ಜಿಲ್ಲೆಯಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನೆರವೇರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಯಂತ್ರ ಸಕಲ ರೀತಿಯಲ್ಲೂ ಕಾರ್ಯೋನ್ಮುಖವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಆರ್. ಲತಾ ಹೇಳಿದರು
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗದಿಂದ ನೇಮಕಗೊಂಡ ಚುನಾವಣಾ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು, ಪೊಲೀಸ್ ವೀಕ್ಷಕರಿಗೆ ಚುನಾವಣಾ ಸಿದ್ಧತೆ ಗಳು ಬಗ್ಗೆ ಮಾಹಿತಿ ನೀಡಲು
ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ 1137 ಮತಗಟ್ಟೆಗಳು, ಗ್ರಾಮಾಂತರ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ನೆರೆಯ ಜಿಲ್ಲೆಗಳ ಮಾಹಿತಿ, ಜಿಲ್ಲೆಯ ಒಟ್ಟು ಮತದಾರರು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನರು, ಅವರಿಗೆ ಒದಗಿಸಲಾಗಿರುವ 12 D ನಮೂನೆ ಕುರಿತು ಮಾಹಿತಿಗಳನ್ನು ಹಂಚಿಕೊಂಡರು.
ಜಿಲ್ಲೆಯಲ್ಲಿನ ಸೂಕ್ಷ್ಮ ಮತಗಟ್ಟೆಗಳು, ವೆಚ್ಚ ಸೂಕ್ಷ್ಮ ಪ್ರದೇಶಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಿದರು.
ಜಿಲ್ಲೆಯ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಅಳವಡಿಸಿರುವ ಹಾಗೂ ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ಕಾರ್ಯದ ಬಗ್ಗೆಯೂ ವೀಕ್ಷಕರಿಗೆ ಮಾಹಿತಿ ನೀಡಿದರು.
ಜಿಲ್ಲೆಯಾದ್ಯಂತ ಇದುವರೆಗೆ ವಶಪಡಿಸಿಕೊಂಡ ನಗದು, ಮದ್ಯ, ಮಾದಕ ವಸ್ತುಗಳು, ಮನೆಬಳಕೆ ಸಾಮಗ್ರಿಗಳು ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಿದರು.
ಪೊಲೀಸ್ ವೀಕ್ಷಕರಾದ ರೋಮಿಲ್ ಬಾನಿಯ ಅವರು ಮಾತನಾಡಿ ಜಿಲ್ಲೆಯಲ್ಲಿ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಹೊಸಕೋಟೆ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ರೊನಾಲ್ಡೊ ರೋಸ್, ದೊಡ್ಬಳ್ಳಾಪುರ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಶಿಲ್ಪಾಗುಪ್ತ, ವೆಚ್ಚ ವೀಕ್ಷಕರುಗಳಾದ ಡಾ. ದಿನೇಶ್ ಕುಮಾರ್ ಬಿಸೇನ್, ಅತುಲ್ ಪಾಂಡೆ, ರಾಮಚಂದ್ರನ್ ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಹೆಚ್ ಅಮರೇಶ್, ನಾಲ್ಕು ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.