ದೊಡ್ಡಬಳ್ಳಾಪುರ ನಗರ ನೇಯ್ಗೆ ಉದ್ಯಮಕ್ಕೆ ಪ್ರಸಿದ್ಧಿ ಪಡೆದ ಊರು. ದೊಡ್ಡಬಳ್ಳಾಪುರ ನಗರ ಹಾಗೂ ನಗರದ ಸುತ್ತಮುತ್ತ ಪ್ರದೇಶದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಗ್ಗಗಳಿದ್ದು, 35 ಸಾವಿರಕ್ಕೂ ಹೆಚ್ಚು ಮಂದಿ ನೇಯ್ಗೆ ಉದ್ಯಮಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ತಯಾರಾಗುವ ಸೀರೆಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ.
ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಗಳ ನಡೆಯಿಂದ ನೇಕಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಕಾರ್ಮಿಕರ ಸಮಸ್ಯೆ, ಮಾರುಕಟ್ಟೆ ಸಮಸ್ಯೆ, ಸಬ್ಸಿಡಿ ಸ್ಥಗಿತ, ವಿವಿಧ ಸೌಲಭ್ಯಗಳ ಸ್ಥಗಿತ, ವಿದ್ಯುತ್ ದರ ಏರಿಕೆ ಸೇರಿದಂತೆ ಇತರೆ ಸಮಸ್ಯೆಗಳಿರುವ ನೇಕಾರಿಕೆಗೆ ಈಗ ಜಿಎಸ್‌ಟಿ ಹೊರೆಯಾಗಿ ನೇಕಾರರನ್ನು ಕಂಗಾಲಾಗಿಸಿದೆ.
ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಮತ್ತು ದರ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಸದಸ್ಯರು ಸರ್ಕಾರಕ್ಕೆ ಒತ್ತಾಯಿಸಿದರು.
ನಗರದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ವೆಂಕಟೇಶ್, ಪ್ರತಿ ಯೂನಿಟ್ ವಿದ್ಯುತ್ ದರವನ್ನು ನಾಲ್ಕು ರೂಪಾಯಿಗಳಿಂದ ಏಳು ರುಪಾಯಿಗೆ ಏರಿಸಿ ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಿಸಲಾಗಿದೆ, ಐದರಿಂದ ಆರು ಸ್ಲಾಬ್ ಗಳಲ್ಲಿ ಏರಿಕೆಯಾಗಬೇಕಿದ್ದ ವಿದ್ಯುತ್ ದರ ಎರಡು ಹಂತಗಳಿಗೆ ಬದಲಾಯಿಸಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದರು.
ವಿದ್ಯುತ್ ದರ ಪಟ್ಟಿಯಲ್ಲಿ ಹೆಸರಿಲ್ಲದೇ ಹೆಚ್ಚಳ ಮಾಡಿರುವ ಶುಲ್ಕವನ್ನು ಕೂಡಲೆ ಕಡಿಮೆ ಮಾಡಬೇಕು, ಹೊಸ ಲೆಕ್ಕದ ಪ್ರಕಾರ ವಿದ್ಯುತ್ ದರ ನಿಗದಿ ಪಡಿಸದೇ ಹಳೆ ದರ ಪಟ್ಟಿ ಪ್ರಕಾರ ವಿದ್ಯುತ್ ಶುಲ್ಕ ಪಡೆಯಬೇಕು ಮತ್ತು ಈಗಾಗಲೇ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಉಚಿತ 200 ಯೂನಿಟ್ ವಿದ್ಯುತ್ ಅತಿ ಶೀಘ್ರವಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಹಿಂದಿನ ಬಿಜೆಪಿ ಸರ್ಕಾರ ವಿದ್ಯುತ್ ನೇಕಾರರಿಗೆ ಐಡಿ ಕಾರ್ಡ್ ವಿತರಣೆ ಮಾಡುವ ಭರವಸೆಯನ್ನು ನೀಡಿತ್ತು, ನೇಕಾರರ ಸೆನ್ಸಸ್ ಕಾರ್ಯ ನಡೆಸಿತ್ತು, ಕಳೆದ ಒಂದು ವರ್ಷದಿಂದ ಐಡಿ ಕಾರ್ಡ್ ವಿತರಣೆ ಮಾಡದೇ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ, ನೇಕಾರರಿಗೆ ಗುರುತಿನ ಚೀಟಿ ವಿತರಣೆಯಾದರೇ ಸರ್ಕಾರದಿಂದ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ನೀಡುತ್ತಿರುವ ಎಲ್ಲಾ ಸೌಕರ್ಯಗಳನ್ನು ನೇಕಾರರ ಕುಟುಂಬಸ್ಥರು ಪಡೆಯಲು ಅರ್ಹರಾಗಿರುತ್ತೇವೆ ಎಂದರು.
ಈ ಕೂಡಲೆ ಸರ್ಕಾರ ವಿದ್ಯುತ್ ದರ ಇಳಿಕೆ ಸೇರಿದಂತೆ ನೇಕಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕಿನ ಬೇರೆ ಬೇರೆ ನೇಕಾರ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ನೇಕಾರರ ಒಕ್ಕೂಟದೊಂದಿಗೆ ಪ್ರಬಲವಾದ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ವೇಳೆ ಶ್ರೀನಿವಾಸ್ ಸುರೇಶ್, ಮಲ್ಲೇಶ್, ಚೌಡಯ್ಯ ರಘುಕುಮಾರ್ ರಾಜಶೇಖರ್, ಇದ್ರೀಸ್, ರಮಣ, ಸಹ ಕಾರ್ಯದರ್ಶಿ ಮುನಿರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.