ನಿಷ್ಠೆಯಿಂದ, ಪ್ರಾಮಾಣಿಕವಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಪೊಲೀಸ್ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದ ನಂತರ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಯಾವುದೇ ಅಲಕ್ಷ್ಯತೆ, ನಿರ್ಲಕ್ಷ್ಯತೆ, ಬೇಜವಾಬ್ದಾರಿತನವನ್ನು ಸಹಿಸುವುದಿಲ್ಲ. ಇಂಟೆಲಿಜೆನ್ಸ್ ನಲ್ಲಿ ಪ್ರತ್ಯೇಕ ನೇಮಕಾತಿ ಮತ್ತು ತರಬೇತಿಯ ಹೆಚ್ಚಳ ಮಾಡಲಾಗುವುದು. ಬೆಂಗಳೂರಿನಲ್ಲಿ 1.50 ಕೋಟಿ ಜನಸಂಖ್ಯೆಯಿದ್ದು, ಹೆಚ್ಚು ಜವಾಬ್ದಾರಿಗಳನ್ನು ವಹಿಸಲು ಹೆಚ್ಚುವರಿ ಡಿಸಿಪಿ ಹುದ್ದೆಗಳನ್ನು ಸೃಜಿಸಲಾಗುತ್ತಿದೆ ಎಂದರು.
ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಸೈಬರ್ ಪೋಲಿಸ್ ಠಾಣೆಗಳಲ್ಲಿ ಎಸಿಪಿ/ಡಿಸಿಪಿ ಮಟ್ಟದ ಅಧಿಕಾರಿಗಳ ನೇಮಕ ಮಾಡಲಾಗುವುದು, ದಲಿತರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳೂ ಹೆಚ್ಚುತ್ತಿದ್ದು , ಇವುಗಳನ್ನು ನಿಯಂತ್ರಿಸಿ, ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆನ್ ಲೈನ್ ನಲ್ಲಿ ಎಫ್‍ಐಆರ್ ದಾಖಲಿಸಲು ತೊಂದರೆಯಾಗುತ್ತಿದ್ದು ಈ ಬಗ್ಗೆ ಸರಿಪಡಿಸಲು ಕ್ರಮ ವಹಿಸಲಾಗುವುದು. ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಸುವರ್ಣ ಪೋಲಿಸ್ ಭವನ ನಿರ್ಮಾಣ ಮಾಡಲಾಗುವುದು. ಸುವರ್ಣ ಮಹೋತ್ಸವದ ಅಂಗವಾಗಿ ಎಲ್ಲಾ ಪೊಲೀಸರಿಗೆ ಬೆಳ್ಳಿ ಪದಕ ನೀಡಲಾಗುವುದು. ವೈದ್ಯಕೀಯ ತಪಾಸಣಾ ಭತ್ಯೆ 1000 ದಿಂದ 1500 ಕ್ಕೆ ಹೆಚ್ಚಳ ಮಾಡಲಾಗುವುದು. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸರ್ಕಾರದ ನಿರ್ದೇಶನದ ಮೇರೆಗೆ ಕಳೆದ 6 ತಿಂಗಳಲ್ಲಿ ಪೋಲೀಸರು ದಾಳಿ ಮಾಡಿ 27 ಕೋಟಿ ಮೌಲ್ಯದ 4,484 ಕೆಜಿ ಗಾಂಜಾ, 23 ಕೆಜಿ ರಾಸಾಯನಿಕ ಮಾದಕ ವಸ್ತುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಇವೆಲ್ಲವನ್ನೂ ಫೆಬ್ರವರಿ ಮೊದಲ ವಾರದಲ್ಲಿ ನಾಶಪಡಿಸಲು ಅನುಮತಿ ನೀಡಲಾಗಿದೆ. ಮಾದಕ ವಸ್ತು ಹಾಗೂ ಸೈಬರ್ ಅಪರಾಧಗಳ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಪ್ರತಿ ಸಿಇ ಎನ್ ಠಾಣೆಗಳಲ್ಲಿ ಇನ್ಸ್‍ಪೆಕ್ಟರ್ ಬದಲಾಗಿ ಡಿವೈಎಸ್‍ಪಿ ಅಥವಾ ಎಸಿಪಿ ಮಟ್ಟದ ಅಧಿಕಾರಿಗಳ ನೇಮಕ ಮಾಡಲಾಗುವುದು ಎಂದರು.
ಜಿಲ್ಲೆಗಳಲ್ಲಿ ಪೊಲೀಸ್ ರಕ್ಷಣಾಧಿಕಾರಿಗಳ ಜೊತೆಗೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳ ಹುದ್ದೆ ಸೃಜಿಸಿದಂತೆಯೇ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಬೆಂಗಳೂರಿನಲ್ಲಿ ಎಂಟು ಡಿಸಿಪಿಗಳ ಜೊತೆಗೆ ಎಂಟು ಹೆಚ್ಚುವರಿ ಡಿಸಿಪಿಗಳ ಹುದ್ದೆ ಸೃಜನೆ ಮಾಡಲಾಗುವುದು. ಉತ್ತಮ ಕಾನೂನು ಸುವ್ಯವಸ್ಥೆ ರಾಜ್ಯದ ಅಭಿವೃದ್ಧಿಗೆ ಪೂರಕ. ಇದರಿಂದ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಠಿ ಹಾಗೂ ಆರ್ಥಿಕತೆಯ ಹೆಚ್ಚಳ ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ ಕೋಮುಗಲಭೆಗಳು ನಡೆದಿಲ್ಲ, ಇದು ಉತ್ತಮ ಕಾನೂನು ಸುವ್ಯವಸ್ಥೆಗೆ ಸಾಕ್ಷಿ. ಆದರೆ ಸೈಬರ್ ಕ್ರೈಂ ಹೆಚ್ಚಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಬಳಸಿ ಸೈಬರ್ ಅಪರಾಧಗಳ ನಿಗ್ರಹಿಸಿ, ಅಪರಾಧ ಪತ್ತೆ ಹಚ್ಚಬೇಕು. ಪೊಲೀಸರು ಜನಸ್ನೇಹಿಯಾಗಿರಬೇಕು. ನೊಂದವರಿಗೆ ಸಾಂತ್ವನ ಹೇಳಿ, ಅವರ ಕಷ್ಟಗಳಿಗೆ ಸ್ಪಂದಿಸಬೇಕು. ಪೊಲೀಸರ ಮೇಲೆ ವಿಶ್ವಾಸ ಬರುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಎಫ್ ಐ ಆರ್ ದಾಖಲಾದ ನಂತರ ಗುಣಮಟ್ಟದ ತನಿಖೆಯಾಗಬೇಕು, ಇದರಿಂದ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬಹುದು. ಹಿರಿಯ ಅಧಿಕಾರಿಗಳು ತನಿಖಾ ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. ರಾಷ್ಟ್ರ ಸರಾಸರಿ 33% ಇದೆ.ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷೆಯಾಗಬೇಕು. ಈ ವರ್ಗದವರು ಭಯದ ವಾತಾವರಣದಲ್ಲಿರಬಾರದು. ಇಂತಹ ಪ್ರಕರಣದಲ್ಲಿ 60 ದಿನದೊಳಗೆ ಚಾರ್ಜುಶೀಟ್ ಸಿದ್ಧಪಡಿಸಿ, ನ್ಯಾಯಾಲಯಕ್ಕೆ ಸಲ್ಲಿಸಬೇಕು. ಒಟ್ಟಾರೆ ಶಿಕ್ಷೆ ಪ್ರಮಾಣ ಹೆಚ್ಚಾದರೆ, ಅಪರಾಧ ಪ್ರಕರಣಗಳು ಇಳಿಮುಖವಾಗುತ್ತದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಬೀಟ್ ವ್ಯವಸ್ಥೆ ಸಮರ್ಪಕವಾಗಿರಬೇಕು. ರಾತ್ರಿ ಹಗಲು ನಡೆಯುವ ಕಳ್ಳತನಗಳ ನಿಗ್ರಹಕ್ಕೆ ಹೊಯ್ಸಳ ಮೇಲ್ವಿಚಾರಣೆ ಇರಬೇಕು. ಚುನಾವಣಾ ಸಂದರ್ಭದಲ್ಲಿ ರೌಡಿಗಳು, ರೂಢಿಗತ ಅಪರಾಧಿಗಳನ್ನು ಗುರುತಿಸಿ , ಅವರ ಮೇಲೆ ನಿಗಾ ಇರಿಸುವ ಜೊತೆಗೆ ಕೋಮುಗಲಭೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪೊಲೀಸರಿಗೆ ನಮ್ಮ ಸರ್ಕಾರ ಸಂಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದೆ. ಪೊಲೀಸರ ಕೆಲಸದಲ್ಲಿ ಮೂಗು ತೂರಿಸಬಾರದು ಎನ್ನುವುದು ನನ್ನ ಬದ್ಧತೆ. ಆದರೆ ನಾವು ಫ್ರೀ ಹ್ಯಾಂಡ್ ಕೊಟ್ಟಿದ್ದು ದುರುಪಯೋಗ ಆಗಬಾರದು. ಅದು ಜನರಿಗೆ ಅನುಕೂಲ ಆಗುವಂತಿರಬೇಕು. ನಮ್ಮದು ಜಾತ್ಯತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು ಶೋಷಣೆಗೆ ಒಳಗಾದವರಿಗೆ ವ್ಯವಸ್ಥೆ ಮೇಲೆ ನಂಬಿಕೆ ಬರಬೇಕಾದರೆ ದೌರ್ಜನ್ಯ ಪ್ರಕರಣಗಳ ತನಿಖೆಯ ಗುಣಮಟ್ಡ ಹೆಚ್ಚಾಗಬೇಕು. ವೈಜ್ಞಾನಿಕವಾಗಿ ಸಮರ್ಥ ಆರೋಪ ಪಟ್ಟಿ ಸಲ್ಲಿಕೆಯಾಗಬೇಕು ಎಂದರು.
ಕರ್ನಾಟಕ ನಾಮಕರಣಗೊಂಡು, ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ನೀಡಲಾಗುವುದು. ಖಾಲಿ ಇರುವ ಪೊಲೀಸ್ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಎಂದು ಹೇಳಿದರು.
ನಮ್ಮದು ಜಾತ್ಯತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು. ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಸಾಧ್ಯವಿದೆ. ಇದನ್ನು ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಮಾಡಬೇಕು ಎಂದು ತಿಳಿಸಿದರು.
ನಂತರ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಮೊಬೈಲ್ ಲ್ಯಾಬ್, ವಿಧಿ ವಿಜ್ಞಾನ ಮೊಬೈಲ್ ಲ್ಯಾಬ್ ವಾಹನ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ವಾಹನದ ಉನ್ನತೀಕರಣದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.
ಬಳಿಕ ಪೊಲೀಸ್ ಐಟಿ-V2, ITPA ಸರಳ ಆಪ್, ಪೊಲೀಸ್ ಮಿತ್ರ ಚಾಟ್ ಬಾಟ್, CG ನೋಂದಣಿ ಪೋರ್ಟಲ್, ರಾಜ್ಯ ಪೊಲೀಸ್ ಕೃತಕ ಬುದ್ದಿ ಮತ್ತೆ ತಂತ್ರಾಂಶ, ಆರ್ಥಿಕ ಇಂಟೆಲಿಜೆನ್ಸ್ ತಂತ್ರಾಂಶಗಳನ್ನು ಬಿಡುಗಡೆ ಮಾಡಿದರು. ಇದೇ ಹೊತ್ತಿನಲ್ಲಿ ಸಂಕ್ಷಿಪ್ತ ಸೈಬರ್ ಅಪರಾಧ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್, ಗೃಹ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ ಗೌಡ,…
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…
ಮಂಗಳವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಅವರು ಉಪರಾಷ್ಟ್ರಪತಿ…