
ಸಿನಿಮಾ ಕಥೆಗಳನ್ನೂ ಮೀರಿಸುವಂತಹ ಭೀಕರ ಕೃತ್ಯಯೊಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ನೂರು ಕಾಲ ಸುಖವಾಗಿ ಬಾಳಬೇಕಾದ ಪತಿಯನ್ನೇ ಕಟುಕ ಪ್ರಿಯಕರನಿಗಾಗಿ ಹತ್ಯೆ ಮಾಡಿದ ಮಹಿಳೆಯೊಬ್ಬಳು, ಆ ನಂತರ ಪತಿಯ ಶವದ ಪಕ್ಕದಲ್ಲೇ ಕುಳಿತು ಮಾಡಿದ ಕೆಲಸ ಈಗ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಅಕ್ರಮ ಸಂಬಂಧದ ಅಮಲಿನಲ್ಲಿ ಮಾನವೀಯತೆಯನ್ನೇ ಮರೆತ ಆ ಸೈಕೋ ಪತ್ನಿಯ ಅಸಲಿ ಮುಖವಾಡ ಈಗ ಬಯಲಾಗಿದೆ.
ಚಿಲುವೂರು ನಿವಾಸಿಯಾದ ಉಳ್ಳಾಗಡ್ಡೆ (ಈರುಳ್ಳಿ) ವ್ಯಾಪಾರಿ ಶಿವನಾಗರಾಜು ಮತ್ತು ಲಕ್ಷ್ಮಿ ಮಾಧುರಿ ದಂಪತಿಗೆ 2007ರಲ್ಲಿ ಮದುವೆಯಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸುಖವಾಗಿಯೇ ಸಾಗುತ್ತಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು ಮಾಧುರಿಗೆ ವಿಜಯವಾಡದಲ್ಲಿ ಕೆಲಸ ಮಾಡುವಾಗ ಗೋಪಾಲ್ ಎಂಬಾತನ ಪರಿಚಯವಾದಾಗ.
ಈ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ತನ್ನ ಸುಖಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಮಾಧುರಿ ಸಂಚು ರೂಪಿಸಿದ್ದಳು.
ಜ. 18ರ ರಾತ್ರಿ ಮಾಧುರಿ ತನ್ನ ಪ್ಲಾನ್ ಜಾರಿಗೆ ತಂದಿದ್ದಾಳೆ. ಪತಿಗಾಗಿ ಪ್ರೀತಿಯಿಂದ ಬಿರಿಯಾನಿ ತಯಾರಿಸಿದ ಮಾಧುರಿ, ಅದರಲ್ಲಿ ಬರೋಬ್ಬರಿ 20 ನಿದ್ರೆ ಮಾತ್ರೆಗಳನ್ನು ಬೆರೆಸಿದ್ದಾಳೆ. ಪತಿ ಗಾಢ ನಿದ್ರೆಗೆ ಜಾರುತ್ತಿದ್ದಂತೆ ಪ್ರಿಯಕರ ಗೋಪಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಗೋಪಿ ನಾಗರಾಜನ ಎದೆಯ ಮೇಲೆ ಕುಳಿತು ಹಿಸುಕಿದರೆ, ಮಾಧುರಿ ದಿಂಬಿನಿಂದ ಮುಖವನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಂದಿದ್ದಾಳೆ.
ಪತಿ ಮೃತಪಟ್ಟ ಬಳಿಕ ಪ್ರಿಯಕರ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ, ಮಾಧುರಿ ಮಾತ್ರ ಕಿಂಚಿತ್ತೂ ಭಯವಿಲ್ಲದೆ, ಏನೇನೂ ತಿಳಿಯದವಳಂತೆ ಸತ್ತ ಪತಿಯ ಶವದ ಪಕ್ಕದಲ್ಲೇ ಕುಳಿತು ರಾತ್ರಿಯಿಡೀ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಾ ಕಾಲ ಕಳೆದಿದ್ದಾಳೆ. ಅವಳ ಈ ವಿಕೃತ ಮನಸ್ಥಿತಿ ಈಗ ಎಲ್ಲರಿಗೂ ಶಾಕ್ ನೀಡಿದೆ.
ಬೆಳಗ್ಗೆಯಾಗುತ್ತಿದ್ದಂತೆ ಮಾಧುರಿ ಹೊಸ ನಾಟಕ ಶುರು ಮಾಡಿದ್ದಾಳೆ. ತನ್ನ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ನೆರೆಹೊರೆಯವರನ್ನು ನಂಬಿಸಲು ಯತ್ನಿಸಿದ್ದಾಳೆ. ಆದರೆ, ದಂಪತಿಗಳ ನಡುವಿನ ಗಲಾಟೆ ಮತ್ತು ಮಾಧುರಿಯ ಅಕ್ರಮ ಸಂಬಂಧದ ಬಗ್ಗೆ ಮೊದಲೇ ಅನುಮಾನವಿದ್ದ ಗ್ರಾಮಸ್ಥರಿಗೆ ಆಕೆಯ ಮೇಲೆ ಸಂಶಯ ಮೂಡಿದೆ.
ಅಂತ್ಯಕ್ರಿಯೆಯ ಸಮಯದಲ್ಲಿ ಶಿವನಾಗರಾಜು ಕಿವಿಯಿಂದ ರಕ್ತ ಬರುತ್ತಿರುವುದನ್ನು ಗಮನಿಸಿದ ಆತನ ಸ್ನೇಹಿತರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶವವನ್ನು ಪೋಸ್ಟ್‌ಮಾರ್ಟಮ್‌ಗೆ ಕಳುಹಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.
ನಾಗರಾಜನ ಎದೆಯ ಎಲುಬುಗಳು ಮುರಿದಿರುವುದು ಪತ್ತೆಯಾಗಿದೆ. ಉಸಿರುಗಟ್ಟಿಸಿದ್ದರಿಂದಲೇ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ದೃಢಪಟ್ಟಿದೆ ಎಂದು ತಿಳಿದುಬಂದಿದೆ..
ಪೊಲೀಸರ ಬಿಗಿ ವಿಚಾರಣೆಯ ಮುಂದೆ ತತ್ತರಿಸಿದ ಮಾಧುರಿ, ತನ್ನ ಪ್ರಿಯಕರನೊಂದಿಗೆ ಸೇರಿ ಮಾಡಿದ ಈ ಭೀಕರ ಕೊಲೆಯನ್ನು ಒಪ್ಪಿಕೊಂಡಿದ್ದಾಳೆ.
ಸದ್ಯ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.