೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಡಿದ ಗ್ರಾಮ ಪಂಚಾಯಿತಿ ಸದಸ್ಯೆ ಗಾಯತ್ರಿ ಮಂಜುನಾಥ್, ಕಸದ ಸಮಸ್ಯೆ ನಿವಾರಣೆ ಮಾಡಲು ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಸಿಸಿಟಿವಿ ಅಳವಡಿಕೆ ಮಾಡಿ, ಕಸ ಹಾಕುವವರಿಗೆ ದಂಡ ವಿಧಿಸುವಂತೆಯೂ ಸಹ ಮನವಿ ಮಾಡಿದ್ದೇನೆ. ಆದರೆ, ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ವೇಳೆ ಇದೇರೀತಿ ಬೇಜವಾಬ್ದಾರಿತನ ಮೆರೆದರೆ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು….

ಪ್ರತಿದಿನ ಮನೆಮನೆಗೆ ಬಂದು ಕಸ ಶೇಖರಿಸಬೇಕು. ಆದರೆ, ಪಂಚಾಯಿತಿಯವರು ವಾರಕ್ಕೊಮ್ಮೆ ಬಂದು ಕಸ ಶೇಖರಣೆ ಮಾಡುತ್ತಿದ್ದಾರೆ. ಇದರಿಂದ ಕಸ ಎಲ್ಲೆಂದರಲ್ಲಿ ಜನ ಹಾಕುತ್ತಿದ್ದಾರೆ. ಎರಡು ಹಾಗೂ ಮೂರನೇ ವಾರ್ಡ್ ನಲ್ಲಿ ಹೆಚ್ಚಾಗಿ ಖಾಸಗಿ ಕಂಪನಿಗಳಿಗೆ ಹೋಗುವ ಕಾರ್ಮಿಕರಿದ್ದಾರೆ. ಅವರು ಎಲ್ಲೆಂದರಲ್ಲಿ ಕಸವನ್ನು ಸುರಿಯುತ್ತಿದ್ದಾರೆ. ಅವರಿಗೆ ಅರಿವು ಮೂಡಿಸಬೇಕಾಗಿದೆ ಎಂದರು.

ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಈ ಪಾಲನಜೋಗಿಹಳ್ಳಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಿ. ತ್ಯಾಜ್ಯ ವಿಲೇವಾರಿ ಸ್ಥಳಾಂತರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಿ. ಜನತೆಯ ಆರೋಗ್ಯ ಕಾಪಾಡಲಿ, ಜೊತೆಗೆ ಚರಂಡಿ ದುರಸ್ತಿ ಮಾಡಿ, ಸ್ವಚ್ಛತೆಗೆ ಮೊದಲ ನೀಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!