ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಕಾಣುತ್ತಿದೆ. ಮುಂದೆ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿಯೂ ಕಮಲ ಅರಳಲಿದೆ. ಮತ್ತೊಮ್ಮೆ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಹೇಳಿದರು.
ನಗರದ ಡಿಪಿವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ನೇಕಾರ ಸಮುದಾಯ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ನೇಕಾರ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಮಾಡಿರುವುದು ಬಿಜೆಪಿ ಸರ್ಕಾರ ಮಾತ್ರ ಎಂದರು.
ಬಿಜೆಪಿಯ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ದೊಡ್ಡಬಳ್ಳಾಪುರಕ್ಕೆ ಅಳೆದು ತೂಗಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಪಕ್ಷದ ನಿಷ್ಠಾವಂತ, ಅಭಿವೃದ್ಧಿಯ ಮುಂದಾಲೋಚನೆಯಿರುವ ಯುವ ಅಭ್ಯರ್ಥಿ ಧೀರಜ್ ಮುನಿರಾಜು ಅವರನ್ನು ಅಖೈರು ಮಾಡಲಾಗಿದೆ. ಇಂತಹ ಅವಕಾಶವನ್ನು ಒದಗಿಸುವುದು ಬಿಜೆಪಿ ಮಾತ್ರ ಎಂದು ಹೇಳಿದರು.
ಕಾಂಗ್ರೆಸ್ ಕೇವಲ ಕುಟುಂಬ ರಾಜಕೀಯಕ್ಕೆ ಸಿಮೀತವಾಗಿದೆ. ದೊಡ್ಡಬಳ್ಳಾಪುರದಲ್ಲಿ ನೇಕಾರ ಸಮುದಾಯ ಹೆಚ್ಚಿನದಾಗಿದೆ. ನೇಕಾರರೇ ನಿರ್ಣಾಯಕರಾಗಿದ್ದು, ಈ ಬಾರಿ ನೇಕಾರ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ನೀಲನಕ್ಷೆ ಹೊಂದಿರುವ ಧೀರಜ್ ಮುನಿರಾಜುಗೆ ಅವಕಾಶ ಮಾಡಿಕೊಡಬೇಕು ಎಂದರು.
ನಂತರ ಮಾತನಾಡಿದ ಧೀರಜ್ ಮುನಿರಾಜು, ಬಾಶೆಟ್ಟಿಹಳ್ಳಿಯಲ್ಲಿನ ಕೈಗಾರಿಕಾ ಪ್ರದೇಶಕ್ಕೆ ಮತ್ತಷ್ಟು ಉದ್ಯಮಗಳು ತಂದು ಯುವ ಜನತೆಗೆ ಉದ್ಯೋಗ ಒದಗಿಸಲು ಕ್ರಮ ವಹಿಸಲಾಗುವುದು. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು. ಒಂದು ಬಾರಿ ಅವಕಾಶ ಮಾಡಿಕೊಟ್ಟರೆ ತಾಲ್ಲೂಕನ್ನು ಇಡಿ ರಾಜ್ಯ ಮಟ್ಟದಲ್ಲಿ ಮಾದರಿ ತಾಲ್ಲೂಕನ್ನಾಗಿ ಮಾಡುತ್ತೇನೆ ಎಂದರು.
ಈ ವೇಳೆ ಮುಖಂಡರಾದ ಕೆಎಂ ಹನುಮಂತರಾಯಪ್ಪ, ವಿಷ್ಣುವರ್ಧನ್ ರೆಡ್ಡಿ, ಚೀರಂಜಿವಿ ರೆಡ್ಡಿ, ನಗರಸಭೆ ಅಧ್ಯಕ್ಷೆ ಸುಧರಾಣಿ ಲಕ್ಷ್ಮೀನಾರಾಯಣ್, ತಿ.ರಂಗರಾಜು, ಬಿಸಿ ಆನಂದ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.