ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ 20X30 ಅಳತೆಗೆ ಬದಲಾಗಿ 20×60 ಅಳತೆಯನಿವೇಶನಗಳನ್ನು ನೀಡಬೇಕು-ತಾಲೂಕು ಪ.ಜಾ, ಪ.ಪಂ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನಾಗರಾಜು ಬಚ್ಚಹಳ್ಳಿ ಆಗ್ರಹ

ದೊಡ್ಡಬಳ್ಳಾಪುರ : ನಿವೇಶನಕ್ಕಾಗಿ ಬೀದಿಗಿಳಿದು ಹೋರಾಟ ಮಾಡಿದ್ದು ಬಡವರು, ಹೋರಾಟದ ಫಲ ಅಶ್ರಯ ಯೋಜನೆಯ ನಿವೇಶನಗಳ ಹಂಚಿಕೆಗಾಗಿ 5 ಎಕರೆ ಜಮೀನು ಮಂಜೂರಾಗಿದೆ, ಅರ್ಹ ಬಡವರಿಗೆ ಹಂಚ ಬೇಕಾದ ನಿವೇಶನಗಳು ಶ್ರೀಮಂತರ ಪಾಲಾಗುತ್ತಿವೆ, ನಿವೇಶನಕ್ಕಾಗಿ ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ ಬಚ್ಚಹಳ್ಳಿ ದಲಿತರು.

ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಚ್ಚಹಳ್ಳಿ ಗ್ರಾಮದ ಸರ್ವೆ ನಂಬರ್ 10ರಲ್ಲಿ 5 ಎಕರೆ ಜಾಗ ಅಶ್ರಯ ಯೋಜನೆಗೆ ಮಂಜೂರಾಗಿದೆ, ನಿವೇಶನಗಳ ಹಂಚಿಕೆ ಮಾಡಲು ಅನ್ ಲೈನ್ ನಲ್ಲಿ ಅರ್ಜಿಯನ್ನ ಕರೆಯಲಾಗಿದೆ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯಿಂದ ಫಲಾನುಭವಿಗಳ ಪಟ್ಟಿಯನ್ನ ಮಾಡಲಾಗಿದ್ದು, ಪಟ್ಟಿಯಲ್ಲಿರೋರು ಬಹುತೇಕ ಎಕರೆ ಎಕರೆ ಜಮೀನು ಇರುವ ಶ್ರೀಮಂತರು, ನಿವೇಶನ ರಹಿತರಿಗೆ ಸಿಗಬೇಕಾದ ನಿವೇಶನಗಳನ್ನ ಕಬಳಿಸಲು ಶ್ರೀಮಂತರ ತಂಡವೊಂದು ಸಂಚು ನಡೆಸುತ್ತಿದೆ ಎಂದು ಹೋರಾಟಗಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಅರ್ಹ ಫಲಾನುಭವಿಗಳನ್ನ ಗುರುತಿಸಿ ಫಲಾನುಭವಿಗಳ ಪಟ್ಟಿ ಮಾಡುವಂತೆ ಬಚ್ಚಹಳ್ಳಿ ಮತ್ತು ಗೊಲ್ಲಹಳ್ಳಿ ತಾಂಡದ ದಲಿತರು ಇಂದು ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆಯನ್ನ ನಡೆಸಿದರು, ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ದಲಿತ ಮುಖಂಡರಾದ ಬಚ್ಚಹಳ್ಳಿ ನಾಗರಾಜು, ಬಡವರಿಗೆ ನಿವೇಶನ ಕೊಡಿಸಲು 2010ರಿಂದ ನಾವು ಹೋರಾಟ ಮಾಡುತ್ತಿದ್ದೇವೆ, ಅರ್ಹ ಫಲಾನುಭವಿಗಳ ಪಟ್ಟಿಯನ್ನ ಸರ್ಕಾರಕ್ಕೆ ಸಲ್ಲಿಸಿದ್ದೇವು, ನಮ್ಮ ಹೋರಾಟದ ಫಲ ಅಶ್ರಯ ಯೋಜನೆಗಾಗಿ 5 ಎಕರೆ ಜಮೀನು ಮಂಜೂರಾಗಿದೆ.

ಗ್ರಾಮ ಪಂಚಾಯಿತಿಯಿಂದ ನಿವೇಶನಗಳ ಹಂಚಿಕೆ ಪ್ರಾರಂಭವಾಗಿದೆ,ಪಂಚಾಯಿತಿ ಸಿದ್ದಪಡಿಸಿದ ಪಟ್ಟಿಯಲ್ಲಿ ಬಹುತೇಕ ಶ್ರೀಮಂತರಿದ್ದಾರೆ, ನಿವೇಶನಕ್ಕಾಗಿ ಹೋರಾಟ ಮಾಡಿದ ಬಡವರನ್ನ ಫಲಾನುಭವಿಗಳ ಪಟ್ಟಿಗೆ ಸೇರಿಸದಂತೆ ಸಂಚು ನಡೆಸಲಾಗಿದೆ, ಈ ಹಿಂದೆ ಮನೆ ಕಟ್ಟಲು ಅನುದಾನ ತೆಗೆದುಕೊಂಡಿದ್ದಾರೆಂಬ ಒಂದೇ ಕಾರಣವನ್ನಿಟ್ಟು ಬಡವರಿಗೆ ನಿವೇಶನ ಸಿಗದಂತೆ ಷಡ್ಯಂತ್ರ ಮಾಡಲಾಗುತ್ತಿದೆ ಎಂದರು.

ನಮ್ಮ ಆಗ್ರಹ ಇಷ್ಟೇ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳನ್ನು ಒಳಗೊಂಡಂತೆ ಒಂದು ಸಮಿತಿಯನ್ನು ರಚಿಸಬೇಕು. ಆ ಸಮಿತಿಯು ನಮ್ಮ ಗ್ರಾಮದ ಪ್ರತಿ ಮನೆಮನೆಯನ್ನು ಸಮೀಕ್ಷೆಗೆ ಒಳಪಡಿಸಬೇಕು. ಪ್ರತಿ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಂಡು ನೈಜ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದರು.

ಬಚ್ಚಹಳ್ಳಿ ನಿವಾಸಿ ಆನಂದಮ್ಮ ಮಾತನಾಡಿ, 40 ವರ್ಷಗಳ ಹಿಂದೆ ಹಂಚಿಕೆ ಮಾಡಲಾದ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ, ಒಂದೊಂದು ಕುಟುಂಬಗಳಲ್ಲಿ ನಾಲ್ಕೈದು ಮಕ್ಕಳಿದ್ದು, ಒಂದೇ ನಿವೇಶನವನ್ನ ನಾಲ್ಕೈದು ಭಾಗ ಮಾಡಿಕೊಂಡು 10 x10 ಅಳತೆಯ ಹಂದಿ ಗೂಡಿನಂತ ಶೀಟ್  ಮನೆಗಳಲ್ಲಿ ವಾಸವಾಗಿದ್ದೇವೆ, ಅದರಲ್ಲೇ ಹಸು, ಕೋಳಿ ಸಾಕೊಂಡು ಕಷ್ಟದ ಜೀವನ ಮಾಡುತ್ತಿದ್ದೇವೆ, ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು, ಇಲ್ಲದಿದ್ದಾರೆ ಉಗ್ರ ಹೋರಾಟ ಮಾಡುವುದ್ದಾಗಿ ಎಚ್ಚರಿಕೆಯನ್ನ ನೀಡಿದರು.

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್, ಮಂಜುಳಮ್ಮ, ಗೀತಾ ಬಾಯಿ, ಮಾಜಿ ಉಪಾಧ್ಯಕ್ಷ ಶ್ರೀನಿವಾಸ, ರೈತ ಸಂಘದ ಮುಖಂಡ ಸತೀಶ್ ಗೊಲ್ಲಹಳ್ಳಿ, ಮುನಿಯಪ್ಪ, ಹರೀಶ್ ನಾಯ್ಕ, ಮಂಜುನಾಯ್ಕ, ವಿಜಿ ನಾಯ್ಕ, ಹನುಮಂತೇಗೌಡ ಮತ್ತು ಬಚ್ಚಹಳ್ಳಿ ಗ್ರಾಮದ ಮಹಿಳೆಯರು ಮತ್ತು ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!