ಪರ್ಸ್ ನಲ್ಲಿದ್ದ ಒಂದು ಲಕ್ಷದ ಐವತ್ತು ಸಾವಿರ ರೂ. ಬೆಲೆ ಬಾಳುವ 30ಗ್ರಾಂ ಚಿನ್ನದ ಸರವನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದ ಬಳಿ ನಡೆದಿದೆ.
ನಿರ್ಮಲಾ (42) ಚಿನ್ನದ ಸರ ಕಳೆದು ಕೊಂಡ ಮಹಿಳೆ. ಶ್ರೀನಿವಾಸಪುರ ಮೂಲದ ಇವರು ತನ್ನ ಕುಟುಂಬದ ಜೊತೆ ಯಲಹಂಕದ ಸಂಬಂಧಿಕರ ಮನೆಗೆ ತೆರಳಿ, ಅಲ್ಲಿಂದ ಅ.21ರಂದು ಘಾಟಿ ಸುಬ್ರಹ್ಮಣ್ಯ ದೇವಾಲಯ ದರ್ಶನಕ್ಕೆ ಬಂದು ಮಧ್ಯಾಹ್ನ ಸುಮಾರು 1:30ರ ಸಮಯದಲ್ಲಿ ದೇವಸ್ಥಾನ ಬಳಿಯ ಇರುವ ಹುತ್ತಕ್ಕೆ ಪೂಜೆ ಮಾಡಲು ಚಿನ್ನದ ಸರ ಇದ್ದ ಬ್ಯಾಗ್ ನ್ನು ಹುತ್ತದ ಪಕ್ಕ ಇಟ್ಟು ಪೂಜೆ ಮಾಡುವಾಗ ಘಟನೆ ನಡೆದಿದೆ.
ನಿರ್ಮಾಲ ಅವರು ಹುತ್ತಕ್ಕೆ ಪೂಜೆ ಮಾಡುವಲ್ಲಿ ಮಗ್ನರಾಗಿದ್ದಾಗ, ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಬ್ಯಾಗ್ ನಲ್ಲಿದ್ದ ಚಿನ್ನದ ಸರ ಹಾಗೂ ಹಣ ಇರುವ ಪರ್ಸ್ ನ್ನ ದೋಚಿ ಬ್ಯಾಗ್ ನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ನಿರ್ಮಲಾ ಅವರು ಸುಮಾರು 15 ನಿಮೀಷ ಪೂಜೆ ಮಾಡಿ ಬಾಗ್ ತೆಗೆದುಕೊಂಡು ಅಲ್ಲಿಂದ ಮತ್ತೆ ದೇವರ ದರ್ಶನಕ್ಕೆ ಹೋಗಿ ವಾಪಸ್ ಮಧ್ಯಾಹ್ನ 2:30ಕ್ಕೆ ದೇವಸ್ಥಾನದಿಂದ ಆಚೆ ಬಂದು ದೊಡ್ಡಬಳ್ಳಾಪುರಕ್ಕೆ ಹೋಗಲು ಕೆ.ಎಸ್.ಅರ್.ಟಿ.ಸಿ ಬಸ್ ಹತ್ತಿದ್ದಾರೆ. ಸುಮಾರು 1 ಕಿಮೀ ಮುಂದೆ ಬಂದು ಬ್ಯಾಗ್ ತೆಗೆದು ನೋಡಿದಾಗ 1,50,00 ಮೌಲ್ಯದ 30 ಗ್ರಾಂ ಚಿನ್ನದ ಸರ ಹಾಗೂ ನಗದು ಇಟ್ಟಿದ್ದ ಪರ್ಸ್ ನಾಪತ್ತೆ ಆಗಿರುತ್ತದೆ.
ಗಾಬರಿಗೊಂಡ ನಿರ್ಮಲಾ ಮತ್ತೆ ವಾಪಸ್ ಹುತ್ತದ ಬಳಿ ಬಂದು ನೋಡಿದರೂ, ಮನೆಯಲ್ಲಿ ಬಂದು ಹುಡುಕಾಡಿದರೂ ಚಿನ್ನದ ಸರ ಸಿಗದ ಕಾರಣ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಈ ಕುರಿತು ದೂರು ನೀಡಿರುತ್ತಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.