ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಗೋ ಪೂಜೆ ನಡೆಸಲು ಸರ್ಕಾರ ತೀರ್ಮಾನಿಸಲಾಗಿದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ನವೆಂಬರ್ 14ರ ಮಂಗಳವಾರ ಸಂಜೆ 5.30 ರಿಂದ 6.30ರ ಗೋಧೂಳಿ ಲಗ್ನದಲ್ಲಿ ರಾಜ್ಯದ ಎಲ್ಲಾ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಗೋ ಪೂಜೆ ನಡೆಸಬೇಕು ಎಂದು ಆದೇಶ ಪ್ರಕಟಿಸಲಾಗಿದೆ.
ಗೋವುಗಳನ್ನು ಸ್ನಾನ ಮಾಡಿಸಿ ದೇವಾಲಯಕ್ಕೆ ಕರೆತರಬೇಕು. ನಂತರ ಅರಿಶಿಣ, ಕುಂಕುಮ ಹಚ್ಚಿ, ಹೂಗಳಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ನೀಡಿ ಗೋ ಪೂಜೆ ಮಾಡಬೇಕು ಎಂದು ಸೂಚಿಸಲಾಗಿದೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಸಂರಕ್ಷಣೆಯ ಬಗ್ಗೆ ಜಾಗೃತಿ ಉದ್ದೇಶದಿಂದ ದೇವಾಲಯಗಳಲ್ಲಿ ದೀಪಾವಳಿ ಬಲಿಪಾಡ್ಯಮಿ ದಿನದಂದು ಗೋಧೂಳಿ ಲಗ್ನದಲ್ಲಿ ಗೋವುಗಳಿಗೆ ಗೋಗ್ರಾಸವನ್ನು ನೀಡಿ ಗೋ ಪೂಜೆ ಆಯೋಜಿಸಲಾಗುತ್ತಿದೆ.
ಗೋ ಪೂಜೆ ಕುರಿತು ಭಕ್ತಾದಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ದೇವಾಲಯದ ನೋಟಿಸ್ ಬೋರ್ಡ್‌ನಲ್ಲಿ ಮಾಹಿತಿ ನೀಡಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಗೋ ಪೂಜೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಬೇಕು ಎಂದು ದೇವಾಲಯದ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹಿಂದೂ ಧರ್ಮದಲ್ಲಿ ಗೋವುಗಳಿಗೆ ಮಾತೃ ಸ್ಥಾನವನ್ನು ಕೊಡಲಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಗೋ ಪೂಜೆ ಅತ್ಯಂತ ಪ್ರಮುಖವಾದ ಪೂಜೆಗಳಲ್ಲೊಂದು. ದೀಪಾವಳಿ ಹಬ್ಬದಲ್ಲಿ ಗೋಪೂಜೆಗೆ ವಿಶೇಷ ಪ್ರಾಧಾನ್ಯತೆ ಇದೆ.
ಗೋ ಮಾತೆಯಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆಂದು ನಂಬಲಾಗುತ್ತದೆ. ಗೋ ಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಗೋ ಪೂಜೆ ಮಾಡಲು ನಿಯಮಗಳು ಸಹ ಇವೆ. ರಾಜ್ಯದ ಕಾಂಗ್ರೆಸ್ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೋ ಪೂಜೆ ಮಾಡಲು ಆದೇಶ ಹೊರಡಿಸಿದೆ.