ನ್ಯಾಯಾಲಯ ಆದೇಶ ಧಿಕ್ಕರಿಸಿ ಜಾಗ ಒತ್ತುವರಿ ಪ್ರತಿಭಟನೆಗೆ ಅನುಮತಿ ನಿರಾಕರಣೆ ಖಂಡನೀಯ

ಕೋಲಾರ: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಿಳಿಸಿರುವ ನ್ಯಾಯಾಲಯ ಆದೇಶವನ್ನೂ ಧಿಕ್ಕರಿಸಿ, ವಾಲ್ಮೀಕಿ ಭವನಕ್ಕೆ ಸೇರಿದ ಜಾಗವನ್ನು ಸ್ವಜನಪಕ್ಷಪಾತದ ಮೂಲಕ ನಸೀರ್ ಅಹಮದ್ ಸೂಚನೆಯಂತೆ ಕಲ್ಯಾಣ ಮಂಟಪದ ಮಾಲೀಕ ನ್ಯಾಮತ್‌ಗೆ ನೀಡುವ ಜಿಲ್ಲಾಧಿಕಾರಿ ಯತ್ನ ಖಂಡಿಸಿ ಅ.15 ರಿಂದ ನಡೆಸಬೇಕೆಂದಿದ್ದ ಪ್ರತಿಭಟನೆಗೂ ಅನುಮತಿ ನಿರಾಕರಿಸಿದ್ದಾರೆ ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಕೆ.ಆನಂದ್‌ಕುಮಾರ್, ಹಿಂದಿನ ಜಿಲ್ಲಾಧಿಕಾರಿ ಮಂಜುನಾಥ್ ಅವರೇ ಒತ್ತುವರಿಯಾಗಿರುವುದು ನಿಜ ಎಂದು ತಿಳಿಸಿ ತೆರವಿಗೂ ಮುಂದಾಗಿದ್ದರು ಆದರೆ ಈಗಿನ ಜಿಲ್ಲಾಧಿಕಾರಿ ಕಲ್ಯಾಣ ಮಂಟಪ ಮಾಲೀಕರು ಒತ್ತುವರಿ ಮಾಡಿರುವ ಜಾಗದ ಒತ್ತುವರಿಯನ್ನು ಸಕ್ರಮಗೊಳಿಸಲು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿ, ವಾಲ್ಮೀಕಿ ಜಯಂತಿಗೆ ನಮ್ಮ ವಿರೋಧವಿಲ್ಲ ಆದರೆ ಸರ್ಕಾರ ಭವನಕ್ಕಾಗಿ ನೀಡಿರುವ 31 ಗುಂಟೆ ಜಮೀನು ಉಳಿಸಿಕೊಳ್ಳಲು ಎಂತಹ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಲ್ಯಾಣಮಂಟಪ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಪಟ್ಟಭದ್ರ ಹಿತಾಸಕ್ತಿಗಳು ಈ ಯತ್ನ ನಡೆಸಿದ್ದು, ಈ ಸಂಬಂಧ ನಮ್ಮ ಒಕ್ಕೂಟದಿಂದ ಪ್ರತಿಭಟನೆ ಜತೆಗೆ ಕಾನೂನು ಹೋರಾಟವನ್ನೂ ನಡೆಸುವುದಾಗಿ ಎಚ್ಚರಿಸಿದರು.

ನಮ್ಮ ಹೋರಾಟಕ್ಕೆ ಅನುಮತಿ ನೀಡದೇ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದ ಅವರು, ವಾಲ್ಮೀಕಿವೃತ್ತದಲ್ಲಿ ನಡೆಯುವ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸುತ್ತೇವೆ, ಜಿಲ್ಲಾಡಳಿತದ ಕಾರ್ಯಕ್ರಮದಿಂದ ದೂರವಿದ್ದು ಜಯಂತಿ ನಂತರ ಹೋರಾಟ ನಡೆಸುವುದು ನಿಶ್ಚಿತ ಎಂದು ತಿಳಿಸಿದರು.

ಅ.೧೫ ರಿಂದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಅನುಮತಿ ನೀಡಲು ಕೋರಿ ಗಲ್‌ಪೇಟೆ ಠಾಣೆಗೆ ಮನವಿ ಸಲ್ಲಿಸಿದ್ದೇವು ಆದರೆ ಮೂರು ದಿನ ನಿಧಾನಿಸಿ ವಾಲ್ಮೀಕಿ ಜಯಂತಿಯ ನೆಪವೊಡ್ಡಿ ಅನುಮತಿ ನಿರಾಕರಿಸಿದ್ದಾರೆ, ಒಂದು ಹಂತದಲ್ಲಿ ಡಿಸಿಯನ್ನು ಕೇಳಿ ಎಂದು ಪೊಲೀಸರು ಸೂಚಿಸಿದರು ಎಂದು ಆರೋಪಿಸಿದ ಅವರು, ವಿಧಾನಪರಿಷತ್ ಸದಸ್ಯ ಅನಿಲ್‌ಕುಮಾರ್ ಬಳಿ ಹೋದರೆ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‌ರ ಜತೆ ಮಾತನಾಡಲು ಸೂಚಿಸಿದರು ಎಂದು ಕಿಡಿಕಾರಿದರು.

ಖಾಸಗಿ ಕಲ್ಯಾಣ ಮಂಟಪದ ಮಾಲೀಕರು ವಾಲ್ಮೀಕಿ ಭವನದ ಎರಡೂ ಕಾಲು ಗುಂಟೆಯಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಇದೀಗ ಅದರ ಜತೆಗೆ ಭವನಕ್ಕೆ ಸೇರಿದ 10 ಗುಂಟೆ ಸೇರಿಸಿ ಜಿಲ್ಲಾಡಳಿತದ ಹಣದಿಂದಲೇ ಕಾಂಪೌಂಡ್ ನಿರ್ಮಿಸಿಕೊಟ್ಟು ಸಮುದಾಯಕ್ಕೆ ವಂಚನೆ ಮಾಡಲು ಹೊರಟಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದರು.

ಸಮುದಾಯದ ಮುಖಂಡ ನರಸಿಂಹಯ್ಯ ಮಾತನಾಡಿ, ನಗರದ ಕೋಡಿಕಣ್ಣೂರು ರಸ್ತೆಯಲ್ಲಿ ಸರ್ಕಾರದಿಂದ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನ ಜಾಗವನ್ನು ಪಕ್ಕದ ಕಲ್ಯಾಣ ಮಂಟಪದ ಮಾಲೀಕರು ಅಕ್ರಮ ಒತ್ತುವರಿ ಮಾಡಿಕೊಟ್ಟು ಕಟ್ಟಡ ನಿರ್ಮಿಸಿಕೊಂಡಿದ್ದಾರೆ, ಈ ಹಿಂದೆ 2018 ರಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಜೆ.ಮಂಜುನಾಥ್ ಅವರು ಅಳತೆ ಮಾಡಿಸಿ ಒತ್ತುವರಿ ಮಾಡಿರುವುದನ್ನು ಗುರುತಿಸಿ ತೆರವು ಕಾರ್ಯಾಚರಣೆ ನಡೆಸಿದಾಗ ಕಲ್ಯಾಣ ಮಂಟಪ ಮಾಲೀಕರು ಒಂದು ವಾರ ಸಮಯಾವಕಾಶ ಕೋರಿ ಆನಂತರ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದರು ಎಂದು ತಿಳಿಸಿದರು.

ಮುಖಂಡ ಮಾದೇಶ್ ಮಾತನಾಡಿ, ನ್ಯಾಯಾಲಯದ ಪ್ರಕರಣ ಸಂಖ್ಯೆ ಒ.ಎಸ್.31/2019 ಮತ್ತು ಎಂ.ಎ16/2020 ರAತೆ ಎರಡೂ ಪಕ್ಷದವರು ಪ್ರಕರಣ ಇತ್ಯರ್ಥವಾಗುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶ ಮಾಡಿದೆ.
ನ್ಯಾಯಲಯದ ಆದೇಶವಿದ್ದರೂ ಜಿಲ್ಲಾಡಳಿತ ಕಲ್ಯಾಣ ಮಂಟಪದ ಮಾಲೀಕರ ಜತೆ ಶಾಮೀಲಾಗಿ ಒತ್ತುವರಿ ಆಗಿರುವ ಸ್ಥಳವನ್ನು ತೆರವು ಮಾಡದೇ ಕಲ್ಯಾಣ ಮಂಟಪ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದು ಖಂಡನೀಯ ಎಂದರು.

ಕೂಡಲೇ ಡಿಸಿಯವರು ತಾವು ಮಾಡುತ್ತಿರುವ ತಪ್ಪು ತಿದ್ದಿಕೊಂಡು ವಾಲ್ಮೀಕಿ ಭವನದ ಜಾಗ ಉಳಿಸಲು ಕ್ರಮಕೈಗೊಳ್ಳಬೇಕು, ಇಲ್ಲವಾದಲ್ಲಿ ಇದು ಸ್ವಜನಪಕ್ಷಪಾತವಾಗುತ್ತದೆ ಎಂದು ಎಚ್ಚರಿಸುತ್ತಾ ಒಕ್ಕೂಟ ಈ ಸಂಬಂಧ ಎಂತಹ ಹೋರಾಟಕ್ಕೂ ಸಿದ್ದ ಎಂದರು.

ಸುದ್ದಿಗೋಷ್ಟಿಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರಾದ ನಾಗರಾಜ್, ಚಲಪತಿ, ತಿಮ್ಮಣ್ಣ, ಕೆಜಿಐಡಿ ನಾಗರಾಜ್, ಕೆಎಸ್‌ಆರ್‌ಟಿಸಿ ಮುನಿಯಪ್ಪ,ಬಾಬು, ಮುನೆಯ್ಯ, ಐತರಾಸನಹಳ್ಳಿ ನರಸಿಂಹಯ್ಯ, ಗಿರೀಶ್, ಓಬಟ್ಟಿ ಮೂರ್ತಿ, ವೆಂಕಟೇಶ್, ನವೀನ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *