ತಾಲೂಕಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಮತ್ತು ಈ ಭಾಗದಲ್ಲಿನ ಕಲುಷಿತಗೊಂಡಿರುವ ಕೆರೆಗಳ ಶುದ್ಧೀಕರಣಕ್ಕೆ ಆಗ್ರಹಿಸಿ ನಗರದ ತಾಲೂಕು ಕಚೇರಿ ಮುಂಭಾಗ ಅರ್ಕಾವತಿ ನದಿಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟವಾದಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿತು. ಕಳೆದ ಎರಡು ದಿನಗಳಿಂದ ಪ್ರತಿಭಟನಾ ನಿರತರತ್ತ ಸುಳಿಯದ ಅಧಿಕಾರಿಗಳು ಜನಪ್ರತಿನಿಧಿಗಳು ಭಾನುವಾರ ದಿಢೀರ್ ಭೇಟಿ ಕೊಟ್ಟಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಶಾಸಕ ಧೀರಜ್ ಮುನಿರಾಜು ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಾ ನಿರತರ ಅಹವಾಲನ್ನು ಸ್ವೀಕರಿಸಿದರು.
ಸಚಿವ, ಶಾಸಕರ ಬೇವರಿಳಿಸಿದ ಹೋರಾಟಗಾರರು:
ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿ ಸಚಿವ ಮುನಿಯಪ್ಪ ಮತ್ತು ಶಾಸಕ ಧೀರಜ್ ಮುನಿರಾಜು ಅವರಿಗೆ ಹೋರಾಟಗಾರರು ತಮ್ಮ ನೀರಿನ ಸಮಸ್ಯೆಯನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿದರು. ನಗರಸಭೆ ಮಲ ತ್ಯಾಜ್ಯ ಯುಜಿಡಿ ಮುಖಾಂತರ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ರಾಸಾಯನಿಕಯುಕ್ತ ತ್ಯಾಜ್ಯ ನೀರನ್ನು ನೇರವಾಗಿ ಕೆರೆಗಳ ಅಂಗಳಕ್ಕೆ ಬಿಡುತ್ತಿವೆ. ಈ ಬಗ್ಗೆ ಸಾಕ್ಷಿ ಸಮೇತ ದೂರು ನೀಡಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ತೆಗೆದುಕೊಂಡಿಲ್ಲ. ಖುದ್ದು ನಮ್ಮ ಭಾಗದಲ್ಲಿನ ಕೆರೆಗಳ ನೀರು, ಶುದ್ಧ ಕುಡಿಯುವ ನೀರು ಘಟಕದ ನೀರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ವಿವಿಧ ಲ್ಯಾಬ್ ಗಳಲ್ಲಿ ಪರೀಕ್ಷೆ ಮಾಡಿ ಕುಡಿಯಲು ಮತ್ತು ಬಳಸಲು ಯೋಗ್ಯವಲ್ಲ ಎಂದು ಅವರೇ ಹೇಳಿದ್ದಾರೆ. ಆದರೆ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸದೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳಿಂದ ಟೊಳ್ಳು ಭರವಸೆ:
ಈಗಾಗಲೇ ಬೆಂಗಳೂರು-ಹಿಂದೂಪುರ ರಸ್ತೆ ತಡೆ ಸೇರಿದಂತೆ ಸಚಿವರು, ಜಿಲ್ಲಾಧಿಕಾರಿ, ಶಾಸಕ, ತಹಸೀಲ್ದಾರ್ ಸೇರಿ ಸಂಬಂಧಪಟ್ಟಂತಹ ಎಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅವರು ಹೇಳಿರುವ ಎಲ್ಲಾ ಭರವಸೆಗಳು ಕೇವಲ ಮಾತಿಗೆ ಸೀಮಿತವಾಗಿದೆ. ಕಳೆದ ಸೋಮವಾರವೂ ಪ್ರತಿಭಟನೆ ವೇಳೆ ಸಂಜೆಯಿಂದಲೇ ನೀರು ಪೂರೈಕೆ ಮಾಡುತ್ತವೆ ಎಂದು ಹೇಳಿ ನೀರನ್ನೇ ಕಳಿಸಲಿಲ್ಲ.
ಹಿಂದಿನ ಜಿಲ್ಲಾಧಿಕಾರಿ ಮೂಗು ಮುಚ್ಚಿಕೊಂಡು ಕೆರೆಗಳ ವೀಕ್ಷಣೆ ಮಾಡಿ ವಿಷದ ನೀರನ್ನು ಚೆನ್ನಾಗಿದೆ ಎಂದು ಹೇಳಿ ಹೋಗಿದ್ದಾರೆ ಇಂತಹ ಅಧಿಕಾರಿಗಳಿಗೆ ದೇವರೆ ಬುದ್ಧಿ ಕಲಿಸಬೇಕು ಎಂದು ದೂರಿದರು. ತಕ್ಷಣಕ್ಕೆ ಟ್ಯಾಂಕರ್ ಮುಖಾಂತರ ನೀರನ್ನು ಪೂರೈಕೆ ಮಾಡಿ. ಹಂತ ಹಂತವಾಗಿ ಶಾಶ್ವತ ಪರಿಹಾರ ನೀಡಬೇಕು ಎಂದು ಸಚಿವರಲ್ಲಿ ಪ್ರತಿಭಟನಾಕಾರರು ಮನವಿ ಮಾಡಿಕೊಂಡರು.
ವಸ್ತುಸ್ಥಿತಿಯನ್ನು ಸಚಿವರಿಗೆ ವಿವರಿಸಿದ ಶಾಸಕ ಧೀರಜ್ ಮುನಿರಾಜ್
2008 ರಲ್ಲಿ ನಗರದಲ್ಲಿ ಯುಜಿಡಿ ಕಾಮಗಾರಿ ಆಯ್ತು
2016ರಿಂದ ಚಿಕ್ಕತುಮಕೂರು ಕೆರೆಗೆ ಒಳಚರಂಡಿ ನೀರು ಹೋಗುತ್ತಿದೆ. ಪ್ರತಿದಿನ 5 MLD ತ್ಯಾಜ್ಯ ನೀರು ಹೋಗುತ್ತಿತ್ತು. ಒಂದು ದಿನ ಹೋಗುವ ತ್ಯಾಜ್ಯ ನೀರು ಶುದ್ಧೀಕರಣವಾಗಲು ಒಂದು ವಾರ ಸಮಯವಕಾಶ ಬೇಕಿದೆ.
ಈಗ ಪೌರಾಡಳಿತ ಇಲಾಖೆವರು ನೂತನವಾಗಿ ಎಸ್ಟಿಪಿ ಮತ್ತು ಒಳಚರಂಡಿ ವ್ಯವಸ್ಥೆ ಸರಿಪಡಿಸಲು 136 ಕೋಟಿ ರೂ. ವೆಚ್ಚದಲ್ಲಿ ನೀಲನಕ್ಷೆ ತಯಾರಿಸಿದೆ. ಹಸಿರು ಪೀಠದ ಆದೇಶದ ಪ್ರಕಾರ ಕೆರೆಯಂಗಳದಿಂದ ಯುಜಿಡಿ ಮತ್ತು ಎಸ್ಟಿಪಿ ಪ್ಲಾಂಟ್ ಗಳನ್ನು ತೆರವು ಮಾಡಬೇಕಿದೆ. ನಗರಸಭೆಯಿಂದ ನೂತನ ಎಸ್ಟಿಪಿ ನಿರ್ಮಿಸಲು 15 ಎಕರೆ ಜಮೀನು ಕೇಳಿದ್ದಾರೆ. ಕೈಗಾರಿಕೆಗಳು ಯಾವುದೇ ರೀತಿಯ ಶುದ್ಧೀಕರಣ ಮಾಡದೆ ನೇರವಾಗಿ ಹೊರಸುಸುತ್ತಿವೆ.
ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ವರದಿ ಕೇಳಿದೆ. ಯಾವುದೇ ಒಂದು ವರದಿ ನೀಡಿಲ್ಲ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ವರದಿಯಂತೆಯೇ ಅಂತರ್ಜಲ ನೀರು ಸಂಪೂರ್ಣ ಕಲುಷಿತಗೊಂಡಿದೆ. ಕುಡಿಯಲು ಯೋಗ್ಯವಲ್ಲದ ನೀರಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ಸಚಿವ ಕೆ.ಎಚ್ ಮುನಿಯಪ್ಪಗೆ ವಸ್ತುಸ್ತುತಿಯನ್ನು ವಿವರಿಸಿದರು.
ತಾ.ಪಂ, ಪೌರಾಡಳಿತ, ನಗರಸಭೆ ಕಿತ್ತಾಟಕ್ಕೆ ನೀರಿಲ್ಲದೆ ನಲುಗಿದ ಜನತೆ:
ನಗರಸಭೆ, ಪೌರಾಡಳಿತ ಮತ್ತು ತಾಲ್ಲೂಕು ಪಂಚಾಯತಿ ಮಧ್ಯೆ ಕಿತ್ತಾಟದಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಕಲುಷಿತ ಮಾಡುತ್ತಿರುವವರ ವ್ಯಾಪ್ತಿ ಪೌರಾಡಳಿ ಇಲಾಖೆಯದ್ದು, ಕೆರೆಗಳು/ಗ್ರಾಮಗಳು ಇರುವುದು ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಆದ್ದರಿಂದ ತಾಲ್ಲೂಕು ಪಂಚಾಯತಿಯವರು ಕಲುಷಿತಕ್ಕೆ ಕಾರಣಿಭೂತರು ಪೌರಾಡಳಿತ ವ್ಯಾಪ್ತಿಯದ್ದು ಅವರ ಬಳಿ ಕೇಳಿ ನೀರು ಪಡೆಯಿರಿ ಅಂತಾರೆ, ನಗರಸಭೆಯವರನ್ನು ಕೇಳಿದರೆ ಅದು ಗ್ರಾ.ಪಂ ವ್ಯಾಪ್ತಿಗೆ ಬರುತ್ತದೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ನಿಲ್ಲಿಸಿದ್ದಾರೆ.
ಹೀಗೆ ಇಲಾಖೆಗಳ ಕಿತ್ತಾಟದಿಂದಾಗಿ ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮಾಡುವ ಹಣವನ್ನು ಯಾರೂ ಭರಿಸದೆ ನೀರು ಸರಬರಾಜನ್ನೆ ನಿಲ್ಲಿಸಿದ್ದಾರೆ ಎಂದು ಸಚಿವರ ಗಮನಕ್ಕೆ ಶಾಸಕ ಧೀರಜ್ ಮುನಿರಾಜು ತಂದರು.
ತಿಂಗಳಲ್ಲಿ ಸೂಕ್ತ ಕ್ರಮ- ಸಚಿವ ಮುನಿಯಪ್ಪ:
ಸಮಸ್ಯೆ ಬಗ್ಗೆ ಆಲಿಸಿದ ಬಳಿಕ ಮಾತನಾಡಿದ ಸಚಿವ ಮುನಿಯಪ್ಪ ಕೂಡಲೇ ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸುತ್ತೇನೆ. ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು, ಪಕ್ಷಾತೀತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸ್ಥಳೀಯ ಶಾಸಕ, ಮಾಜಿ ಶಾಸಕ, ಡಿಸಿ, ಎಸಿ ತಹಸೀಲ್ದಾರ್ ಸೇರಿದಂತೆ ಮುಖಂಡರಿಂದ ವರದಿ ತರಿಸಿಕೊಂಡು ಕ್ರಮ ವಹಿಸಲಾಗುವುದು. ಎಲ್ಲಿ ಎಸ್ಟಿಪಿ ಪ್ಲಾಂಟ್ ನಿರ್ಮಿಸಬೇಕು ಎಂದು ಜಮೀನು ಗುರುತಿಸಿ ಎಂದು ಶಾಸಕ ಧೀರಜ್ ಗೆ ಸಚಿವರು ಸೂಚಿಸಿದರು. ನಾಳೆಯಿಂದಲೇ ಟ್ಯಾಂಕರ್ ಮುಖಾಂತರ ನೀರು ಪೂರೈಕೆಗೆ ಅಧಿಕಾರಿಗಳಿಗೆ ತಿಳಿಸುತ್ತೇನೆ. ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಭೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಕಾಲಿಗೆ ಬಿದ್ದ ಪ್ರತಿಭಟನಾ ನಿರತರು:
ಮೂರು ದಿನದಿಂದ ಆಹಾರ ಸೇವಿಸದೆ ಕೇವಲ ದ್ರವ ಪದಾರ್ಥ ಸೇವಿಸಿ ಪ್ರತಿಭಟನೆಯಲ್ಲಿ ಕುಳಿತಿದ್ದ ವಸಂತ್ ಕುಮಾರ್ ಮತ್ತು ರಮೇಶ್ ಅವರು ಭಾನುವಾರ ಬೆಳಗ್ಗೆ ಅಸ್ವಸ್ಥರಾದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಸಚಿವರು ಆಗಮಿಸುವ ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಂಬ್ಯೆನ್ಸ್ ನಲ್ಲಿ ಆಗಮಿಸಿ ಸಚಿವರ ಕಾಲಿಗೆ ಬಿದ್ದು ನಮ್ಮ ಕೆರೆಗಳನ್ನು ಉಳಿಸಿ ಶುದ್ಧ ಕುಡಿಯುವ ನೀರು ಕೊಡಿ ಎಂದು ಗೊಗರೆದರು. ಈ ವೇಳೆ ಎಲ್ಲರ ಕಣ್ಣಂಚಲ್ಲಿ ನೀರು ಜಿನುಗಿತು. ಬಳಿಕ ಸಚಿವ ಕೆ.ಎಚ್ ಮುನಿಯಪ್ಪ ಮತ್ತು ಶಾಸಕ ಧೀರಜ್ ಮುನಿರಾಜು ಎಳನೀರು ಕುಡಿಸಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ತಿ.ರಂಗರಾಜು, ಕೆಂಪಣ್ಣ, ವಸಂತ್ ಕುಮಾರ್, ಸತೀಶ್, ಆದಿತ್ಯ ನಾಗೇಶ್, ಸಂದೇಶ್, ರಾಮಕೃಷ್ಣ, ಲೋಕೇಶ್ ಮತ್ತಿತರರು ಇದ್ದರು.