ದೊಡ್ಡಬಳ್ಳಾಪುರ: ಅನಾಥ ಯುವತಿಗೆ ಬಾಳು ಕೊಡುವುದಾಗಿ ಮದುವೆಯಾಗಿದ್ದ ಆ ಭೂಪ. ಆದರೆ, ಪರಸ್ತ್ರೀ ವ್ಯಾಮೋಹ ಅನಾಥೆಯ ಎರಡು ವರ್ಷದ ದಾಂಪತ್ಯಕ್ಕೆ ಹುಳಿ ಹಿಂಡಿ, ಗೃಹಿಣಿಯ ಸಾವಿಗೆ ಮುನ್ನುಡಿ ಬರೆಯಿತು.
ಕರೇನಹಳ್ಳಿಯ ನಿವಾಸಿ ವೀಣಾ ತನ್ನ ಪತಿಯಿಂದಲೇ ದಾರುಣವಾಗಿ ಹತ್ಯೆಗೀಡಾದ ದುರ್ದೈವಿ. ಪತಿ ರವಿಚಂದ್ರನೇ ಹಂತಕ.
ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ..?
ವೀಣಾ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಏ.21 ರಂದು ತನ್ನ ಪತ್ನಿ ಕೆಲಸಕ್ಕೆ ಹೋದವಳು ವಾಪಸ್ ಬರಲಿಲ್ಲ ಎಂದು ಹೇಳಿ ಪತಿ ರವಿಚಂದ್ರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ. ಮರುದಿನ ಬಂದು ಮಹಿಳಾ ಠಾಣೆಗೆ ದೂರು ನೀಡುವಂತೆ ಪೊಲೀಸರು ತಿಳಿಸಿದ್ದರು. ಆದರೆ, ರವಿಚಂದ್ರ ಏ.25 ರಂದು ಬಂದು ದೂರು ದಾಖಲಿಸಿದ್ದ.
ಇದಾದ ಒಂದು ವಾರಕ್ಕೆ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾಗಿರುವ ಅಪರಿಚಿತ ಮಹಿಳೆಯ ಶವ ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಸಾದಿಕ್ ಪಾಷ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಯಾವುದೇ ಸಾಕ್ಷ್ಯ ಸಿಗದಂತೆ ಮೃತದೇಹ ಸುಟ್ಟು ಹಾಕಿದ್ದರಿಂದ ತನಿಖೆ ಸವಾಲಾಗಿ ಪರಿಣಮಿಸಿತ್ತು.
ತನಿಖೆ ಆರಂಭಿಸಿದ ಪೊಲೀಸರು ವಿವಿಧ ಠಾಣೆಗಳಲ್ಲಿ ದಾಖಲಾದ ನಾಪತ್ತೆಯಾದ ಪ್ರಕರಣಗಳನ್ನು ಪರಿಶೀಲಿಸಿದಾಗ ಏಪ್ರಿಲ್ 25 ರಂದು ರವಿಚಂದ್ರ ಎಂಬುವರು ನೀಡಿದ್ದ ದೂರು ಗಮನಕ್ಕೆ ಬಂದಿದೆ.
ಅಪರಿಚಿತ ಮಹಿಳೆಯ ಮೃತದೇಹ ಸಿಕ್ಕ ಜಾಗದಲ್ಲಿ ದೊರೆತ ಕಾಲುಂಗುರ, ಕಿವಿ ಓಲೆ, ಕಾಲ್ಗೆಜ್ಜೆಯನ್ನು ನಾಪತ್ತೆಯಾದ ಮಹಿಳೆಯ ಸಂಬಂಧಿಕರಿಗೆ ತೋರಿಸಿದಾಗ ಗುರುತು ಪತ್ತೆಯಾಯಿತು. ನಂತರ ಮೃತಳ ಗಂಡನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯ್ಬಿಟ್ಟ ಎಂದು ಇನ್ ಸ್ಪೆಕ್ಟರ್ ಸಾದಿಕ್ ಪಾಷಾ ವಿವರಿಸಿದರು.
ಪರಸ್ತ್ರೀ ಜೊತೆ ಅನೈತಿಕ ಸಂಬಂಧವೇ ಕೊಲೆಗೆ ಕಾರಣ
ಆರೋಪಿ ರವಿಚಂದ್ರ ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ ವಿಷಯ ವೀಣಾಳಿಗೆ ಗೊತ್ತಾಗಿ ನಿತ್ಯ ಗಲಾಟೆ ನಡೆಯುತ್ತಿತ್ತು. ಆದರೆ, ಆಂಟಿಯನ್ನು ಬಿಡಲು ಒಲ್ಲದ ರವಿಚಂದ್ರ, ಮಧ್ಯರಾತ್ರಿ ಹೆಂಡತಿ ಮಲಗಿದ ಮೇಲೆ ರೂಮಿಗೆ ಬೀಗ ಹಾಕಿಕೊಂಡು ಆಂಟಿ ಮನೆ ಸೇರಿಕೊಳ್ಳುತ್ತಿದ್ದ. ಈ ಕುರಿತು ಹಲವಾರು ಬಾರಿ ನ್ಯಾಯ ಪಂಚಾಯಿತಿ ಮಾಡಿ ಗಂಡನಿಗೆ ಬುದ್ಧಿವಾದ ಹೇಳಿದರೂ ಉಪಯೋಗವಾಗಲಿಲ್ಲ. ಇದನ್ನು ಹೀಗೆ ಬಿಟ್ಟರೆ ನನಗೆ ತೊಂದರೆ ಎಂದು ಭಾವಿಸಿ ಹೆಂಡತಿಯನ್ನು ಮುಗಿಸಲು ರವಿ ಸಂಚು ರೂಪಿಸಿದ್ದ.
ಏಪ್ರಿಲ್ 21 ರಂದು ಆಕೆ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿ ಹೋಗಿ, ಕೆಲಸ ಬಿಟ್ಟ ನಂತರ ಹೆಂಡತಿಯನ್ನು ಬೈಕ್ ನಲ್ಲಿ ಜೊತೆಯಾಗಿ ಕರೆದುಕೊಂಡು ತೂಬಗೆರೆ ಸಮೀಪದ ನಾರಸಿಂಹನಹಳ್ಳಿಯ ಅರಣ್ಯ ಪ್ರದೇಶಕ್ಕೆ ಹೋಗಿದ್ದ. ಅಲ್ಲಿ ಕೆಲಹೊತ್ತು ಇಬ್ಬರ ನಡುವೆ ಮಾತುಕತೆ, ಗಲಾಟೆ ನಡೆದಿದೆ. ಹೆಂಡತಿ ತನ್ನ ಮಾತು ಕೇಳದಿದ್ದಾಗ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಸಾಕ್ಷಿ ನಾಶ ಮಾಡಲು ಬೈಕಿನಿಂದ ಪೆಟ್ರೋಲ್ ತೆಗೆದು ಶವವನ್ನು ಸುಟ್ಟುಹಾಕಿದ್ದಾನೆ.
ಅಂದು ರಾತ್ರಿ ಮನೆಗೆ ಬಂದವನು ತನಗೇನು ಗೊತ್ತೇ ಇಲ್ಲ ಎಂಬಂತೆ, ಅಕ್ಕಪಕ್ಕದ ಮನೆಯ ಬಳಿ ಹೋಗಿ ವೀಣಾ ಇದ್ದಾಳಾ ಎಂದು ಕೇಳಿದ್ದಾನೆ, ರಾತ್ರಿ 10 ಗಂಟೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ಹೆಂಡತಿ ಕಾಣೆಯಾಗಿರುವ ಬಗ್ಗೆ ದೂರು ನೀಡಲು ಬಂದಿದ್ದ. ಗ್ರಾಮಾಂತರ ಠಾಣೆ ಪೊಲೀಸರು ಮಹಿಳಾ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದರು.
ಗಂಡನಿಗೆ ಹರ್ನಿಯಾ ಆಪರೇಷನ್
ಕೊಲೆ ಆರೋಪಿಗೆ ಕೆಲ ದಿನಗಳ ಹಿಂದೆ ಹರ್ನಿಯಾ ಆಪರೇಷನ್ ಆಗಿತ್ತು, ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು ಎಂದು ವೈದ್ಯರು ಸಲಹೆ ನೀಡಿದ್ದರು. ಆಗ ತನ್ನ ಹೆಂಡತಿ ಮೇಲೆ ಸದಾ ಅನುಮಾನ ಪಡುತ್ತಿದ್ದ. ಹೆಂಡತಿಯ ಫೋನ್ ಪರಿಶೀಲನೆ, ಆಕೆಯ ಚಲನವಲನದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದ. ಆದರೆ ತಾನು ಮಾತ್ರ ಬೇರೊಬ್ಬ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ, ಈತನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಲಾರಿ ಡ್ರೈವರ್ ಆಗಿದ್ದ. ಒಂದೆರಡು ತಿಂಗಳು ಮನೆಯತ್ತ ಬರುತ್ತಿರಲಿಲ್ಲ. ಇದೇ ಅವಕಾಶಕ್ಕಾಗಿ ಕಾದು ಆಕೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದ.
ಮರ್ಯಾದೆಗೆ ಹೆದರಿ ಕಲ್ಪನಾ ಆತ್ಮಹತ್ಯೆ:
ವೀಣಾ ಕೊಲೆ ಆರೋಪದಲ್ಲಿ ರವಿಯನ್ನು ಬಂಧನ ಮಾಡಿರುವ ವಿಚಾರ ತಿಳಿದು ಈತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಕರೇನಹಳ್ಳಿ ನಿವಾಸಿ ಕಲ್ಪನಾ ಕೂಡ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತನ ಕಾಮದ ತೀಟೆಗೆ ಇಬ್ಬರು ಮಹಿಳೆಯರ ದಾರುಣ ಸಾವಾಗಿದೆ. ಇಬ್ಬರು ಮಹಿಳೆಯರಿಗೆ ಒಂದೊಂದು ಮಗು ಇತ್ತು, ಆ ಮಕ್ಕಳು ತಾಯಂದಿರು ಇಲ್ಲದೆ ತಬ್ಬಲಿಗಳಾಗಿವೆ.