ನ.25ಕ್ಕೆ ‘ಕನ್ನಡ ಜ್ಯೋತಿ ರಥ’ ಆಗಮನ- ನ.26ರಂದು ನಗರದಲ್ಲಿ ಕನ್ನಡ ಜ್ಯೋತಿ ರಥ ಮೆರವಣಿಗೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಕನ್ನಡ ಜ್ಯೋತಿ ರಥ’ ದೊಡ್ಡಬಳ್ಳಾಪುರ ತಾಲ್ಲೂಕಿಗೆ ನ.25 ರಂದು ಸೋಮವಾರ ಆಗಮಿಸುತ್ತದೆ. ನ.26 ರಂದು  ದೊಡ್ಡಬಳ್ಳಾಪುರ ನಗರದಲ್ಲಿ ಕನ್ನಡ ರಥದ ಮೆರವಣಿಗೆ ನಡೆಯಲಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ  ನಡೆದ ಅಖಿಲ ಭಾರತ ಕನ್ನಡ‌ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಯುವ ಕನ್ನಡ ರಥ ಮೆರವಣಿಗೆ ಪೂರ್ವ ಸಿದ್ದತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನ.25 ರಂದು ಸೋಮವಾರ ದೇವನಹಳ್ಳಿ ತಾಲ್ಲೂಕಿನ ಮೂಲಕ ಆಗಮಿಸುವ ಕನ್ನಡ ರಥ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಸಂಚರಿಸಿ ನಂತರ ದೊಡ್ಡಬಳ್ಳಾಪುರ ನಗರದಲ್ಲಿ ವಾಸ್ತವ್ಯ ಇರುತ್ತದೆ. ನ.26 ರಂದು ಮಂಗಳವಾರ ಬೆಳಗ್ಗೆ 9.30 ಗಂಟೆಗೆ ದೊಡ್ಡಬಳ್ಳಾಪುರ ನಗರದಲ್ಲಿ ಕನ್ನಡ ರಥದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಕಲಾ ತಂಡಗಳು, ಕನ್ನಡ ಅಭಿಮಾನಿಗಳು, ಕನ್ನಡಪರ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮಂಡ್ಯದಲ್ಲಿ ಡಿ.20,21 ಮತ್ತು 22 ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ಜ್ಯೋತಿ ರಥವು ಸಂಚರಿಸುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮಸ್ತ ಕನ್ನಡಿಗರನ್ನು ಆಹ್ವಾನಿಸುವ ಉದ್ದೇಶದಿಂದ ಕನ್ನಡ ರಥ ಸಂಚಾರಿಸುತ್ತಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನ.25 ರಂದು ಮಂಗಳವಾರ ಸಂಚರಿಸುವ ಕನ್ನಡ ರಥದ ಮೆರವಣಿಗೆ, ನ.26 ರಂದು ಮಂಗಳವಾರ ಬೆಳಗ್ಗೆ 9.30 ಗಂಟೆಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಸಂಚರಿಸಲಿದೆ. ಬಸವಭವನ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ತಾಲ್ಲೂಕು ಕಛೇರಿ ವೃತ್ತ, ಮಗುವಾಳಪ್ಪ ವೃತ್ತ, ಇಸ್ಲಾಂಪುರ ರಸ್ತೆ, ಕೊಂಗಾಡಿಯಪ್ಪ ಕಾಲೇಜು‌ ರಸ್ತೆ, ಬಯಲುಬಸವಣ್ಣ ದೇವಸ್ಥಾನ, ಕನಕದಾಸ ವೃತ್ತದ ಮೂಲಕ‌ ‌ಮಧುರೆ ಹೋಬಳಿಯ ಕನಸವಾಡಿಗೆ ತೆರಳಲಿದೆ. ಮಧ್ಯಾಹ್ನದ ನಂತರ ನೆಲಮಂಗಲ ತಾಲ್ಲೂಕಿಗೆ ಕನ್ನಡ ರಥವನ್ನು ಬೀಳ್ಕೊಡಲಾಗುತ್ತದೆ ಎಂದರು.

ದೊಡ್ಡಬಳ್ಳಾಪುರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಮತ್ತು ತಹಶಿಲ್ದಾರರ ಅದ ವಿದ್ಯಾ ವಿಭಾ ರಾಥೋಡ್ ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿಗೆ ಆಗಮಿಸುವ ಕನ್ನಡ ರಥವನ್ನು ಸಕಾಲ ಗೌರವದೊಂದಿಗೆ ಸ್ವಾಗತಿಸಲಾಗುವುದು. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸುವರು ಎಂದರು.

ಪೂರ್ವ ಸಿದ್ದತಾ ಸಭೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *