ನೇಹಾ ಹಿರೇಮಠ ಹತ್ಯೆ ಖಂಡಿಸಿ ಶಾಸಕ ಧೀರಜ್ ಮುನಿರಾಜ್ ನೇತೃತ್ವದಲ್ಲಿ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯಾದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ವಿರೋಧಿ, ಹಿಂದೂ ವಿರೋಧಿ ಚಟುವಟಿಕೆ ಹೆಚ್ಚಾಗಿ ಶಾಂತಿ ಸೌಹಾರ್ದತೆ ಕದಡುತ್ತಿದೆ. ಭಯೋತ್ಪಾದಕತೆ ಹೆಚ್ಚಾಗುತ್ತಿದೆ. ಹಿಂದೂಗಳ ಮೇಲೆ ದಬ್ಬಾಳಿಕೆ, ಕೊಲೆಯಂತಹ ಪ್ರಕರಣಗಳು ಮರುಕಳಿಸುತ್ತಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಧೀರಜ್ ಮುನಿರಾಜ್ ಕಿಡಿಕಾರಿದರು.
ನೇಹಾಳನ್ನು ಹತ್ಯೆ ಮಾಡಿದ ಕೊಲೆಗಾರನನ್ನು ಸಾರ್ವಜನಿಕವಾಗಿ ಶಿಕ್ಷೆ ನೀಡಬೇಕು. ರಾಜ್ಯದಲ್ಲಿ ಇಂತಹ ಹತ್ಯೆಗಳು ಮರುಕಳಿಸದಂತೆ ಸರ್ಕಾರ ಕ್ರಮವಹಿಸಬೇಕು. ಹೆಣ್ಣು ಮಕ್ಕಳ ಗೌರವ ಉಳಿಸುವವರೆಗೂ ಬಿಜೆಪಿ ಪ್ರತಿಭಟನೆ ನಡೆಸುತ್ತಲೇ ಇರುತ್ತದೆ. ಇದರಲ್ಲಿ ನಾವು ರಾಜಕೀಯ ನಡೆಸುವುದಿಲ್ಲ. ಮಹಿಳೆಯರ ಗೌರವಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಲವ್ ಜಿಹಾದ್, ಬಲವಂತದ ಮತಾಂತರ ಸೇರಿದಂತೆ ಹಿಂದೂ ವಿರೋಧಿ ಚಟುವಟಿಕೆಗಳು ಉತ್ತರ ಕರ್ನಾಟಕಕ್ಕೂ ವ್ಯಾಪಿಸಿದೆ. ಹಿಂದೂ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸೇರಿದಂತೆ ಎಲ್ಲಾ ರೀತಿಯಲ್ಲಿ ಸಬಲರಾಗಬೇಕೆಂದು ಬಿಜೆಪಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಯಾವ ಯೋಜನೆ ಜಾರಿ ಮಾಡುತ್ತಿಲ್ಲ ಎಂದು ಗುಡುಗಿದರು.
ಕೇರಳದಲ್ಲಿ 70 ಸಾವಿರಕ್ಕೂ ಹೆಚ್ಚು ಹಿಂದೂ ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. ಪತ್ತೆ ಹಚ್ಚುವುದಕ್ಕೆ ಪೊಲೀಸರಿಗೂ ಸಾದ್ಯವಾಗಿಲ್ಲ. ನಾಳೆ ನಮ್ಮ ಮನೆ ಹೆಣ್ಣು ಮಕ್ಕಳಿಗೆ ಈ ಪರಿಸ್ಥಿತಿ ಬರದಂತೆ ತಡೆಯಬೇಕು ಎಂದರು.
ಈ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಬಜರಂಗದಳ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.