ಪಾಠ ಹೇಳಿಕೊಟ್ಟ ಶಿಕ್ಷಕರನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಂಡು ಗೌರವ ನೀಡುತ್ತಿರುವುದು ಬಹಳ ಸಂತೋಷದ ಸಂಗತಿ. ಒಬ್ಬ ಶಿಕ್ಷಕನಿಗೆ ಯಾವಾಗ ಸಂತೋಷತ್ತದೆ ಎಂದರೆ ತನ್ನ ವಿದ್ಯಾರ್ಥಿ ದೇಶದ ಉತ್ತಮ ಪ್ರಜೆಯಾದಾಗ, ಅಸಹಾಯಕರಿಗೆ ಸಹಾಯ ಮಾಡಿದಾಗ ಎಂದು ನಿವೃತ್ತ ಶಿಕ್ಷಕ ಕೆ.ಎನ್ ರಮೇಶ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಶಿಕ್ಷಕರ ತರಬೇತಿ ಕೇಂದ್ರದ 1991-92ನೇ ಸಾಲಿನಲ್ಲಿ ಶಿಕ್ಷಕ ತರಬೇತಿ(ಟಿಸಿಎಚ್) ಪಡೆದ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಇಂದು ದೇವನಹಳ್ಳಿ ತಾಲ್ಲೂಕಿನ ಕುಂಬೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, ಗುರುವಂದನೆ ಎಂಬುದು ನಮ್ಮಂತಹ ಶಿಕ್ಷಕರಿಗೆ ಅವಿಸ್ಮರಣೀಯ ಘಟನೆ. ಸುಮಾರು 32 ವರ್ಷಗಳ ನಂತರ ನಮ್ಮನ್ನು ನೆನಪಿನಲ್ಲಿ ಇಟ್ಟುಕೊಂಡು ಸನ್ಮಾನ ಮಾಡಿರುವುದು ನಮಗೆ ಬಹಳ ಸಂತೋಷ ಕೊಡುತ್ತದೆ ಎಂದರು.
ತಂದೆ-ತಾಯಿ ಹಾಗೂ ಗುರು ಹಿರಿಯರಿಗೆ ಗೌರವ ಕೊಡುವ ಸಮಾಜ ನಿರ್ಮಾಣವಾಗಬೇಕು. ಎಲ್ಲರಿಗೂ ಗೌರವ ಕೊಡುವಂತಹ ವಿದ್ಯಾರ್ಥಿಗಳನ್ನು ಪಡೆದಿದಕ್ಕೆ ನಮಗೆ ನಿಜವಾಗಲೂ ಹೆಮ್ಮೆ ಅನಿಸುತ್ತದೆ. ಇಂತಹ ಗುರುವಂದನಾ ಕಾರ್ಯಕ್ರಮಗಳು ಇತರರಿಗೂ ಸ್ಫೂರ್ತಿಯಾಗಬೇಕು. ಎಂದು ಶಿಕ್ಷಕ ಸೋಮಶೇಖರ್ ಎಸ್ ಹೆಚ್ ಹೇಳಿದರು.
ಶಾಲೆಗಳಲ್ಲಿನ ಗಂಟೆಗಳ ಸದ್ದು ಹೆಚ್ಚು ಕೇಳುವ ದೇಶವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ. ಶಿಕ್ಷಣದಿಂದ ಮಕ್ಕಳು ವಂಚಿತರಾದಲ್ಲಿ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ, ದೇಶದ ಪ್ರಗತಿಗೆ ಶಿಕ್ಷಣವೇ ಆಧಾರ ಸ್ಥಂಭವಾಗಿದ್ದು ಅದನ್ನು ಪಡೆದ ವ್ಯಕ್ತಿಗಳು ದೇಶಕ್ಕಾಗಿ ವಿನಿಯೋಗಿಸಬೇಕು ಎಂದು ಶಿಕ್ಷಕ ಶರಣಯ್ಯ ಹಿರೇಮಠ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಖೇದಕರ ಸಂಗತಿಯಾದರೇ, ಇನ್ನೊಂದೆಡೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದು ಶಿಕ್ಷಕ ಉಮಾಶಂಕರ್ ತಿಳಿಸಿದರು.
ನಮಗೆ ಪಾಠ ಹೇಳಿಕೊಟ್ಟ ಶಿಕ್ಷಕರಿಗೆ ಗುರುವಂದನೆ ಮಾಡಿರುವುದು ಸಂತೋಷವಾಗಿದೆ. ಶಿಕ್ಷಕರು ಹಾಕಿಕೊಟ್ಟ ಒಳ್ಳೆ ಮಾರ್ಗದಲ್ಲಿ ನಡೆದಿರುವುದರಿಂದ ನಾವು ಈಗ ಉತ್ತಮ ಪ್ರಜೆಗಳಾಗಿ ಜೀವನ ರೂಪಿಸಿಕೊಂಡಿದ್ದೇವೆ. ಶಿಕ್ಷಕರಿಲ್ಲದೇ ನಾವಿಲ್ಲ. ನಾವು ಶಿಕ್ಷಕರಿಗೆ ಸದಾ ಕಾಲ ಚಿರ ಋಣಿಯಾಗಿರುತ್ತೇವೆ ಎಂದು ಪ್ರಶಿಕ್ಷಣಾರ್ಥಿ ಶೋಭಾವತಿ ಆರ್. ಹೇಳಿದರು.
ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ, ಹೀಗಾಗಿ ಪ್ರಾಚೀನ ಕಾಲದಿಂದಲೂ ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ, ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಮೂಲಕ ಮತ್ತೊಂದು ವಿಷೇಶ ಅರ್ಥ ನೀಡುತ್ತಿರುವುದು ಸಂತಸದ ವಿಷಯ ಎಂದು ಉಮೇಶ್ ಎಚ್.ಎಂ ಹೇಳಿದರು.
ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನಾವು ಅಂತಹ ಉತ್ತಮ ಶಿಕ್ಷಕರಿಂದ ವಿದ್ಯೆ ಪಡೆದಿದ್ದರಿಂದ ನಮ್ಮ ಬದುಕು ಹಸನಾಗಿದೆ. ನಮ್ಮ ಗುರುಗಳಿಗೆ ಸನ್ಮಾಸಿಸಲು ಹಳೇ ವಿದ್ಯಾರ್ಥಿಗಳೆಲ್ಲರು ಸೇರಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಶಿಕ್ಷಣಾರ್ಥಿ ಗಂಗಾಧರಪ್ಪ ತಿಳಿಸಿದರು.
ಒಟ್ಟಿನಲ್ಲಿ ಕಾರ್ಯಕ್ರಮದ ಹಳೆಯ ವಿದ್ಯಾರ್ಥಿಗಳು ಶಿಕ್ಷಕರು, ಸ್ನೇಹಿತರ ಜೊತೆ ತಮ್ಮ ಸ್ನೇಹ ಮಿಲನದಲ್ಲಿ ನಗುತ್ತಾ ತಮ್ಮ ತಮ್ಮ ಬಗ್ಗೆ ಹಂಚಿಕೊಂಡರು. ಇನ್ನೂ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಎಳೆ ಎಳೆಯಾಗಿ ಮೆಲುಕು ಹಾಕಿದ್ದು ಇದೊಂದು ವಿಶೇಷವಾಗಿತ್ತು.
ಈ ವೇಳೆ ಮಲ್ಲಿಕಾರ್ಜುನ, ಡಿ.ಆರ್. ಶ್ರೀನಿವಾಸ ಸೇರಿದಂತೆ ಸ್ನೇಹ ಸಮ್ಮಿಲನ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.