ಕಳೆದ 20ವರ್ಷಗಳಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಹುಟ್ಟೂರಿಗೆ ಬಂದ ಯೋಧ ಅನಂತ ರಾಜಗೋಪಾಲ ಅವರಿಗೆ ಗ್ರಾಮಸ್ಥರು, ಕುಟುಂಬದವರು, ಗೆಳೆಯರು ಪಟಾಕಿ ಸಿಡಿಸಿ, ಹೂವಿನ ಮಳೆಗರೆದು ಭವ್ಯ ಸ್ವಾಗತ ಕೋರಿದರು.
ತೆರೆದ ವಾಹನದಲ್ಲಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮೂಲಕ ಕರೆ ಕರೆತರಲಾಯಿತು. ಭಾರತ್ ಮಾತಾಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಹಲವಾರು ಯುವಕರ ಕೈಯಲ್ಲಿ ರಾಷ್ಟ್ರ ದ್ವಜ ಹಾರಾಡುತ್ತಿತ್ತು.
ಇದು ತಾಲ್ಲೂಕಿನ ತೂಬಗೆರೆ ಗ್ರಾಮದಲ್ಲಿ ನಡೆದ ಸಂಭ್ರಮ. ತೂಬಗೆರೆ ಗ್ರಾಮದ ವೆಂಕಟೇಶಪ್ಪ- ಶಾಂತಮ್ಮ ದಂಪತಿಯ ಪುತ್ರನಾದ ಅನಂತ ರಾಜಗೋಪಾಲ ಅವರು ಸಿಆರ್‌ಪಿಎಫ್‌ನಲ್ಲಿ ಕೋಬ್ರಾ ಕಮಾಂಡೋ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿ, ಭಾನುವಾರ ಸ್ವಗ್ರಾಮಕ್ಕೆ ಮರಳಿದ ಅವರನ್ನು ಪಶು ಆಸ್ಪತ್ರೆಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.
ಮಗನನ್ನು ಸ್ವಾಗತಿಸಲು ತಂದೆ, ತಾಯಿ, ಸಹೋದರಿಯರು, ಮಕ್ಕಳು ಸೇರಿದಂತೆ ಕುಟುಂಬದವರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗೆಳೆಯರ ಬಳಗವೇ ತ್ರಿವರ್ಣ ಧ್ವಜಗಳನ್ನು ಹಿಡಿದು ಹಾರ ತುರಾಯಿಗಳಿಂದ ಬರಮಾಡಿಕೊಂಡರು.
ಯೋಧನ ಸೇವೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿ ಗೌರವ ಸಮರ್ಪಿಸಿದರು. ಭಾರತ್ ಮಾತಾಕಿ ಜೈ ಎಂಬ ಘೋಷಣೆಯೊಂದಿಗೆ ಹೂವಿನ ಸುರಿಮಳೆಯ ಜೊತೆಗೆ ಗೋಪಾಲ ಅವರಿಗೆ ಆರತಿ ಎತ್ತಿ ಸ್ವಾಗತಿಸುವ ಮೂಲಕ ಯೋಧನಿಗೆ ಪ್ರೀತಿ, ಅಭಿಮಾನದ ಗೌರವ ಸಲ್ಲಿಸಿ ಮೆರವಣಿಗೆ ಮಾಡಲಾಯಿತು.
ಅನಂತ ರಾಜಗೋಪಾಲ್ ಅವರು ಸಿಆರ್‌ಪಿಎಫ್ ಯೋಧನಾಗಿ ದೇಶದ ವಿವಿಧ ರಾಜ್ಯಗಳಾದ ಜಮ್ಮು -ಕಾಶ್ಮೀರ, ರಾಜಸ್ಥಾನ, ಗುಜರಾತ್, ಪಂಜಾಬ್, ಮೇಘಾಲಯ, ಮಣಿಪುರ, ತ್ರಿಪುರದಲ್ಲಿ ಸೇವೆ ಸಲ್ಲಿಸಿದ್ದು, ಇತ್ತೀಚಿಗೆ ಕಮಾಂಡೋ ಸೇವೆ ಸಲ್ಲಿಸಿ ಬಿಹಾರದ ಗಯಾದಿಂದ ನಿವೃತ್ತಿ ಹೊಂದಿದರು.
ಕಾರ್ಯಕ್ರಮದಲ್ಲಿ ಮಾಜಿ ಯೋಧರಾದ ರಾಘವೇಂದ್ರ, ಮಂಜುನಾಥ್, ತೂಬಗೆರೆ ಹೋಬಳಿ, ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿ ಸಿದ್ದಪ್ಪ, ಪಂಚಾಯಿತಿ ಸದಸ್ಯ ಕೃಷ್ಣಪ್ಪ,, ಪುನೀತ್ ರಾಜಕುಮಾರ್ ಅಭಿಮಾನಿ ಸಂಘದ ಗಂಗಾಧರ್, ರಾಮಾಂಜನಿ, ಮುಖಂಡರಾದ ಸುನಿಲ್, ಗ್ರಾಮಸ್ಥರು ಪಾಲ್ಗೊಂಡಿದ್ದರು.