ಪದವೀಧರರ ಧ್ವನಿಯಾಗಿ ಕೆಲಸ ಮಾಡಲು ಉದಯ ಸಿಂಗ್ ಅವರಿಗೆ ಮತ ನೀಡಿ- ಕರಾವೈಸಪ ಅಧ್ಯಕ್ಷ ಹುಲಿಕಲ್ ನಟರಾಜ್ ಮನವಿ

ಹಲವಾರು ವರ್ಷಗಳಿಂದ ಪದವೀಧರರ ಪ್ರತಿನಿಧಿಗಳು ಎಂದು ಸುಳ್ಳು ಹೇಳಿ ಪದವೀಧರರ ಕಷ್ಟಕಾಲದಲ್ಲಿ ನೆರವಿಗೆ ಬಾರದ ಜನಪ್ರತಿನಿಧಿಗಳ ವಿರುದ್ಧ ಉದಯಸಿಂಗ್ ಅವರು ಪದವೀಧರರ ಧ್ವನಿಯಾಗಿ ಶ್ರಮಿಸಲು ಚುನಾವಣೆಗೆ ಸ್ಪರ್ಧಿಸಿದ್ದಾರೆ. ದಯವಿಟ್ಟು ಅವರಿಗೆ ಮತ ನೀಡಿ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಅಧ್ಯಕ್ಷ ಹುಲಿಕಲ್ ನಟರಾಜು ಅವರು ಮತದಾರರಲ್ಲಿ ಮನವಿ ಮಾಡಿದರು.

ನಗರದ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆ ಪ್ರಚಾರದಲ್ಲಿ ಅವರು ಮಾತನಾಡಿದರು.

ಪದವೀಧರರ ಕಷ್ಟಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳನ್ನು ಕಂಡ ಪದವೀಧರರು ಈ ಬಾರಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ. ಉದಯ‌ಸಿಂಗ್ ಅವರು ಪದವೀಧರರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಪದವೀಧರರ ಕಷ್ಟಗಳನ್ನು ಸರ್ಕಾರಕ್ಕೆ ಅರಿವು ಮೂಡಿಸುವ ಕೆಲಸವನ್ನು ಅವರು ಮಾಡಲಿದ್ದಾರೆ ಎಂದರು.

ನಿರಂತರ ಸಾಮಾಜಿಕ ಚಟುವಟಿಕೆಗಳ ಜತೆಗೆ ಪದವೀಧರರ ಕಷ್ಟಗಳಿಗೆ ಸ್ಪಂದಿಸಲಿದ್ದಾರೆ. ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪದವೀಧರರು ತಮ್ಮ ಹಕ್ಕುಗಳಿಗಾಗಿ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಮತ ಚಲಾಯಿಸಬೇಕು ಎಂದರು.

ರಾಷ್ಟೀಯ ಪಕ್ಷದ ಅಡಿಯಲ್ಲಿ ಸ್ಪರ್ಧಿಸುವ  ರಾಜಕಾರಣಿಗಳಿಗೆ ಈ ಚುನಾವಣೆ ಪಾಠಕಲಿಸಬೇಕಿದೆ. ಕೇವಲ ಚುನಾವಣೆ ನೆಪಕ್ಕೆ ಮಾತ್ರ ಪದವೀಧರರನ್ನು  ಸಂಪರ್ಕಿಸುವವರನ್ನು ಸೋಲಿಸಿ ಸಾಮಾಜಿಕವಾಗಿ ಕೆಲಸ ಮಾಡುವವರನ್ನು ಬೆಂಬಲಿಸಿ. ಉದಯ್ ಸಿಂಗ್ ಅವರು ಕರೋನ ಸಮಯದಲ್ಲಿ ಪದವೀಧರರ ನೆರವಿಗೆ ನಿಂತಿದ್ದು, ಸಾಕಷ್ಟು ಕಷ್ಟ ನೋವುಗಳನ್ನು ಆಲಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ನಿಮ್ಮೆಲ್ಲರ ಧ್ವನಿಯಾಗಲು ಸಮಾನ ಮನಸ್ಕರೆಲ್ಲ ಮತದಾನ ಮಾಡಿ ಎಂದು ತಿಳಿಸಿದರು.

ಮುಖಂಡ ಮಧುಕುಮಾರ್ ಮಾತನಾಡಿ, ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ  ಕೇವಲ 61 ಸಾವಿರ ಮತಗಳು ಮಾತ್ರ ನೋಂದಣಿಯಾಗಿದ್ದವು. ಉದಯ್ ಸಿಂಗ್‌ರ ಸಾಮಾಜಿಕ ಕೆಲಸದ ಜೊತೆ ಪದವೀಧರರ ಕ್ಷೇತ್ರದ ಚುನಾವಣೆ ಬಗ್ಗೆ ಅರಿವು ಮೂಡಿಸಿ 1 ಲಕ್ಷದ 30 ಸಾವಿರ ಮತದಾರರನ್ನು ನೋಂದಣಿ ಮಾಡಿಸಲು ಶ್ರಮಿಸಿದ್ದಾರೆ.  ಬೆಂಗಳೂರು  ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಈಗಾಗಲೇ ಮಾಧ್ಯಮಗಳ ಸಮೀಕ್ಷೆ ಪ್ರಕಾರ ಉದಯ್ ಸಿಂಗ್ ಅವರ ಗೆಲ್ಲುವ ಸೂಚನೆ ನೀಡಲಾಗಿದೆ ಎಂದರು.

ಈ ವೇಳೆ ರಾಜ್ಯ  ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಉಪಾಧ್ಯಕ್ಷ ಡಾ. ಶ್ರೀರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಚಿಕ್ಕ ಹನುಂತೇಗೌಡ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *