ಪ್ರಜಾಪ್ರಭುತ್ವದ ಸಂಸ್ಥೆಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು. ಹಾಗಾದಾಗ ಮಾತ್ರ ಸಮಾಜದ ಸಮಸ್ಯೆ ಬಗೆಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕಾನೂನು ಬಲ್ಲ ವಕೀಲರ ಜವಾಬ್ದಾರಿ ಹೆಚ್ಚಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ದಿನಾಚರಣೆ ಹಾಗೂ ವಕೀಲರ ವೇದಿಕೆಯ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕು. ಯಾವುದೇ ಕಾರಣಕ್ಕೂ ಅನ್ಯಾಯದ ಪರ ನಿಲ್ಲಬಾರದು. ಸಮಾಜದಲ್ಲಿ ಬದಲಾವಣೆ ತರಬೇಕಾದ ನಿಟ್ಟಿನಲ್ಲಿ ವಕೀಲರು ಪ್ರಯತ್ನ ಮಾಡಬೇಕು ಎಂದರು.
‘ವಕೀಲರ ರಕ್ಷಣಾ ಕಾಯ್ದೆ ಬಹು ದಿನಗಳಿಂದ ಬೇಡಿಕೆಯಲ್ಲಿ ಇದ್ದಂತ ವಿಚಾರ. ವಕೀಲರಿಗೆ ರಕ್ಷಣೆ ಅಗತ್ಯವಿದ್ದು, ಅದಕ್ಕೊಂದು ಕಾನೂನಿನ ಚೌಕಟ್ಟನ್ನು ಒದಗಿಸಿಕೊಡಲು ಶಾಸಕಾಂಗ ಪ್ರಯತ್ನ ಮಾಡಿದ್ದು, ಅದರ ಫಲಶ್ರುತಿಯಾಗಿಯೇ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಬಂದಿರುವುದು ಎಂದು ಹೇಳಿದರು.
ಹಿಂದೆ ವಕೀಲರಿಗೆ ಭರವಸೆ ನೀಡಿದ್ದಂತೆ ಕಾಯ್ದೆ ರೂಪಿಸಿದ್ದೇವೆ. ಇಂದಿನ ದಿನಗಳಲ್ಲಿ ವಕೀಲರು ಬೆದರಿಕೆ, ಕಿರುಕುಳ, ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವಂತಹ ಅನೇಕ ಆತಂಕಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಲು ಒಂದು ಕಾಯ್ದೆ ಅತ್ಯಂತ ಅವಶ್ಯ ಎಂದು ಮನಗಂಡು ವಿಧಾನಸಭೆ, ಪರಿಷತ್ ಎರಡೂ ಕಡೆ ಮಂಡಿಸಿ ಅಂಗೀಕಾರವಾಗಿ ರಾಜ್ಯಪಾಲರ ಅಂಕಿತ ಪಡೆದು ಈಗ ಕಾಯ್ದೆಯಾಗಿದೆ. ಈ ಕಾಯ್ದೆಯಿಂದಾಗಿ ವಕೀಲರಿಗೆ ರಕ್ಷಣೆ ಸಿಕ್ಕಿದೆ. ಕಾಯ್ದೆಯಿಂದ ಕೇವಲ ನಿಮ್ಮ ರಕ್ಷಣೆ ಆದರೆ ಸಾಲದು ನಾಡಿನ ಜನರ, ನ್ಯಾಯ ಕೇಳಿ ಬರುವವರ ರಕ್ಷಣೆ ಆಗಬೇಕು ಎಂದು ತಿಳಿಸಿದರು.
ಕೇವಲ ಸಂವಿಧಾನ ಪರಿಣಿತರೇ ಸಂವಿಧಾನವನ್ನು ಓದಬೇಕೆಂದೇನೂ ಇಲ್ಲ. ಆ ಭಾವನೆ ಬಿಟ್ಟು ವಕೀಲ ವೃತ್ತಿಯಲ್ಲಿ ಇರುವ ಎಲ್ಲರೂ, ಪ್ರತಿಯೊಬ್ಬರೂ ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಪಾಲಿಸಬೇಕು. ನಮ್ಮದು ಅತ್ಯಂತ ಶ್ರೇಷ್ಠ ಸಂವಿಧಾನ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ, ನಮ್ಮ ಸಮಾಜಕ್ಕೆ ಅನುಗುಣವಾದ ಸಂವಿಧಾನ ರಚಿಸಿಕೊಟ್ಟಿದ್ದಾರೆ ಎಂದರು.
ನ್ಯಾಯ ಪಡೆಯುವುದು ಈಗ ದುಬಾರಿಯಾಗಿದ್ದು, ಅನೇಕರಿಗೆ ಹಣವಿಲ್ಲದೆ ನ್ಯಾಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ಅನ್ಯಾಯವಾಗುತ್ತದೆ. ಹಣ ಮಾಡುವುದು ವಕೀಲ ವೃತ್ತಿಯ ಉದ್ದೇಶವಲ್ಲ, ನ್ಯಾಯ ಕೊಡಿಸುವುದು ಉದ್ದೇಶವಾಗಬೇಕು. ತ್ವರಿತವಾಗಿ ನ್ಯಾಯ ಸಿಗುವ ರೀತಿ ಮಾಡಬೇಕು. ನ್ಯಾಯ ವಿಳಂಬವಾದರೆ, ನ್ಯಾಯವನ್ನು ನಿರಾಕರಿಸಿದಂತೆ ಎಂಬ ಮಾತನ್ನು ನೆನಪಿಡಬೇಕು. ಇದು ವಕೀಲರ ದಿನನಿತ್ಯದ ಮಂತ್ರವಾಗಬೇಕು. ವಕೀಲರು ಮನಸ್ಸು ಮಾಡಿದರೆ ವಿಳಂಬವಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.
ಸತ್ಯ, ಸತ್ವ, ಸಾಕ್ಷ್ಯಾಧಾರಗಳಿಲ್ಲದ ಪ್ರಕರಣಗಳನ್ನು ವರ್ಷಾನುಗಟ್ಟಲೆ ಎಳೆಯಬಾರದು. ಇದು ವೃತ್ತಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಶಕ್ತರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು. ಕಕ್ಷಿದಾರರ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ನೋಡಿಕೊಂಡು ಶುಲ್ಕ ಪಡೆಯಬೇಕು ಎಂದರು.
ಸರ್ಕಾರಿ ವಕೀಲರು ಹೆಚ್ಚು ಮಾತನಾಡುವುದಿಲ್ಲ ಎಂಬ ಆರೋಪವಿದೆ. ಪ್ರಕರಣವನ್ನು ಚೆನ್ನಾಗಿ ಓದಿ, ಸರಿಯಾದ ರೀತಿಯಲ್ಲಿ ನ್ಯಾಯಾಧೀಶರ ಮುಂದೆ ಮಂಡಿಸಬೇಕು ಹಾಗೂ ಕಕ್ಷಿದಾರರ ಹಕ್ಕನ್ನು ರಕ್ಷಿಸಬೇಕು.
ಬೆಂಗಳೂರಿನ ವಕೀಲರ ಸಂಘ ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡ ಸಂಘವಾಗಿದ್ದು, 25 ಸಾವಿರ ಸದಸ್ಯರನ್ನು ಹೊಂದಿರುವುದು ಸಣ್ಣ ಸಂಗತಿಯೇನಲ್ಲ ಎಂದು ತಿಳಿಸಿದರು.
ವಕೀಲ ಸಂಘದವರು ಸಲ್ಲಿಸಿರುವ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಕಲ್ಯಾಣ ನಿಧಿಗೆ ಅನುದಾನವನ್ನು ಹೆಚ್ಚಿಸಲಾಗುವುದು. ಸರ್ವೋಚ್ಚ ನ್ಯಾಯಾಲಯದ ಪೀಠದ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪ್ರತಿನಿತ್ಯ ಕೋರ್ಟ್ ಕಲಾಪಗಳಲ್ಲೇ ತೊಡಗಿರುವ ವಕೀಲರಿಗೆ ಬೇಸಿಗೆ ರಜೆ ಸಂಜೀವಿನಿಯಂತೆ. ಮೇ 2ರಿಂದ ಶುರುವಾಗುವ ಬೇಸಿಗೆ ರಜೆಯನ್ನು ಕುಟುಂಬದೊಡನೆ ಸುಖಕರವಾಗಿ ಕಳೆಯಿರಿ ಎಂದು ಹೇಳಿದರು.