ನೇಕಾರರ ಹೋರಾಟಕ್ಕೆ ಮಣಿದ ಬೆಸ್ಕಾಂ; ಮೂರು ತಿಂಗಳು ಬಿಲ್ ಕಟ್ಟದಿದ್ದರೆ ಪರವಾನಗಿ, ವಿದ್ಯುತ್ ಕಟ್ ಆದೇಶ ವಾಪಸ್

ಮೂರು ತಿಂಗಳ ವಿದ್ಯುತ್ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ ಮತ್ತು ಪರವಾನಗಿ ರದ್ದು ಮಾಡುವ ಆದೇಶವನ್ನು ವಾಪಸ್ ಪಡೆಯುವುದಾಗಿ ಪ್ರತಿಭಟನಾ ನಿರತ ನೇಕಾರ ಮತ್ತು ಬಡ, ಮಧ್ಯಮ ವರ್ಗದ ಜನತೆಗೆ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಧನಂಜಯ, ಎಇಇ ಮಂಜುನಾಥ ಅವರು ಹೇಳಿದರು.

ಸತತ ಮೂರು ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ ಮತ್ತು ಪರವಾನಗಿ ರದ್ದು ಮಾಡುವ ಆದೇಶನ್ನು ವಿರೋಧಿಸಿ ನಗರದ ಬೆಸ್ಕಾಂ ಕಚೇರಿ ಮುಂಭಾಗ ನೇಕಾರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಶಾಸಕ ವೆಂಕಟರಮಣಯ್ಯ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬೆಸ್ಕಾಂ ಆದೇಶವು ನೇಕಾರರು, ಬಡವರು ಹಾಗೂ ರೈತರ ಮೇಲೆ ನಡೆಸುತ್ತಿರುವ ಗದಾ ಪ್ರಹಾರವಾಗಿದೆ. ಈಗಾಗಲೇ ದೇಶದ ಜನರು ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಹೀಗಿರುವಾಗ ಬಿಲ್ ಪಾವತಿ ವಿಳಂಬ ಸಹಜ. ಇದನ್ನೇ ನೆಪ ಮಾಡಿಕೊಂಡು ಸಂಪರ್ಕ ಕಡಿತ ಮಾಡುವ ಆದೇಶ ಎಳ್ಳಷ್ಟು ಸರಿಯಲ್ಲ. ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಪಂಚದಲ್ಲೇ ಹೆಚ್ಚು ಸೋಲಾರ್ ವಿದ್ಯುತ್ ಉತ್ಪಾದನೆಯನ್ನು ಕರ್ನಾಟಕ ಮಾಡುತ್ತಿದೆ. ಆದರೆ ಸರ್ಕಾರ ವಿದ್ಯುತ್ತನ್ನು ಖಾಸಗೀಯವರಿಗೆ ಮಾರಾಟ ಮಾಡಿ, ಗ್ರಾಹಕರಿಗೆ ವಂಚನೆ ಮಾಡುತ್ತಿವೆ ಎಂದು ದೂರಿದರು.

ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಹೇಮಂತರಾಜು ಮಾತನಾಡಿ, ವಿದ್ಯುತ್ ಮಸೂದೆ ಜಾರಿಗೆ ತಂದ ಪರಿಣಾಮ ಹಾಗೂ ಖಾಸಗಿ ಕಂಪನಿಗಳ ಒತ್ತಡದ ಫಲವಾಗಿ ಈ ಮಾರಕ ಆದೇಶ ಬಂದಿದೆ. ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಆರೋಪಿಸಿದರು. ಐದು ವರ್ಷದಿಂದ ನೇಯ್ಗೆ ಉದ್ಯಮ ನೆಲಕಚ್ಚಿದೆ. ನೋಟ್ ಬ್ಯಾನ್, ಜಿಎಸ್ ಟಿ, ಕೋವಿಡ್ ನಿಂದಾಗಿ ಉದ್ಯಮದ ಪರಿಸ್ಥಿತಿ ಮೂರಾಬಟ್ಟೆಯಾಗಿದೆ. ಬಹುತೇಕರು ನೇಯ್ಗೆ ಉದ್ಯಮವನ್ನೇ ತೊರೆಯುವಂತಾಗಿದೆ. ಕಳೆದ ಐದು ತಿಂಗಳಿಂದ ಯಾವುದೇ ವ್ಯಾಪಾರವಾಗಿಲ್ಲ. ಇದರಿಂದ ನೇಕಾರರು ಪರಿತಪಿಸುವಂತಾಗಿದೆ ಎಂದು ಹೇಳಿದರು.

ಎಸ್ಕಾಂ ಹಾಗೂ ಸರ್ಕಾರ, ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಅವೈಜ್ಞಾನಿಕ ಆದೇಶ ಗ್ರಾಹಕರಿಗೆ ಮರಣಶಾಸನವಾಗಿದೆ. ಸರ್ಕಾರವೇ ಎಲ್ಲವನ್ನು ಮಾಡಿ, ಹಿಂಬಾಗಿಲಿನಿಂದ ಆದೇಶ ಮಾಡಿಸುವ ಮೂಲಕ ಜನಸಾಮಾನ್ಯರನ್ನು ದಿವಾಳಿಯ ಅಂಚಿಗೆ ದೂಡುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ಪ್ರತಿಭಟನಾ ನಿರತರ ಸ್ಥಳಕ್ಕೆ ಧಾವಿಸಿದ ಬೆಸ್ಕಾಂ ಎಇ ಧನಂಜಯ, ಎಇಇ ಮಂಜುನಾಥ ಅವರು ಹೋರಾಟಗಾರರಿಂದ ಮನವಿ ಪತ್ರ ಸ್ವೀಕರಿಸಿದರು. ಬಳಿಕ ಮಾತನಾಡಿ ಮೇಲಾಧಿಕಾರಿಗಳ ಸೂಚನೆಯಂತೆ ಆದೇಶವನ್ನು ಜಾರಿಗೊಳಿಸಲಾಗಿತ್ತು. ಈ ಆದೇಶವನ್ನು ಶೀಘ್ರವಾಗಿ ವಾಪಸ್ ಪಡೆಯಲಾಗುವುದು ಎಂದು ತಿಳಿಸಿದರು.

ಈ ವೇಳೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ರಂಗರಾಜು, ಸೂರ್ಯಪ್ರಕಾಶ್, ರಂಗಸ್ವಾಮಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *