ನೀರಿನ ತೊಟ್ಟಿಗಳಲ್ಲಿ ಪಾಚಿ ಸಂಗ್ರಹ: ಸ್ವಚ್ಛಗೊಳಿಸದೇ ಗ್ರಾ.ಪಂ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಲಹಳ್ಳಿ ಗ್ರಾಮದಲ್ಲಿರುವ ನೀರಿನ ತೊಟ್ಟಿಗಳಲ್ಲಿ ಪಾಚಿ(ಕೊಪ್ಪಿಜೊಂಡು) ಸಂಗ್ರಹವಾಗಿದ್ದು, ಸ್ವಚ್ಛಗೊಳಿಸದೇ ಗ್ರಾ.ಪಂ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತೊಟ್ಟಿಯಲ್ಲಿ ಸಂಪೂರ್ಣ ಪಾಚಿ ಸಂಗ್ರಹವಾಗಿದ್ದು, ನೀರು ಬಳಕೆಗೆ ಬಾರದಂತಾಗಿದೆ.‌ ಜನ-ಜಾನುವರು, ಆಡು, ಕುರಿ, ಮೇಕೆಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸಲು ಹಾಗೂ ರೈತರಿಗೆ ಅನುಕೂಲವಾಗಲೆಂದು ಈ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ತೊಟ್ಟಿಯ ಸುತ್ತ ಮಲಿನ ನೀರು ನಿಂತು ದುರ್ವಾಸನೆ ಬೀರುತ್ತಿದ್ದು, ಕಾಲಿಡಲಾಗದ ಪರಿಸ್ಥಿತಿ ಇದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಪಾಚಿ ನೀರು ಕುಡಿದ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಕೂಡಲೇ ಸಂಬಂಧಿಸಿದ ಗ್ರಾ.ಪಂ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತೊಟ್ಟಿ ಶುಚಿಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸಾಕಾಗಿ ಇಂದು ಊರಿನ ಯುವಕರು ಸೇರಿ ಗಿಡಗಂಟಿಗಳನ್ನು ತೆರವುಗೊಲಿಸಿ, ತೊಟ್ಟಿಗಳನ್ನು ಸ್ವಚ್ಛಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ…

ಗ್ರಾಮದಲ್ಲಿ ಒಟ್ಟು 4 ಮಿನಿ ಟ್ಯಾಂಕ್ ಗಳು, ಮೂರು ತೊಟ್ಟಿಗಳನ್ನು ನಿರ್ಮಾಣ‌ ಮಾಡಲಾಗಿದೆ. ಆದರೆ ಇವುಗಳನ್ನು ಹಲವು ತಿಂಗಳುಗಳಿಂದ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ನಿರ್ವಹಣೆ ಮಾಡದೇ ಬೇಜವಾಬ್ದಾರಿ ಮೆರೆಯುತ್ತಿದ್ದಾರೆ. ಇದರಿಂದ ತೊಟ್ಟಿ ಹಾಗೂ ಟ್ಯಾಂಕ್ ಗಳ ಸುತ್ತಾಮುತ್ತಾ ಪಾಚಿ, ಗಿಡಗಂಟಿಗಳು ಬೆಳೆದು ಸೊಳ್ಳೆಗಳ ತಾಣವಾಗಿದೆ. ರೋಗರುಜಿನಗಳ ಭೀತಿಯಲ್ಲಿ ಗ್ರಾಮಸ್ಥರು ಇದ್ದಾರೆ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *