ಕೋಲಾರ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಗೆ ಕೋಲಾರದಲ್ಲಿ ಜ.27 ರಂದು ಸೋಮವಾರ ಅಭಿನಂದನೆ ಹಾಗೂ ಉತ್ತಮ ಶಿಕ್ಷಕಿಯರಿಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಳ್ಳಲಾಗಿದೆ.
ಎರಡನೇ ಬಾರಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹಾಗೂ ರಾಜ್ಯದ ನೂತನ ಪದಾಧಿಕಾರಿಗಳಿಗೆ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಅಜಯ್‌ಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕಿಯರಿಗೆ ಸಾವಿತ್ರಿ ಬಾಯಿಪುಲೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಅಧ್ಯಕ್ಷ ಸಿಎಸ್.ಷಡಕ್ಷರಿ ಅವರನ್ನು ನಗರದ ಮೆಕ್ಕೆ ವೃತ್ತದಿಂದ ಡೊಳ್ಳು ಕುಣಿತದ ಮೂಲಕ ಮೆರವಣಿಗೆಯಲ್ಲಿ ಕಾರ್ಯಕ್ರಮದ ವೇದಿಕೆಗೆ ಕರೆತರಲಾಗುವುದು. ನೂತನ ರಾಜ್ಯಾಧ್ಯಕ್ಷರನ್ನು ಅದ್ದೂರಿಯಾಗಿ ಸ್ವಾಗತಿಸುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಮತ್ತು ಜಿಲ್ಲೆಯ ವೃಂದ ಸಂಘಗಳ ಪದಾಧಿಕಾರಿಗಳು ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಗಿರಿಗೌಡ, ಖಜಾಂಚಿ ವಿ.ವಿ.ಶಿವರುದ್ರಯ್ಯ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ ಬಳ್ಳಾರಿ, ಗೌರವಾಧ್ಯಕ್ಷ ಎಸ್.ಬಸವರಾಜು, ಹಿರಿಯ ಉಪಾಧ್ಯಕ್ಷ ನಾಗರಾಜ ಆರ್.ಜುಮ್ಮನ್ನ ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಎ.ಅಜಯ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.