ಕೋಲಾರ: ಗ್ರಾಹಕರಿಲ್ಲದೆ ಗ್ರಾಹಕರ ಸಂವಾದ ಸಭೆ ನಡೆಸಿದ ನಗರ ಉಪ ಸಹಾಯಕ ಕಾರ್ಯಪಾಲಕ ಅಭಿಯಂತರ ಜನಾರ್ಧನ ವಿರುದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಆಕ್ರೋಷ ವ್ಯಕ್ತಪಡಿಸಿದರು.
ಕಾಟಾಚಾರಕ್ಕೆ ಪತ್ರಿಕಾ ಹೇಳಿಕೆ ಮುಖಾಂತರ ಗ್ರಾಹಕರು ತಮ್ಮ ಸಮಸ್ಯೆಯನ್ನು ನಗರ ಉಪ ವಿಭಾಗದ ಬೆಸ್ಕಾಂ ಕಛೇರಿಯಲ್ಲಿ ನಡೆಯುವ ಗ್ರಾಹಕರ ಸಂವಾದ ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬಹುದೆಂದು ಪತ್ರಿಕೆಗಳಿಗೆ ಹೇಳಿಕೆ ನೀಡಿ ಕನಿಷ್ಠ ಇಬ್ಬರು ಗ್ರಾಹಕರಿಲ್ಲದೆ ಬರೀ ಅಧಿಕಾರಿಗಳು ನೆಪಮಾತ್ರಕ್ಕೆ ಸಭೆ ನಡೆಸಿ ಪೋಟೋ ಹಿಡಿದುಕೊಂಡು ಹಿರಿಯ ಅಧಿಕಾರಿಗಳಿಗೆ ಕಳುಹಿಸಿ ಗ್ರಾಹಕರ ಸಮಸ್ಯೆಯನ್ನು ಬಗೆ ಹರಿಸಿದ್ದೇವೆಂದು ತಪ್ಪು ಮಾಹಿತಿ ನೀಡುತ್ತೀರ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು.
ಪ್ರತಿದಿನ ಒಂದಲ್ಲಾ ಒಂದು ಸಮಸ್ಯೆಯನ್ನು ಬೆಸ್ಕಾಂ ಅಧಿಕಾರಿಗಳು ಮಾಡುತ್ತಿರುತ್ತಾರೆ. ಕನಿಷ್ಠ ರಾಜ್ಯದ ಇಂಧನ ಸಚಿವರು ಬಂದು ಸಭೆ ನಡೆಸುವಾಗ ಮದ್ಯದಲ್ಲಿ ವಿದ್ಯುತ್ ಅಡಚಣೆ ಮಾಡುತ್ತಿದ್ದರೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಯಾವ ಮಟ್ಟಕ್ಕೆ ವಿದ್ಯುತ್ ಸರಬರಾಜು ಮಾಡುತ್ತೀರ ಎಂಬುದು ನಿಮ್ಮ ಇಲಾಖೆಯ ಲೋಪದೋಶಗಳೇ ಕಾರಣ. ಜೊತೆಗೆ ಇಲಾಖೆ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟು ಪ್ರತಿ ಕಾಮಗಾರಿಗೂ ನಕಲಿ ಬಿಲ್ಲುಗಳನ್ನು ಸೃಷ್ಟಿ ಮಾಡಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದು ಅದನ್ನು ಮುಚ್ಚುಕೊಳ್ಳಲು ನೆಪ ಮಾತ್ರಕ್ಕೆ ಸಭೆ ಮಾಡುತ್ತಿದ್ದೀರ ಎಂದು ಕಿಡಿಕಾರಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಗ್ರಾಹಕರ ಸಭೆ ಎಂದರೆ ಕನಿಷ್ಠ ಬೆಸ್ಕಾಂ ಇಲಾಖೆಯಲ್ಲಿ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಸಭೆ ನಡೆಸಿ ಗ್ರಾಹಕರ ದೂರುಗಳನ್ನು ದಾಖಲು ಮಾಡಿಕೊಂಡು ಸಂಬಂಧಪಟ್ಟ ಆಯಾ ವ್ಯಾಪ್ತಿಯ ಬೆಸ್ಕಾಂ ಅಧಿಕಾರಿಗಳನ್ನು ಕರೆಯಿಸಿ ಸಮಸ್ಯೆ ಬಗೆ ಹರಿಸುವುದೇ ಗ್ರಾಹಕರ ಸಂವಾದ ಆದರೆ ಇದಕ್ಕೆ ಅಧಿಕಾರಿಗಳು ಇಲ್ಲ, ಗ್ರಾಹಕರು ಇಲ್ಲ. ಒಟ್ಟಾರೆಯಾಗಿ ಅಧಿಕಾರಿಗಳೇ ಸಭೆ ನಡೆಸಿ ಪೋಟೋ ಹಿಡಿದುಕೊಂಡು ಟೀ ಕುಡಿದು ಕೈ ತೊಳೆದುಕೊಳ್ಳುವ ಅರ್ಥವಿಲ್ಲದ ಸಭೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಇಲಾಖೆಯ ಅವ್ಯವಸ್ಥೇ ಯಾವ ಮಟ್ಟಕ್ಕೆ ಇದೆ ಎಂದರೆ ಹೊಸ ಟಿ.ಸಿ. ಹೆಸರಿನಲ್ಲಿ ಹಳೆ ಟಿ.ಸಿ. ಕಂಬ ತಂತಿ, ಮತ್ತಿತರ ವಿದ್ಯುತ್ ಸಾಮಗ್ರಿಗಳಿಗೆ ನಕಲಿ ಬಿಲ್ಲುಗಳನ್ನು ಸೃಷ್ಟಿ ಮಾಡಿ ರೈತರ ಹೆಸರಿನಲ್ಲಿ ಲೇಔಟ್‌ಗಳಿಗೆ ವಾಣಿಜ್ಯ ಮಳಿಗೆಗಳಿಗೆ ಅಳವಡಿಸಿ ಕೋಟಿ ಕೋಟಿ ಲೂಟಿ ಮಾಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಇದರಲ್ಲಿ ಕಿರಿಯ ಅಧಿಕಾರಿಗಳು ಹಿರಿಯ ಅಧಿಕಾರಿಗಳವರಿಗೆ ಬೆಸ್ಕಾಂ ಇಲಾಖೆಯನ್ನು ಮಾರಾಟ ಮಾಡುವ ಮಟ್ಟಕ್ಕೆ ಇಲಾಖೆ ಹದಗೆಟ್ಟಿದೆ ಎಂದು ಆರೋಪ ಮಾಡಿದರು.
ಪ್ರತಿ ದಿನ ಬೆಸ್ಕಾಂ ಅಧಿಕಾರಿಗಳು ತಮಗೆ ಇಷ್ಟ ಬಂದ ರೀತಿ ವಿದ್ಯುತ್‌ನ್ನು ಸಂಜೆ ವೇಳೆ ಕಡಿತ ಮಾಡಿ ಗಡಿಭಾಗದ ರೈತರು ಮತ್ತು ವಿದ್ಯಾರ್ಥಿಗಳ ಜೀವನದ ಜೊತೆ ಚಲ್ಲಾಟ ವಾಡುವ ಜೊತೆಗೆ ಸ್ಥಳೀಯ ಗುತ್ತಿಗೆದಾರರನ್ನು ನಿರ್ಲಕ್ಷೆ ಮಾಡಿ ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಿ ಕಳಪೆ ತಂತಿ ಕಂಬ ಮತ್ತಿತರ ಸಾಮಗ್ರಿಗಳನ್ನು ಅಳವಡಿಸಲು ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದರು.
ಬೆಸ್ಕಾಂ ಇಲಾಖೆ ಅವ್ಯಸ್ಥೆ ಹಾಗೂ ಗ್ರಾಹಕರಿಲ್ಲದ ಸಭೆ ಮಾಡುವ ಅಧಿಕಾರಿಗಳ ವಿರುದ್ದ ೨೪ ರ ಮಂಗಳವಾರ ಬೆಸ್ಕಾಂ ಇಲಾಖೆ ಪ್ರಗತಿ ಪರಿಶೀಲನೆಗೆ ಬರುತ್ತಿರುವ ಹಿರಿಯ ಅಧಿಕಾರಿಗಳಿಗೆ ಕಪ್ಪು ಬಟ್ಟಿ ಪ್ರದರ್ಶನ ಮಾಡುವ ಮುಖಾಂತರ ಅವ್ಯವಸ್ಥೆಯನ್ನು ಸರಿಪಡಿಸುವ ಹೋರಾಟ ಮಾಡುವ ಎಚ್ಚರಿಕೆಯನ್ನು ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಎಇಇ ಜರ್ನಾಧನ ನಾವು ಪತ್ರಿಕಾ ಹೇಳಿಕೆ ನೀಡಿದ್ದೇವೆ. ಗ್ರಾಹಕರು ಬಂದಿಲ್ಲ ನಮ್ಮದೇ ತಪ್ಪು ಇದೆ. ಮುಂದೆ ಈ ರೀತಿಯಾಗದಂತೆ ನಡೆದುಕೊಳ್ಳುತ್ತೇವೆ ಜೊತೆಗೆ ಬೆಸ್ಕಾಂ ಇಲಾಖೆಯ ಅವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು. ಸಭೆಯಲ್ಲಿ ಮಂಗಸನಮದ್ರ ತಿಮ್ಮಣ್ಣ, ಶಿವಾರೆಡ್ಡಿ, ಅಧಿಕಾರಿಗಳು ಹಾಜರಿದ್ದರು.