ನೇಕಾರ ಸಮ್ಮಾನ್ ಅರ್ಜಿ ಸಲ್ಲಿಕೆಗೆ ಅ.10ಕ್ಕೆ ಕೊನೆ ದಿನ

ದೊಡ್ಡಬಳ್ಳಾಪುರ: ನೇಕಾರ ಸಮ್ಮಾನ್ ಯೋಜನೆಯಲ್ಲಿ ಪ್ರತಿಯೊಬ್ಬ ನೇಕಾರರು ವಾರ್ಷಿಕ ₹5,000 ಆರ್ಥಿಕ ನೆರವು ಪಡೆಯಲು ಪ್ರತಿ ವರ್ಷವು ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕಿ ಸೌಮ್ಯ ಹೇಳಿದರು.

ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ನಡೆದ ಸಭೆಯಲ್ಲಿ ನೇಕಾರರ ಸಮ್ಮಾನ್ ಯೋಜನೆ ಕುರಿತು ಮಾಹಿತಿ ನೀಡಿದರು.

ಈ ಹಿಂದೆ ಅರ್ಜಿ ಸಲ್ಲಿಸಿ ನೇಕಾರ ಸಮ್ಮಾನ್ ಯೋಜನೆಯಲ್ಲಿ ಹಣ ಪಡೆದಿದ್ದರು ಸಹ ಈಗ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕು. ನೇಯ್ಗೆ ಕೆಲಸ ಮಾಡುತ್ತಿರುವ ಕಾರ್ಮಿಕರು ತಾವು ಕೆಲಸ ಮಾಡುತ್ತಿರುವ ಕುರಿತಂತೆ ಪ್ರಮಾಣ ಪತ್ರ, ಕಾರ್ಮಿಕ ಇಲಾಖೆಯಿಂದ ಪಡೆದ ಉದ್ಯೋಗ ಆಧಾರ್ ಕಾರ್ಡ್,ಬ್ಯಾಂಕ್ ಖಾತೆ ಸಂಖ್ಯೆ, ಪಡಿತರ ಚೀಟಿ ಹಾಗೂ ಆಧಾರ್ ಸಂಖ್ಯೆಯನ್ನು ಅರ್ಜಿಯಲ್ಲಿ ನಮೋದಿಸಬೇಕು ಎಂದರು.

ವಿದ್ಯುತ್ ಮಗ್ಗಗಳನ್ನು ಹೊಂದಿರುವ ಮಾಲೀಕರು ತಮ್ಮ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಪ್ರಮಾಣ ಪತ್ರ ನೀಡುವುದರಿಂದ ಯಾವುದೇ ರೀತಿಯ ತೊಂದರೆಯು ಇಲ್ಲ. ಕೆಲವರು ವಿನಾಕಾರಣ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ನೇಕಾರರು ಅಲ್ಲದವರು ಅರ್ಜಿ ಸಲ್ಲಿಸಿ ಹಣ ಪಡೆಯುವುದನ್ನು ತಪ್ಪಿಸುವ ಸಲುವಾಗಿ ಪ್ರಮಾಣ ಪತ್ರ ಪಡೆಯಲಾಗುತ್ತಿದೆ ಎಂದರು.

ಜವಳಿ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿ 17 ಸಾವಿರ ಜನರಿಗೆ ನೇಕಾರರ ಗುರುತಿನ ಕಾರ್ಡ್ಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿಯೇ ದೊಡ್ಡಬಳ್ಳಾಪುರ ನಗರದಲ್ಲಿಯೇ ಹೆಚ್ಚಿನ ನೇಕಾರರು ಇದ್ದು, 15 ಸಾವಿರ ಕಾರ್ಡ್ಗಳನ್ನು ವಿತರಿಸಲಾಗಿದೆ. ರಾಜ್ಯ ಸರ್ಕಾರ 2024ರ ಏಪ್ರಿಲ್ ತಿಂಗಳಿಂದ 10 ಎಚ್.ಪಿ. ವರೆಗೆ ವಿದ್ಯುತ್ ಸಂಪರ್ಕ ಪಡೆದಿರುವ ನೇಕಾರರಿಗೆ ಉಚಿತ ವಿದ್ಯುತ್ ಪೂರೈಕೆ ಯೋಜನೆ ಜಾರಿಗೆ ತಂದ ನಂತರ ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಚಾಲನೆಯಲ್ಲಿ ಇಲ್ಲದ, ಸೂಕ್ತ ದಾಖಲೆಗಳು ಸಲ್ಲಿಸದೆ ಇರುವ 1,280 ಸಂಪರ್ಕಗಳಿಗೆ ವಿದ್ಯುತ್ ಸಂಪರ್ಕ ರದ್ದುಪಡಿಸಲಾಗಿದೆ. ಇವುಗಳ ಪೈಕಿ 200 ಜನ ನೇಕಾರರು ಸೂಕ್ತ ದಾಖಲೆಗಳನ್ನು ಸಲ್ಲಿಸಿದ ನಂತರ ಈ ಹಿಂದಿನ ವಿದ್ಯುತ್ ಬಿಲ್ ಬಾಕಿ ಮೊತ್ತ ಸೇರಿದಂತೆ ಇಲ್ಲಿಯವರೆಗಿನ ರೀಯಾಯಿತಿ ಹಣವನ್ನು ಬೆಸ್ಕಾಂಗೆ ಪಾವತಿಸಲಾಗಿದೆ. ಈಗಲು ಸಹ ವಿದ್ಯುತ್ ರೀಯಾಯಿತಿ, 10 ಎಚ್.ಪಿ.ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ನೇಕಾರರು ಅಗತ್ಯ ದಾಖಲೆಗಳನ್ನು ಇಲಾಖೆಗೆ ಸಲ್ಲಿಸುವ ಮೂಲಕ ಯೋಜನೆಯ ಉಪಯೋಗವನ್ನು ಪಡೆಯಲು ಅವಕಾಶ ಇದೆ ಎಂದರು.

ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ಪಿ.ಎ.ವೆಂಕಟೇಶ್ ಮಾತನಾಡಿ, ನೇಕಾರಿಕೆ ಅಂದರೆ ಸೀರೆ ನೇಯುವವರು ಮಾತ್ರ ಅಲ್ಲ. ಸೀರೆ ನೇಯ್ಗೆ ಪೂರ್ವದಲ್ಲಿ ರೇಷ್ಮೆ ಬಣ್ಣ ಮಾಡುವ, ವಾರ್ಪ್ ಸುತ್ತವ, ಕಂಡಿಕೆ, ವೈಡಿಂಗ್ ಹಾಕುವವರು, ರೀಡು ತುಂಬುವವರು ಸೇರಿದಂತೆ ಎಲ್ಲರೂ ನೇಕಾರರೆ ಆಗಿದ್ದಾರೆ. ಹಾಗಾಗಿ ನೇಕಾರ ಸಮ್ಮಾನ್ ಯೋಜನೆಯಲ್ಲಿ ಆರ್ಥಿಕ ನೇರವಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದರು.

‘ಹೆಚ್ಚುವರಿ ಭದ್ರತಾ ಠೇವಣಿ: ಸೆ.30 ರಂದು ಪ್ರತಿಭಟನೆ’
ದೊಡ್ಡಬಳ್ಳಾಪುರದ ಕರೇನಹಳ್ಳಿ ಭಾಗದಲ್ಲಿಯೇ ಹೆಚ್ಚಿನ ನೇಕಾರಿಕೆ ಇರುವುದು. ಆದರೆ ಈ ಭಾಗದಲ್ಲಿ ವಿದ್ಯುತ್ ಸಂಪರ್ಕಕ್ಕೆ ತಕ್ಕಂತೆ ವಿದ್ಯುತ್ ಪರಿವರ್ತಕಗಳು(ಟಿಸಿ) ಇಲ್ಲದೆ ವಿದ್ಯುತ್ ಪೂರೈಕೆಯಲ್ಲಿ ಸದಾ ವ್ಯತ್ಯಯ ಉಂಟಾಗುತ್ತಲೇ ಇದೆ. ಇದರಿಂದ ನೇಕಾರರು ತೊಂದರೆಗೆ ಸಿಲುಕುವಂತಾಗಿದೆ. ಹಾಗೆಯೇ ಹತ್ತಾರು ವರ್ಷಗಳ ಹಿಂದೆಯೇ ವಿದ್ಯುತ್ ಸಂಪರ್ಕ ಪಡೆದಿರುವ ನೇಕಾರರು ಹಾಗೂ ಗೃಹ ಬಳಕೆದಾರರು ಹೆಚ್ಚುವರಿ ಭದ್ರತಾ ಠೇವಣಿಯನ್ನು ಒಂದು ತಿಂಗಳ ಒಳಗೆ ಪಾವತಿ ಮಾಡದೇ ಇದ್ದರೆ ಸಂಪರ್ಕ ಕಡಿತ ಮಾಡುವ ಕುರಿತಂತೆ ಬೆಸ್ಕಾಂ ನೋಟಿಸ್ ಜಾರಿಗೊಳಿಸಿದೆ. ಇದರ ವಿರುದ್ದ ಸೆ.30 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬೆಸ್ಕಾಂ ಕಚೇರಿ ಮುಂದೆ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯಲ್ಲಿ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಸಿ.ಸುರೇಶ್,ಖಜಾಂಚಿ ಕೆ.ಮಲ್ಲೇಶ್, ಸಹ ಕಾರ್ಯದರ್ಶಿ ಎಂ.ಚೌಡಯ್ಯ,ಎಂ.ಮುನಿರಾಜು,ನೇಕಾರ ಮುಖಂಡರಾದ ಕೆ.ರಘುಕುಮಾರ್,ಸಿ.ಅಶ್ವಥ್, ಶಂಕರರೆಡ್ಡಿ, ಸದಾಶಿವಪ್ಪ ಇದ್ದರು.

Leave a Reply

Your email address will not be published. Required fields are marked *

error: Content is protected !!