ನೇಕಾರಿಕೆ ಪರಂಪರೆಗೆ ಆಧುನಿಕ ಸವಾಲುಗಳು: ಅಸ್ತಿತ್ವಕ್ಕಾಗಿ ದೊಡ್ಡಬಳ್ಳಾಪುರ ನೇಕಾರರ ಹೋರಾಟ: ಅವನತಿಯತ್ತ ಸಾಗುತ್ತಿದೆ ಸುವರ್ಣಯುಗದ ವೈಭವ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಎಂದರೆ ರೇಷ್ಮೆ ಸೀರೆ, ಹತ್ತಿ ಬಟ್ಟೆ ಮತ್ತು ನೇಕಾರಿಕೆಯ ಪರಂಪರೆಗೆ ಹೆಸರಾದ ನಗರ. ಒಂದು ಕಾಲದಲ್ಲಿ ರಾಜ್ಯದ ಜವಳಿ ನಕ್ಷೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದ್ದ ಈ ನಗರ, ಸಾವಿರಾರು ಕುಟುಂಬಗಳ ಜೀವನಾಧಾರವಾಗಿತ್ತು. ಆದರೆ, ಕಾಲ ಬದಲಾದಂತೆ ಪವರ್‌ಲೂಮ್‌ಗಳ ಸ್ಪರ್ಧೆ, ಯಂತ್ರ ನಿರ್ಮಿತ ಬಟ್ಟೆಗಳ ಮಾರುಕಟ್ಟೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಯುವಜನರ ನಿರಾಸಕ್ತಿ ಹಾಗೂ ಮಾರುಕಟ್ಟೆ ವ್ಯವಸ್ಥೆಯ ಕೊರತೆಯಿಂದ ಇಂದು ಈ ಉದ್ಯಮ ಅಸ್ತಿತ್ವದ ಹೋರಾಟ ನಡೆಸುತ್ತಿದೆ.

ದೊಡ್ಡಬಳ್ಳಾಪುರದ ನೇಕಾರಿಕೆ ಸುಮಾರು 300–400 ವರ್ಷಗಳ ಇತಿಹಾಸ ಹೊಂದಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಮೈಸೂರು ಸಂಸ್ಥಾನದ ಕಾಲದಲ್ಲಿ ಕೈಮಗ್ಗ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರೆತಿದ್ದು, ಬಳಿಕ ರೇಷ್ಮೆ ಸೀರೆ ನೇಕಾರಿಕೆ ವೇಗವಾಗಿ ಬೆಳವಣಿಗೆ ಕಂಡಿತು. ಸ್ವಾತಂತ್ರ್ಯ ನಂತರ ಸಹಕಾರ ಸಂಘಗಳ ಸ್ಥಾಪನೆಯೊಂದಿಗೆ ಸಾವಿರಾರು ನೇಕಾರರಿಗೆ ಉದ್ಯೋಗ ದೊರೆಯಿತು. ಒಂದು ಕಾಲದಲ್ಲಿ ಇಲ್ಲಿ ತಯಾರಾಗುತ್ತಿದ್ದ ಸೀರೆಗಳು ರಾಜ್ಯದ ವಿವಿಧ ಭಾಗಗಳಷ್ಟೇ ಅಲ್ಲದೆ ದೇಶದ ಪ್ರಮುಖ ನಗರಗಳಿಗೂ ಸಾಗಾಟವಾಗುತ್ತಿದ್ದವು.

ಸುವರ್ಣಯುಗದ ವೈಭವ: 

1980ರಿಂದ 2005ರವರೆಗಿನ ಅವಧಿಯನ್ನು ದೊಡ್ಡಬಳ್ಳಾಪುರ ನೇಕಾರಿಕೆಯ ಸುವರ್ಣಯುಗವೆಂದು ಪರಿಗಣಿಸಲಾಗುತ್ತದೆ. ಸಾವಿರಾರು ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳು ನಿರಂತರ ಕಾರ್ಯ ನಿರ್ವಹಿಸುತ್ತಿದ್ದವು. ರೇಷ್ಮೆ ಸೀರೆ, ಹತ್ತಿ ಸೀರೆ, ಲುಂಗಿ, ಟವಲ್, ಶಾಲು, ಡ್ರೆಸ್ ಮೆಟೀರಿಯಲ್ ಸೇರಿದಂತೆ ವಿವಿಧ ಜವಳಿ ಉತ್ಪನ್ನಗಳು ಇಲ್ಲಿ ತಯಾರಾಗುತ್ತಿದ್ದವು.

ನೇಕಾರರು ಮಾತ್ರವಲ್ಲದೆ ನೂಲಿನ ವ್ಯಾಪಾರಿಗಳು, ಬಣ್ಣಗಾರರು, ವಿನ್ಯಾಸಕಾರರು, ಮಗ್ಗ ತಯಾರಕರು ಸೇರಿದಂತೆ ಸಾವಿರಾರು ಜನರಿಗೆ ಈ ಉದ್ಯಮದಿಂದ ಉದ್ಯೋಗ ದೊರೆಯುತ್ತಿತ್ತು.

ವಿದ್ಯುತ್ ಮಗ್ಗಗಳ ಯುಗ: 

1948ರಲ್ಲಿ ವಿದ್ಯುತ್ ಪೂರೈಕೆ ಆರಂಭವಾದ ನಂತರ ದೊಡ್ಡಬಳ್ಳಾಪುರದಲ್ಲಿ ಪವರ್‌ಲೂಮ್‌ಗಳ ಬಳಕೆ ಹೆಚ್ಚಾಯಿತು. ಇದರೊಂದಿಗೆ ಉತ್ಪಾದನೆ ಹೆಚ್ಚಾಗಿ, ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ದೊಡ್ಡಬಳ್ಳಾಪುರ ಸೀರೆಗಳು ಪೂರೈಕೆಯಾಗುತ್ತಿದ್ದವು.

ದೊಡ್ಡಬಳ್ಳಾಪುರ ಸೀರೆಗಳ ವಿಶೇಷತೆ:

ದೊಡ್ಡಬಳ್ಳಾಪುರದ ರೇಷ್ಮೆ ಸೀರೆಗಳಿಗೆ ತಮ್ಮದೇ ಆದ ವಿಶಿಷ್ಟತೆ ಇದೆ. ಸುಮಾರು 850 ಗ್ರಾಂನಿಂದ 1 ಕೆ.ಜಿ. ತೂಕದ ಶುದ್ಧ ರೇಷ್ಮೆ, ಅಗಲವಾದ ಜರಿ ಬಾರ್ಡರ್ ಹಾಗೂ ಪಲ್ಲು, ಬಣ್ಣದ ದೀರ್ಘಕಾಲದ ಬಾಳಿಕೆ ಮತ್ತು ಮದುವೆ ಸೇರಿದಂತೆ ಧಾರ್ಮಿಕ ಸಮಾರಂಭಗಳಿಗೆ ಸೂಕ್ತವಾಗಿರುವ ವಿನ್ಯಾಸಗಳು ಈ ಸೀರೆಗಳ ಪ್ರಮುಖ ಆಕರ್ಷಣೆಯಾಗಿವೆ.

ಇಂದಿನ ಸ್ಥಿತಿ: 

ಕಳೆದ ಹದಿನೈದು ವರ್ಷಗಳಲ್ಲಿ ನೇಕಾರಿಕೆ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ. ಕೈಮಗ್ಗಗಳು ಬಹುತೇಕ ಅಳಿವಿನಂಚಿನಲ್ಲಿದ್ದು, ಹೆಚ್ಚಿನವರು ಪವರ್‌ಲೂಮ್‌ಗೆ ಬದಲಾಗಿದ್ದಾರೆ. ಉತ್ಪಾದನಾ ವೆಚ್ಚ ಹೆಚ್ಚಾದರೂ ಅದಕ್ಕೆ ತಕ್ಕಂತೆ ಮಾರಾಟ ಬೆಲೆ ಹೆಚ್ಚದಿರುವುದು ನೇಕಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಆನ್‌ಲೈನ್ ಮಾರುಕಟ್ಟೆಗೆ ಹೊಂದಿಕೊಳ್ಳಲು ಸಾಧ್ಯವಾಗದ ಸಣ್ಣ ನೇಕಾರರು ಮಧ್ಯವರ್ತಿಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅನೇಕ ಕುಟುಂಬಗಳು ನೇಕಾರಿಕೆಯನ್ನು ತೊರೆದು ಬೇರೆ ಉದ್ಯೋಗಗಳಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿನ ಅಂದಾಜಿನ ಪ್ರಕಾರ, ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತ ಸುಮಾರು 25 ಸಾವಿರದಿಂದ 30 ಸಾವಿರ ಪವರ್‌ಲೂಮ್‌ಗಳು ವಿವಿಧ ಜವಳಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿವೆ. ಕೈಮಗ್ಗಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ.

ಪ್ರಮುಖ ಸಮಸ್ಯೆಗಳು: 

ನೇಕಾರರ ಬದುಕಿಗೆ ಹಲವು ಸವಾಲುಗಳು ಎದುರಾಗಿವೆ. ಗುಜರಾತಿನ ಸೂರತ್‌ನಲ್ಲಿ ಕಡಿಮೆ ಬೆಲೆಗೆ ದೊಡ್ಡಬಳ್ಳಾಪುರ ಮಾದರಿಯ ಸೀರೆಗಳ ಉತ್ಪಾದನೆ. ಕಚ್ಚಾ ರೇಷ್ಮೆ, ಹತ್ತಿ ನೂಲು, ಜರಿ ಹಾಗೂ ಬಣ್ಣಗಳ ಬೆಲೆ ಏರಿಕೆ. ವಿದ್ಯುತ್ ದರ ಹೆಚ್ಚಳದಿಂದ ಉತ್ಪಾದನಾ ವೆಚ್ಚ ಏರಿಕೆ. ಮಧ್ಯವರ್ತಿಗಳ ಹಾವಳಿಯಿಂದ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ದೊರೆಯದಿರುವುದು. ಯುವಜನರು ನೇಕಾರಿಕೆ ವೃತ್ತಿಯಿಂದ ದೂರವಾಗುತ್ತಿರುವುದು. ಬ್ರ್ಯಾಂಡಿಂಗ್ ಹಾಗೂ ಡಿಜಿಟಲ್ ಮಾರುಕಟ್ಟೆಯ ಕೊರತೆ. ಸರ್ಕಾರದ ಯೋಜನೆಗಳು ಎಲ್ಲ ನೇಕಾರರಿಗೂ ಸಮರ್ಪಕವಾಗಿ ತಲುಪದಿರುವುದು ಇದಕ್ಕೆ ಕಾರಣ.

ಒಂದು ಲಕ್ಷ ಕುಟುಂಬಗಳು ಹಾಗೂ ಕಾರ್ಮಿಕರು ನೇಕಾರಿಕೆಯನ್ನು ಅವಲಂಬಿಸಿ ಜೀವನ ನಡೆಸುತ್ತಿವೆ. ಸುಮಾರು 90 ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿದ್ದು, 25 ಸಾವಿರಕ್ಕೂ ಹೆಚ್ಚುವಿದ್ಯುತ್ ಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು 1 ಲಕ್ಷ ಜನರು ನೇರ ಹಾಗೂ ಪರೋಕ್ಷ ಉದ್ಯೋಗ ಮಾಡುತ್ತಿದ್ದು, ರೇಷ್ಮೆ ಸೀರೆ, ಹತ್ತಿ ಸೀರೆ, ಲುಂಗಿ, ಟವಲ್ ಹಾಗೂ ಡ್ರೆಸ್ ಮೆಟೀರಿಯಲ್ ಗಳನ್ನು ತಯಾರಿಸಲಾಗುತ್ತಿದೆ.

ಸರ್ಕಾರಗಳ ನೆರವು: 

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೇಕಾರರಿಗಾಗಿ ನೂಲು ಸಹಾಯಧನ, ಮಗ್ಗಗಳ ಆಧುನೀಕರಣ, ಆರೋಗ್ಯ ವಿಮೆ, ವಸತಿ ಯೋಜನೆ, ಸಾಲ ಸೌಲಭ್ಯ, ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಜವಳಿ ಮೇಳಗಳ ಮೂಲಕ ಮಾರಾಟದ ಅವಕಾಶ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ ಈ ಸೌಲಭ್ಯಗಳು ಎಲ್ಲ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪುವಂತೆ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ ಎಂತ್ತಾರೆ ನೇಕಾರರು.

ಪುನಶ್ಚೇತನಕ್ಕೆ ಅಗತ್ಯ ಕ್ರಮಗಳು: ತಜ್ಞರ ಪ್ರಕಾರ ದೊಡ್ಡಬಳ್ಳಾಪುರ ನೇಕಾರಿಕೆಯನ್ನು ಪುನಶ್ಚೇತನಗೊಳಿಸಲು ವಿಶೇಷ ಬ್ರ್ಯಾಂಡಿಂಗ್, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆ, ಇ-ಕಾಮರ್ಸ್ ಮೂಲಕ ನೇರ ಮಾರಾಟ, ಯುವಜನರಿಗೆ ತರಬೇತಿ ಮತ್ತು ಪ್ರೋತ್ಸಾಹಧನ, ಹೊಸ ವಿನ್ಯಾಸಗಳ ಅಭಿವೃದ್ಧಿ, ಸಹಕಾರ ಸಂಘಗಳ ಬಲವರ್ಧನೆ ಹಾಗೂ ಕಚ್ಚಾ ವಸ್ತುಗಳಿಗೆ ಹೆಚ್ಚಿನ ಸಬ್ಸಿಡಿ ಅಗತ್ಯವಾಗಿದೆ. ನಗರದ ಡಿ-ಕ್ರಾಸ್ ಸಮೀಪ, ನಗರ ಪೊಲೀಸ್ ಠಾಣೆ ಎದುರು ಸುಮಾರು 10 ಗುಂಟೆ ಜಾಗದಲ್ಲಿ ₹1.95 ಕೋಟಿ ವೆಚ್ಚದಲ್ಲಿ ಸೀರೆ ಮಳಿಗೆ ನಿರ್ಮಿಸಲು ಸರ್ಕಾರ ನಿರ್ಧರಿಸಿರುವುದು ನೇಕಾರರಿಗೆ ಹೊಸ ನಿರೀಕ್ಷೆ ಮೂಡಿಸಿದೆ.

ಪರಂಪರೆ ಉಳಿಸುವ ಹೊಣೆ

ನೇಕಾರಿಕೆ ಕೇವಲ ಒಂದು ಉದ್ಯಮವಲ್ಲ; ಅದು ದೊಡ್ಡಬಳ್ಳಾಪುರದ ಸಾಂಸ್ಕೃತಿಕ ಗುರುತು ಮತ್ತು ಸಾವಿರಾರು ಕುಟುಂಬಗಳ ಜೀವನೋಪಾಯ. ಗುಣಮಟ್ಟ, ವಿನ್ಯಾಸದಲ್ಲಿ ಹೊಸತನ, ಡಿಜಿಟಲ್ ಮಾರುಕಟ್ಟೆ ಮತ್ತು ಸರ್ಕಾರದ ನಿರಂತರ ಬೆಂಬಲ ದೊರೆತರೆ ಈ ಉದ್ಯಮ ಮತ್ತೆ ತನ್ನ ಹಳೆಯ ವೈಭವವನ್ನು ಮರಳಿ ಪಡೆಯುವ ಸಾಮರ್ಥ್ಯ ಹೊಂದಿದೆ. ಇಲ್ಲವಾದರೆ ಶತಮಾನಗಳ ಇತಿಹಾಸ ಹೊಂದಿರುವ ಈ ಪರಂಪರೆ ಮುಂದಿನ ತಲೆಮಾರಿಗೆ ಕೇವಲ ನೆನಪಾಗಿ ಉಳಿಯುವ ಅಪಾಯವಿದೆ.

ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ನೇಕಾರಿಕೆ ಉದ್ಯಮ ಸಂಕಷ್ಟದಲ್ಲಿದೆ. ಒಂದು ಕಾಲದಲ್ಲಿ ಕೈಮಗ್ಗ ಮತ್ತು ಪವರ್‌ಲೂಮ್ ಸೀರೆಗಳ ಪ್ರಮುಖ ಉತ್ಪಾದನಾ ಕೇಂದ್ರವಾಗಿದ್ದ ದೊಡ್ಡಬಳ್ಳಾಪುರಕ್ಕೆ ಇಂದು ಸೂರತ್‌ನಲ್ಲಿ ತಯಾರಾಗುವ ಕಡಿಮೆ ಬೆಲೆಯ ಸೀರೆಗಳು ದೊಡ್ಡ ಸವಾಲಾಗಿವೆ. ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ. 10 ಎಚ್‌ಪಿ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಇದ್ದರೂ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಸೀರೆ ಮಳಿಗೆ ನಿರ್ಮಾಣ ಕಾಮಗಾರಿಯೂ ಇನ್ನೂ ಆರಂಭವಾಗಿಲ್ಲ ಎಂದು ನೇಕಾರ ಹೋರಾಟ ಸಮಿತಿ ಅಧ್ಯಕ್ ಬಿ.ಜಿ ಹೇಮಂತ್ ರಾಜ್ ಹೇಳಿದ್ದಾರೆ.

ನೇಕಾರಿಕೆಗೆ ಬೇಕಾಗುವ ಕಚ್ಛಾ ವಸ್ತುಗಳ ಬೆಲೆ ಏರಿಕೆಯಿಂದ ಉದ್ಯಮ ಸಂಕಷ್ಟದಲ್ಲಿದೆ. ನಾವು ನೇಯ್ದ ಸೀರೆಗೆ ವೈಜ್ಞಾನಿಕ ಬೆಲೆ ಇಲ್ಲ. ಸುಮಾರು 17 ಸಾವಿರ ನೇಕಾರರು ಜವಳಿ‌‌ ಇಲಾಖೆಯಿಂದ ಗುರುತಿನ‌ ಚೀಟಿ‌ ಪಡೆದಿದ್ದಾರೆ. ಗುರುತಿನ ಚೀಟಿ ಹೊಂದಿರುವವರಿಗೆ ತಿಂಗಳಿಗೆ ಎರಡು ಸಾವಿರ ರೂ. ನೀಡಬೇಕು. ನೇಕಾರಿಕೆ ಉದ್ಯಮವನ್ನು ಉಳಿಸಿ ಬೆಳೆಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣ ಸಮಿತಿ ಅಧ್ಯಕ್ಷ ಪಿ ಎ ವೆಂಕಟೇಶ್ ಹೇಳಿದರು.

Ramesh Babu

Journalist

Recent Posts

ರೈಲು ಡಿಕ್ಕಿಗೆ ಅಪರಿಚಿತ ವ್ಯಕ್ತಿ ಬಲಿ

ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ…

56 seconds ago

ಮಳೆ ಕೊರತೆ ನೀಗಿಸಲು ಸರ್ಕಾರದ ಮಾಸ್ಟರ್ ಪ್ಲ್ಯಾನ್: ಎಚ್.ಎ.ಎಲ್‌ನಲ್ಲಿ ಮೋಡ ಬಿತ್ತನೆಗೆ ಜಲ ಸಂಪನ್ಮೂಲ ಸಚಿವರಿಂದ ಚಾಲನೆ

ರಾಜ್ಯದಲ್ಲಿ ಎದುರಾಗಿರುವ ಮಳೆ‌ ಕೊರತೆ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಮೋಡ…

33 minutes ago

ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಸಿಮೆಂಟ್ ಲಾರಿ; ಚಾಲಕ ಸ್ಥಳದಲ್ಲೇ ಸಾವು ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯಲ್ಲಿ ಮುಂಜಾನೆ ದುರಂತ | ರಸ್ತೆಗೆ ಚೆಲ್ಲಾಪಿಲ್ಲಿಯಾದ ಸಿಮೆಂಟ್ ಮೂಟೆಗಳು

  ದೊಡ್ಡಬಳ್ಳಾಪುರ: ಕಡಿದಾದ ತಿರುವಿನಲ್ಲಿ ಸಿಮೆಂಟ್ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ…

4 hours ago

ಬಸ್ ಏರಿದ್ರೆ ಗಮ್ಯಸ್ಥಾನ ಸೇರುತ್ತೇವೆ ಅನ್ನೋ ಗ್ಯಾರಂಟಿ ಇಲ್ಲ!: ಗುಂಡಮ್ಮಗೆರೆ–ಹೊಸಹಳ್ಳಿ ಮಾರ್ಗದಲ್ಲಿ ಪದೇ ಪದೇ ಕೆಟ್ಟು ನಿಲ್ಲುವ ಸಾರಿಗೆ ಬಸ್‌ಗಳು

ದೊಡ್ಡಬಳ್ಳಾಪುರ: ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ಪದೇ ಪದೇ ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.…

4 hours ago

ಕೃಷ್ಣ ಜನ್ಮಾಷ್ಟಮಿಯ ನೆಪದಲ್ಲಿ ಒಂದಷ್ಟು ಚಿಂತನೆ……

ಭಾರತದ ನೆಲದಲ್ಲಿ, ತಮ್ಮ ವ್ಯಕ್ತಿತ್ವದ ರೂಪದಲ್ಲಿ ಅತ್ಯಂತ ಹೆಚ್ಚು ಪರಿಣಾಮ ಬೀರಿದ ನಾಲ್ಕು ಪಾತ್ರಗಳೆಂದರೆ ಕೃಷ್ಣ, ರಾಮ, ಗಾಂಧಿ, ಮತ್ತು…

6 hours ago

ಅರ್ಹ ರೈತರು ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ ರಾಜಶೇಖರ್ ಆಚಾರ್

  ಚಿಕ್ಕನಾಯಕನಹಳ್ಳಿ: ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…

16 hours ago