ಪುರೋಹಿತರಿಂದ ರಾಜದಂಡ ಸೆಂಗೋಲ್ ಸ್ವೀಕರಿಸಿದ ಪ್ರಧಾನಿ ಮೋದಿಯವರು ಲೋಕಸಭಾ ಸ್ಪೀಕರ್ ಆಸನದ ಬಳಿ ಪ್ರತಿಷ್ಠಾಪಿಸುವ ಮೂಲಕ ನೂತನ ಸಂಸತ್ ಭವನ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ.
ಪೂಜಾ ವಿಧಾನಗಳು ಮುಗಿದ ಬಳಿಕ ಬಹುಚರ್ಚಿತ ರಾಜದಂಡವಾದ ‘ಸೆಂಗೋಲ್’ ಅನ್ನು ತಮಿಳುನಾಡಿನ ವಿವಿಧ ಅಧೀನಂಗಳಿಂದ ಪ್ರಧಾನಿ ಮೋದಿ ಅವರಿಗೆ ಹಸ್ತಾಂತರ ಮಾಡಲಾಯಿತು.
ಬಳಿಕ ಪವಿತ್ರ ರಾಜದಂಡದೊಂದಿಗೆ ಮೋದಿ ನಾದಸ್ವರ ಮತ್ತು ವೇದ ಮಂತ್ರಗಳ ಪಠಣಗಳ ನಡುವೆ ಮೆರವಣಿಗೆಯಲ್ಲಿ ಹೊಸ ಸಂಸತ್ ಭವನಕ್ಕೆ ಸೆಂಗೋಲ್ ನ್ನು ಕೊಂಡೊಯ್ದರು.
ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ನಿಗದಿಪಡಿಸಲಾಗಿದ್ದ ವಿಶೇಷ ಆವರಣದಲ್ಲಿ ರಾಜದಂಡವನ್ನು ಸ್ಪೀಕರ್ ಓಂ ಬಿರ್ಲಾ ಅವರ ಸಮೇತ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿ ಇಡಲಾಗಿದ್ದ ಜ್ಯೋತಿಯನ್ನ ಬೆಳಗಿಸುವ ಮೂಲಕ ನೂತನ ಸಂಸತ್ ಭವನದ ಉದ್ಘಾಟನೆಗೆ ಅಧಿಕೃತ ಚಾಲನೆ ನೀಡಿದರು.
ಸೆಂಗೋಲ್ ಸ್ಥಾಪನೆಯ ಬಳಿಕ ಅಲ್ಲಿಂದ ಹೊರಬಂದ ಪ್ರಧಾನಿ ಮೋದಿ ಅವರು, ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕೆಲ ಕಾರ್ಮಿಕರಿಗೆ ಗೌರವ ಸಲ್ಲಿಸಿದರು. ಶಾಲು ಮತ್ತು ಸ್ಮರಣಿಗೆ ನೀಡಿ ಅವರನ್ನು ಸನ್ಮಾನಿಸಿದರು. ಬಳಿಕ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಗುರುತಿಸಲು ಫಲಕವೊಂದನ್ನು ಮೋದಿಯವರು ಅನಾವರಣಗೊಳಿಸಿದರು.
ಇದಾದ ಬಳಿಕ ಸಂಸತ್ನ ಲಾಬಿಯಲ್ಲಿ ಏರ್ಪಡಿಸಲಾಗಿದ್ದ ಸರ್ವಧರ್ಮ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದರು.
ಹಿಂದೂ, ಮುಸ್ಲಿಂ, ಜೈನ, ಬೌದ್ಧ, ಕ್ರೈಸ್ತ ಧರ್ಮ ಸೇರಿದಂತೆ ಎಲ್ಲ ಧರ್ಮಗಳ ಮುಖಂಡರು ಪ್ರಾರ್ಥನೆ ಸಲ್ಲಿಸಿದರು. ನೂತನ ಸಂಸತ್ ಕಟ್ಟಡವು ಐತಿಹಾಸಿಕ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗಲಿ ಎಂದು ಹರಸಿದರು.
ಈ ವೇಳೆ ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಎಸ್ ಜೈಶಂಕರ್ ಮತ್ತು ಜಿತೇಂದ್ರ ಸಿಂಗ್, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ, 25 ಪಕ್ಷಗಳ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿಗಳು ಮತ್ತು ಸಚಿವರು, ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.