ಪತ್ರಕರ್ತರು ಸಮಾಜವನ್ನು ತಿದ್ದುವ ಸೇನಾನಿಗಳಾಗಿದ್ದು, ನಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಮೌಲ್ಯಗಳನ್ನು ಅಳವಡಿಸಿಕೊಂಡು ಕೆಲಸ ಮಾಡಬೇಕು. ಕಾರ್ಯನಿರತ ಪತ್ರಕರ್ತರ ಸಂಘ ಯಶಸ್ವಿಯಾಗಿ 90 ವರ್ಷಗಳನ್ನು ಪೂರೈಸಿ ತನ್ನದೇ ಆದ ಮೈಲಿಗಲ್ಲನ್ನು ಸ್ಥಾಪಿಸಿದೆ. ಡಿ ವಿ ಗುಂಡಪ್ಪನವರು ಸ್ಥಾಪಿಸಿ ಬಿಟ್ಟು ಹೋಗಿರುವ ಈ ಸಂಘವನ್ನು ನಾವು ಕೂಡ ಯಾವುದೇ ರೀತಿಯ ಕಳಂಕ ಬಾರದಂತೆ ಯಶಸ್ವಿಯಾಗಿ ಮುನ್ನಡೆಸಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಹಾಗೂ ದೊಡ್ಡಬಳ್ಳಾಪುರ ತಾಲೂಕು ಕಾರ್ಯನಿರತಾ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕು ಸಂಘಗಳಿಗೆ ನೂತನವಾಗಿ ಆಯ್ಕೆಯಾಗುವ ಪದಾಧಿಕಾರಿಗಳು ಸಂಘದ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಏನೇ ಮನಸ್ತಾಪ ಇದ್ದರೂ ಕೂಡ ಅಲ್ಲೇ ಸಮಿತಿಯೊಳಗೆ ಬಗೆಹರಿಸಿಕೊಂಡು ಸಂಘದ ಹಾಗೂ ಸದಸ್ಯರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ನೈಜ ಪತ್ರಕರ್ತರನ್ನು ಗುರುತಿಸಿ
ಪ್ರಮುಖವಾಗಿ ಸಂಘದಲ್ಲಿ ಸದಸ್ಯತ್ವ ನೀಡುವ ಸಂದರ್ಭದಲ್ಲಿ ನೈಜ ಪತ್ರಕರ್ತರಿಗೆ ಅವಕಾಶ ನೀಡುವ ಕೆಲಸ ನೂತನ ಪದಾಧಿಕಾರಿಗಳಿಂದ ಆಗಬೇಕು. ಪತ್ರಿಕಾ ಕೆಲಸವನ್ನೇ ಮಾಡದೆ, ಪತ್ರಿಕೆಯನ್ನೇ ಮುದ್ರಣ ಮಾಡದೆ ಇರುವ ವ್ಯಕ್ತಿಗಳಿಗೆ ಸದಸ್ಯತ್ವ ನೀಡದೆ ಸಂಘದ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ಸಂಘವನ್ನು ಮುನ್ನಡೆಸಬೇಕು. ಪದಾಧಿಕಾರಿಗಳಾದವರು ಸಂಘದ ಸದಸ್ಯರಿಂದ ಬೆರಳು ತೋರಿಸಿಕೊಳ್ಳುವ ಅಷ್ಟರಮಟ್ಟಿಗೆ ಹೋಗಬಾರದು. ಈ ನಿಟ್ಟಿನಲ್ಲಿ ಸಾಕಷ್ಟು ಜಾಗರೂಕರಾಗಿ ಕೆಲಸ ಮಾಡಿ ಎಂದು ಕಿವಿ ಮಾತನ್ನ ಹೇಳಿದರು.
ಈ ವೇಳೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿಸಿ ಲೋಕೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ಖಜಾಂಚಿ ಶಾಂತ ಮೂರ್ತಿ, ಉಪಾಧ್ಯಕ್ಷ ಮುರಳಿ ಮೋಹನ್, ನಿರ್ದೇಶಕರಾದ ಸತೀಶ್, ರಮೇಶ್ ದೊಡ್ಡಬಳ್ಳಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ್ ಡಿ ಉಪ್ಪಾರ್, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಪುರುಷೋತ್ತಮ ಗೌಡ, ಉಪಾಧ್ಯಕ್ಷ ಕೊತ್ತೂರಪ್ಪ, ನಿರ್ದೇಶಕರಾದ ತೆರದಾಳ ಶ್ರೀನಿವಾಸ್, ತಾಲ್ಲೂಕು ಖಜಾಂಚಿ.ಕೃಷ್ಣಮೂರ್ತಿ, ಉಮೇಶ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.