‘ಪಬ್ಲಿಕ್ ಮಿರ್ಚಿ ಫಲಶೃತಿ’; 30 ವರ್ಷಗಳ ನಂತರ ದಲಿತ ಕಾಲೋನಿಗೆ ಸಿಕ್ತು ಚರಂಡಿ ಭಾಗ್ಯ

ದೊಡ್ಡಬಳ್ಳಾಪುರ:  ತಾಲೂಕಿನ ಹಾದ್ರೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾದ್ರೀಪುರ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದಲೂ ಚರಂಡಿ ವ್ಯವಸ್ಥೆ ಮಾಡಿರಲಿಲ್ಲ. ಹಾದ್ರೀಪುರ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ, ನೀರೆಲ್ಲಾ ರಸ್ತೆಯ ಮೇಲೆ ಹರಿಯುತ್ತಿತ್ತು.

ಈ ಕುರಿತು ನ.18 ರಂದು ಪಬ್ಲಿಕ್ ಮಿರ್ಚಿ ವರದಿ ಮಾಡಿತ್ತು. ಕೂಡಲೇ ಎಚ್ಚೆತ್ತ ಪಂಚಾಯಿತಿ ಆಡಳಿತ ಈಗ ಚರಂಡಿ ವ್ಯವಸ್ಥೆ ಮಾಡಿಸಿದೆ. ಚರಂಡಿ ಆಗುತ್ತಿದ್ದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮತ್ತು ಪಬ್ಲಿಕ್ ಮಿರ್ಚಿಗೆ ಸಾರ್ವಜನಿಕರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, 30 ವರ್ಷಗಳ ನಂತರ ಹಾದ್ರೀಪುರ ಗ್ರಾಮದಿಂದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಅಧಿಕಾರಕ್ಕೆ ಬಂದ ಮೊದಲ ಕೆಲಸವೇ ಚರಂಡಿ ವ್ಯವಸ್ಥೆ ಮಾಡುವುದಾಗಿತ್ತು. ಆಕ್ಷನ್ ಪ್ಲಾನ್ ಕೂಡ ಮಾಡಲಾಗಿತ್ತು. ಆದರೆ, ಚುನಾವಣಾ ನಿಮಿತ್ತ ಕಾಮಗಾರಿ ಮುಂದೂಡಿಕೆ ಆಗಿತ್ತು. ಅಷ್ಟರಲ್ಲಿ ಗ್ರಾಮದಲ್ಲಿ ಕೆಲವರು ಈ ರೀತಿಯ ಆರೋಪ ಮಾಡಿದ್ದರು. ಮಾತಿಗಿಂತ ಕೆಲಸ ಮುಖ್ಯ ಎಂದು ಹೇಳಿದರು.

ನಂತರ ಹಾದ್ರಿಪುರ ಗ್ರಾಮ‌ ಪಂಚಾಯಿತಿ ಸದಸ್ಯ ದೇವರಾಜ್ ಮಾತನಾಡಿ, ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯ, ಈ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಏನೇ ಸಮಸ್ಯೆ ಇದ್ದರೂ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ. ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಕಾರ್ಯ ಕೈಗೊಳ್ಳಲು ಎಲ್ಲರ ಸಹಕಾರ ಅಗತ್ಯ. ಸದ್ಯ ಹಾದ್ರೀಪುರ ಗ್ರಾಮದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಇನ್ನು ಮುಂದೆ ಈ ಗ್ರಾಮದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಹಾದ್ರಿಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ಸುಮಾರು 150ಕ್ಕೂ ಹೆಚ್ಚು ಮನೆಗಳಿವೆ. 25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ‘ವಿ’ ಆಕಾರದಲ್ಲಿ ಚರಂಡಿ ನಿರ್ಮಿಸಲಾಗಿತ್ತು. ಗ್ರಾಮ ಪಂಚಾಯಿತಿಯಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣಕ್ಕೆ ಬಹುತೇಕ ಕಡೆ ಹೂಳು ತುಂಬಿಕೊಂಡಿತ್ತು. ಇದರಿಂದಾಗಿ, ಚರಂಡಿಗಳು ಕಟ್ಟಿಕೊಂಡು ಸೊಳ್ಳೆಗಳ ಹೆಚ್ಳಳಕ್ಕೆ ಕಾರಣವಾಗಿತ್ತು. ಕೆಲವೆಡೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿತ್ತು. ಇದರಿಂದ‌ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕಿತ್ತು.

Leave a Reply

Your email address will not be published. Required fields are marked *