ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉದ್ಧಟತನ: ಕಳೆದ ಮೂರು ತಿಂಗಳಿಂದ ಗುತ್ತಿಗೆದಾರರ ಬಿಲ್ ಗಳಿಗೆ ಸಹಿ ಹಾಕದೇ ನಿರ್ಲಕ್ಷ್ಯ ಆರೋಪ: ಗುತ್ತಿಗೆದಾರರಿಂದ ಪ್ರತಿಭಟನೆ

ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹದೇಶ್ವರ್ ಅವರು ಕಳೆದ ಮೂರು ತಿಂಗಳಿಂದ ಗುತ್ತಿಗೆದಾರರ ಬಿಲ್, ಕ್ರಿಯಾಯೋಜನೆ, ಅಂದಾಜು ಪತ್ರಗಳಿಗೆ ಸಹಿ ಹಾಕದೆ ಮೀನಾಮೇಷವೆಣಿಸಿ ಗುತ್ತಿಗೆದಾರರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೊಡ್ಡಬಳ್ಳಾಪುರ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮೀಪತಿ ಆರೋಪಿಸಿದರು.

ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹದೇಶ್ವರ್ ಅವರ ಕಾರ್ಯಪ್ರವೃತ್ತಿಯನ್ನು ಖಂಡಿಸಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶಾಸಕರ ಸ್ಥಳೀಯಾಭಿವೃದ್ಧಿ ನಿಧಿ, ಸಂಸತ್ ಸದಸ್ಯರ ಸ್ಥಳೀಯಾಭಿವೃದ್ಧಿ ನಿಧಿ, ವಿಧಾನ ಪರಿಷತ್ ಸದಸ್ಯರ ಸ್ಥಳೀಯಾಭಿವೃದ್ಧಿ ನಿಧಿ ವ್ಯಾಪ್ತಿಗೆ ಬರುವ ತುಂಡು ಗುತ್ತಿಗೆ ಕಾಮಗಾರಿಗಳು ಪೂರ್ಣಗೊಂಡು ಮೂರು ತಿಂಗಳುಗಳು ಕಳೆದರೂ ಬಿಲ್ ಗೆ ಸಹಿ ಹಾಕಿಲ್ಲ. ಇದರಿಂದ ನಾವೂ ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹದೇಶ್ವರ್ ಉದ್ಧಟತನ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ, ಎಂಎಲ್ ಎ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನೆ ತಂದರೂ ಏನೂ ಉಪಯೋಗವಾಗಿಲ್ಲ. ಇಒ, ಎಂಎಲ್ ಎ ಹೇಳಿದರೂ ಈ ಅಧಿಕಾರಿ ಸಹಿ ಹಾಕದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು..

ಇಂದೂ‌ ಸಹ ಕಚೇರಿಗೆ ಬಂದು ಕೇಳಿದಾಗಲೂ ನಮ್ಮನ್ನು ನೋಡಿ ಎದ್ನೋ‌ಬಿದ್ನೋ ಎಂದು ಕಚೇರಿಯಿಂದ ಹೊರ ನಡೆದಿದ್ದಾರೆ. ಕೂಡಲೇ ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಿದರು.

ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಒಂದು ವೇಳೆ ಏನಾದರೂ ಲೋಪ ಕಂಡುಬಂದಲ್ಲಿ ಬಿಲ್ ಗೆ ಸಹಿ ಹಾಕಬೇಡಿ, ಸ್ಥಳ ಪರಿಶೀಲನೆಯೂ ಮಾಡದೇ ಬಿಲ್ ಗೆ ಸಹಿ ಹಾಕದೇ ನಮಗೆ ತೊಂದರೆ ಮಾಡುತ್ತಿದ್ದಾರೆ ಎಂದು ದೂರಿದ್ದಲ್ಲದೇ, ಶುಕ್ರವಾರದೊಳಗೆ ಕಡ್ಡಾಯವಾಗಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಗುತ್ತಿಗೆದಾರ ಚಿಕ್ಕನಹಳ್ಳಿ ಹರೀಶ್ ‌ಮಾತನಾಡಿ, ಕಾಮಗಾರಿ ಮುಗಿದು ಮೂರ್ನಾಲ್ಕು ತಿಂಗಳುಗಳು ಕಳೆದರೂ ಬಿಲ್ ಗೆ ಸಹಿ‌ ಹಾಕಿಲ್ಲ. ನಾವು ಜೀವನ ನಡೆಸುವುದು ಹೇಗೆ, ಸಮಸ್ಯೆ ಬಗ್ಗೆ ಹೇಳಲು ಬಂದಾಗ ಕಚೇರಿಯಿಂದ ಪಲಾಯನ ಮಾಡುವುದು ‌ಸರಿಯಲ್ಲ. ಶಾಸಕರು, ಸಚಿವರು ಹೇಳಿದರೂ ಈವರೆಗೂ ಕೂಡ ಪ್ರತಿಕ್ರಿಯೆ ನೀಡುತ್ತಿಲ್ಲ‌. ಇದು ಸರಿಯಲ್ಲ. ಆದಷ್ಟು ಬೇಗ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಸಮಯದ ಅಭಾವದಿಂದ ಕಾಮಗಾರಿಗಳ ಪರಿಶೀಲನೆ ಮಾಡಿ ಸಹಿ ಹಾಕಲು ಆಗಿಲ್ಲ ಹೊರೆತು ಉದ್ದೇಶಪೂರ್ವಕವಾಗಿಲ್ಲ. ಕೂಡಲೇ ಸ್ಥಳ ಪರಿಶೀಲನೆ ಮಾಡಿ ಬಿಲ್ ಗಳಿಗೆ ಸಹಿ ಹಾಕುವಂತೆ ಗಮನಕ್ಕೆ ತರಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಮುನಿರಾಜ್ ತಿಳಿಸಿದರು.

ಈ ವೇಳೆ ನಿರ್ದೇಶಕರಾದ ಕೇಶವಮೂರ್ತಿ, ಹರೀಶ್, ಬೆಳವಂಗಲ ಹರೀಶ್, ಲಕ್ಕಣ್ಣ, ಗಂಗಹನುಮಯ್ಯ, ಭರತ್, ಕೆಂಪೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!