ಪಟಾಕಿ ಸಿಡಿಸುವ ವೇಳೆ ಕಿಡಿಗೇಡಿಗಳ ಹುಚ್ಚಾಟ: ಅಮಯಾಕ ನಿರುದ್ಯೋಗಿ ಯುವಕ ಬಲಿ: ಪಟಾಕಿ ಸಿಡಿಸುವ ಪೆಟ್ಟಿಗೆ ಮೇಲೆ ಕೂರಿಸಿ ಬೆಂಕಿ ಹಚ್ಚಿದ ಪಾಪಿಗಳು: ಬದುಕುಳಿದರೆ ಆಟೋರಿಕ್ಷಾ ಕೊಡಿಸುವುದಾಗಿ ಆಮಿಷ

ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವ ವೇಳೆ ಸ್ನೇಹಿತರ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾದ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ಕಂಡುಬಂದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ,‌ ಅಕ್ಟೋಬರ್ 31ರಂದು ಕೋಣನಕುಂಟೆ ಠಾಣೆ ವ್ಯಾಪ್ತಿಯ ವೀವರ್ಸ್ ಕಾಲೋನಿಯಲ್ಲಿ ಪಟಾಕಿ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಶಬರೀಶ್ ಎಂಬ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಅಕ್ಟೋಬರ್ 31ರಂದು ರಾತ್ರಿ ಪಾನಮತ್ತರಾಗಿ ಪಟಾಕಿ ಸಿಡಿಸುತ್ತಿದ್ದ ಯುವಕರು, ಪಟಾಕಿ ಹಚ್ಚುವಾಗ ಅದರ ಮೇಲೆ ಡಬ್ಬ ಇರಿಸಿ, ಆ ಡಬ್ಬದ ಮೇಲೆ ಕುಳಿತುಕೊಳ್ಳುವಂತೆ ಶಬರೀಶನಿಗೆ ಸವಾಲೆಸೆದಿದ್ದರು. ಮದ್ಯದ ಅಮಲಿನಲ್ಲಿದ್ದ ಶಬರೀಶ್, ತಾನು ಪಟಾಕಿ ಸಿಡಿಯುವವರೆಗೂ ಡಬ್ಬದ ಮೇಲೆ ಕುಳಿತುಕೊಂಡರೆ, ತನಗೆ ಆಟೋ ರಿಕ್ಷಾ ಕೊಡಿಸಬೇಕು ಎಂದಿದ್ದ. ಅದಕ್ಕೆ ಸ್ನೇಹಿತರು ಒಪ್ಪಿಕೊಂಡಾಗ ಸವಾಲನ್ನು ಸ್ವೀಕರಿಸಿ ಪಟಾಕಿ ಇದ್ದ ಡಬ್ಬದ ಮೇಲೆ ಕುಳಿತಿದ್ದಾನೆ.

ಅದರಂತೆ ಭಾರೀ ಪಟಾಕಿಯನ್ನು ಇರಿಸಿ ಅದಕ್ಕೆ ಬೆಂಕಿ ಹಚ್ಚಿದ್ದ ಆತನ ಸ್ನೇಹಿತರು, ಡಬ್ಬದ ಮೇಲೆ ಶಬರೀಶನನ್ನು ಕೂರಿಸಿ ಅಲ್ಲಿಂದ ದೂರ ಓಡಿದ್ದಾರೆ. ಬಳಿಕ ಪಟಾಕಿ ಸಿಡಿದ ರಭಸಕ್ಕೆ ಶಬರೀಶನ ಖಾಸಗಿ ಅಂಗಕ್ಕೆ ತೀವ್ರವಾಗಿ ಸುಟ್ಟ ಗಾಯವಾಗಿತ್ತು. ತಕ್ಷಣ ಶಬರೀಶನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 2ರಂದು ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣೆ ಪೊಲೀಸರು, ಆರೋಪಿಗಳಾದ ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಎಂಬುವರನ್ನು ಬಂಧಿಸಿರುವುದಾಗಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ಮಾಹಿತಿ ನೀಡಿದ್ದಾರೆ.

ಸ್ನೇಹಿತರು ಪಟಾಕಿ ಸಿಡಿಸುವ ಕಿಡಿಗೇಡಿ ಕೃತ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *