ಆತನ ಹೆಸರು ಧನುಷ್. ಸದ್ಯ ಧನುಷ್ ಮದುವೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಟೀಕೆ ಮಾಡಿದರೆ, ಇನ್ನು ಕೆಲವರು ಈತನನ್ನು ವರಿಸಿದ ವಧುವನ್ನ ಬಾಯಿತುಂಬಾ ಹೊಗಳುತ್ತಿದ್ದಾರೆ. ಇಷ್ಟಕ್ಕೂ ಏನಿದು ಕಥೆ..? ವಿವರ ಇಲ್ಲಿದೆ.
ತಮಿಳು ಸ್ಟಾರ್ ಹೀರೋ, ಮಾಜಿ ಶಾಸಕ, ಮಾಜಿ ಸಂಸದ, ಮಾಜಿ ಕೇಂದ್ರ ಸಚಿವ ಸಾಫ್ಟ್‌ವೇರ್ ಉದ್ಯಮಿ ನೆಪೋಲಿಯನ್ ಸುಪುತ್ರ ಧನುಷ್. ಕೋಟಿ ಕೋಟಿ ಆಸ್ತಿ ಒಡೆಯ. ಈತ ಬೆಳೆಯುತ್ತಾ ಹೋದಂತೆ ಈತನಿಗೆ ಅಪರೂಪದ ಕಾಯಿಲೆಯೊಂದು ಒಕ್ಕರಿಸಿದೆ. ಆ ಕಾಯಿಲೆಯ ಹೆಸರು ಸ್ನಾಯು ಕ್ಷಯ(Muscular dystrophy). ಅಂದರೆ ಈತನ ಸ್ನಾಯುಗಳು ವಯಸ್ಸಾಗುತ್ತಾ ಆಗುತ್ತಾ ಹೋದಂತೆ ಕ್ಷಯವಾಗುತ್ತಾ, ಕ್ಷೀಣಿಸುತ್ತಾ, ದುರ್ಬಲವಾಗುತ್ತಾ ಹೋಗುತ್ತವೆ. ಈ ಕಾಯಿಲೆಯ ಸ್ಥಿತಿಯಲ್ಲಿರುವ ಧನುಷ್ ಗೆ ಈಗ ಕೈಕಾಲು ಎತ್ತುವುದಕ್ಕೂ ಆಗದ ಸ್ಥಿತಿ ಪ್ರಸ್ತುತ ಇದೆ.
ಈತನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿರುವ ನೆಪೋಲಿಯನ್ ದಂಪತಿ, ಇವತ್ತಿಗೂ ಅಲ್ಲಿಯೇ ಇದ್ದು, ಚಿಕಿತ್ಸೆ ಕೊಡಿಸುತ್ತಲೇ ಇದ್ದಾರೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಕೋಟಿ ಕೋಟಿ ಖರ್ಚಾಗುತ್ತಿದೆ. ಆದರೆ, ಧನುಷ್ ಆರೋಗ್ಯದಲ್ಲಿ ಯಾವ ಚೇತರಿಕೆಯೂ ಆಗುತ್ತಿಲ್ಲ ಎಂಬುದು ನೋವಿನ ಸಂಗತಿ.
ಈತನ ಮಲಮೂತ್ರ ವಿಸರ್ಜನೆಯನ್ನೂ ಬೇರೊಬ್ಬರು ಮಾಡಿಸಬೇಕು. ಬಟ್ಟೆಯನ್ನು ತೊಡಿಸಬೇಕು. ಈತನಿಗೆ ಲೈಂಗಿಕ ಶಕ್ತಿಯೂ ಇಲ್ಲ ಎನ್ನಲಾಗುತ್ತಿದೆ. ಹೀಗಿದ್ದರೂ, ತಮ್ಮ ಮಗನಿಗೆ ಮದುವೆ ಮಾಡಬೇಕು ಎಂದು ತಂದೆ ಆಸೆಪಟ್ಟು ಮದುವೆ ಮಾಡಿದ್ದಾರೆ.
ನೆಪೋಲಿಯನ್ ದಂಪತಿಯ ಈ ಆಸೆಯನ್ನು ಈಡೇರಿಸಲು ಧನುಷ್ ನನ್ನು ಮದುವೆಯಾಗಲು ಅಕ್ಷಯ ಎಂಬ ಹುಡುಗಿ ಮುಂದೆ ಬಂದಳು. ಈಗ ಆಕೆಯ ಜೊತೆ ಧನುಷ್ ಮದುವೆಯಾಗಿದೆ. ಜಪಾನ್ ಟೋಕಿಯೋದಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಧನುಷ್-ಅಕ್ಷಯ ಸತಿಪತಿಗಳಾಗಿದ್ದಾರೆ.
ಈಗ ಟೀಕೆ ಆಗುತ್ತಿರುವುದು ಇದಕ್ಕೆ. ದೈಹಿಕವಾಗಿ ಯಾವ ಶಕ್ತಿಯೂ ಇಲ್ಲದವನನ್ನು ಈ ಹುಡುಗಿ ಮದುವೆಯಾಗುವುದಕ್ಕೆ ಆತನ ಹೆಸರಲ್ಲಿದ್ದ ಕೋಟಿ ಕೋಟಿ ಆಸ್ತಿಯೇ ಕಾರಣ, ದುಡ್ಡಿದ್ದರೆ ಹುಡುಗಿಯರು ಎಂಥವನನ್ನು ಬೇಕಾದರೂ ಮದುವೆ ಆಗ್ತಾರೆ.. ಎಂದೆಲ್ಲ ಟೀಕೆ ಮಾಡ್ತಿದ್ದಾರೆ.
ಹಾಗಂತ ಎಲ್ಲರದ್ದೂ ಟೀಕೆ, ಲೇವಡಿ ಅಲ್ಲ. ಕೆಲವರು ಹೊಗಳಿಯೂ ಇದ್ದಾರೆ. ಎಲ್ಲರೂ ದೈಹಿಕವಾಗಿ ಸರಿ ಇರುವ ವ್ಯಕ್ತಿಯನ್ನಷ್ಟೇ ಮದುವೆ ಆಗುವುದಾಗಿದ್ದರೆ, ಜಗತ್ತಿನ ಕೋಟ್ಯಂತರ ವಿಕಲಚೇತನರು ಮದುವೆಯೇ ಆಗುತ್ತಿರಲಿಲ್ಲ. ಆಕೆಯನ್ನು ಟೀಕೆ ಮಾಡಬೇಡಿ ಎಂದು ಹೇಳುವವರೂ ಇದ್ದಾರೆ.
ಹಾಗಂತ ಅಕ್ಷಯ, ಅವಿದ್ಯಾವಂತೆಯೇನಲ್ಲ. ತೀರಾ ಬಡಕುಟುಂಬದವಳೂ ಅಲ್ಲ. ನರ್ಸಿಂಗ್ ಓದಿರುವ ಈಕೆ, ಈಗ ಧನುಷ್ ಅವರನ್ನು ವಿವಾಹವಾಗಿದ್ದಾರೆ.