ಅತ್ತಿಬೆಲೆ ಪಟಾಕಿ ಮಳಿಗೆ ದುರಂತ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆ, ತಹಶೀಲ್ದಾರ್, ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೆಇಬಿ ವತಿಯಿಂದ ನಗರದ ಕೊಂಗಾಡಿಯಪ್ಪ ರಸ್ತೆಯ ಗ್ರೀನ್ ವ್ಯಾಲಿ ಮುಂಭಾಗ ಖಾಲಿ ಜಾಗದಲ್ಲಿ ಕೇವಲ 8 ಮಂದಿ ವ್ಯಾಪಾರಿಗಳಿಗೆ ಮಾತ್ರ ಕಡ್ಡಾಯವಾಗಿ ಹಸಿರು ಪಟಾಕಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಪಟಾಕಿ ಮಾರಾಟ ಪರವಾನಗಿದಾರರು ರಾತ್ರಿ ವೇಳೆ ಪಟಾಕಿ ಮಾರಬಾರದು, ಕಡ್ಡಾಯವಾಗಿ ಮಳಿಗೆಗಳಲ್ಲಿ ಅಗ್ನಿನಂದಕ ಸಿಲಿಂಡರ್ ಹೊಂದಿರಬೇಕು, ನೀರಿನ ಟ್ಯಾಂಕರ್ ಸೇರಿದಂತೆ 15 ಮಾದರಿಯ ಕಟ್ಟುನಿಟ್ಟಿನ ಷರತ್ತುಗಳನ್ನ ಕಡ್ಡಾಯವಾಗಿ ಪಾಲಿಸುವಂತೆ ಅನುಮತಿ ಪತ್ರದಲ್ಲಿ ನಮೂದಿಸಲಾಗಿದೆ.
ಪರವಾನಗಿದಾರರು ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡು ಬಂದರೆ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ.
ಕಳೆದ 30 ವರ್ಷಗಳಿಂದ ಪಟಾಕಿ ವ್ಯಾಪಾರವನ್ನ ಮಾಡುತ್ತಾ ಬಂದಿದ್ದೇವೆ, ಸಾರ್ವಜನಿಕರು ಹಾಗೂ ಪರಿಸರ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ನಿಯಮಗಳನ್ನ ಸರ್ಕಾರ ಜಾರಿ ಮಾಡಿದೆ. ಆ ನಿಯಮಗಳನ್ನು ಪಾಲನೆ ಮಾಡುತ್ತಾ ಪಟಾಕಿ ವ್ಯಾಪಾರ ಮಾಡುತ್ತಿದ್ದೇವೆ. ಸ್ಥಳದಲ್ಲಿ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ವಹಿಸಿದ್ದೇವೆ ಎಂದು ಪಟಾಕಿ ವ್ಯಾಪರಸ್ಥ ಮೋಹನ್ ಕುಮಾರ್ ತಿಳಿಸಿದರು.
ದೀಪಾವಳಿ ಹಬ್ಬಕ್ಕೆ ದಿನಗಣನೆ ಇರುವಾಗ ನಮಗೆ ಪರವಾನಗಿ ಸಿಕ್ಕಿದೆ. ಸ್ವಲ್ಪ ವ್ಯಾಪಾರದಲ್ಲಿ ನಷ್ಟ ಆಗುವ ಆತಂಕ ಎದುರಾಗಿದೆ. ಸರ್ಕಾರದ ಆದೇಶದಂತೆ ಹಸಿರು ಮುದ್ರೆ ಇರುವ ಪಟಾಕಿಗಳನ್ನು ಮಾತ್ರ ನಾವು ಮಾರಾಟ ಮಾಡುತ್ತಿದ್ದೇವೆ. ಮಕ್ಕಳಿಗೆ ಪಟಾಕಿ ಮಾರಾಟ ಮಾಡುವುದಿಲ್ಲ ಎಂದು ಹೇಳಿದರು.
ಪಟಾಕಿ ಚೀಟಿ ವ್ಯವಹಾರ ಮಾಡುವವರಿಂದ ಸರ್ಕಾರದಿಂದ ಪರವಾನಗಿ ಪಡೆದು ವ್ಯಾಪಾರ ಮಾಡುವವರಿಗೆ ಹೊಡೆತ ಬೀಳುತ್ತಿದೆ. ಅವರಿಂದ ನಮಗೆ ನಷ್ಟ ಉಂಟಾಗುತ್ತಿದೆ. ಪರವಾನಗಿ ಇಲ್ಲದೇ ವ್ಯಾಪಾರ ಮಾಡುವವರನ್ನ ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಂಡು ಪರವಾನಗಿ ಪಡೆದು ವ್ಯಾಪಾರ ಮಾಡುವವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪಟಾಕಿ ಪರವಾನಗಿದಾರ ಮಹೇಶ್ ಬಾಬು ಮನವಿ ಮಾಡಿದ್ದಾರೆ.