ವಿಧಾನಸೌಧ, ಆ ಇಲಾಖೆ, ಈ ಆಫೀಸ್ ಹೀಗೆ… ಅಲ್ಲಿ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಅಮಾಯಕ ನಿರುದ್ಯೋಗಿಗಳಿಗೆ ನಂಬಿಸಿ ಹಣ ಪೀಕಿ ಯಾಮಾರಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ…
ವಂಚನೆಕೋರರಿಗೆ ಬಡವರು, ನಿರುದ್ಯೋಗ ಯುವಕ-ಯುವತಿಯರೇ ಟಾರ್ಗೆಟ್. ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿ ಸಿಕ್ಕಿದ್ರೆ ಸಾಕು ನೇರವಾಗಿ ಫೋನ್ ಅಥವಾ ಮೆಸೇಜ್ ಬರುತ್ತೆ. ಇಲ್ಲದಿದ್ದರೆ ನಿಮಗೆ ಪರಿಚಯಸ್ಥರ ಮೊಬೈಲ್ ಗೆ ಕರೆ ಮಾಡಿ ಅವರ ಮೂಲಕ ನಿಮಗೆ ಕರೆ ಮಾಡಿಸುತ್ತಾರೆ. ಆಗ ನಿಮ್ಮ ಪರಿಚಯಸ್ಥರು ನಿಮಗೆ ಫೋನ್ ಮಾಡಿ ಕೆಲಸ ಇದೆ ನೋಡಿ, ಒಬ್ಬರ ಮೊಬೈಲ್ ನಂಬರ್ ಕೊಡ್ತೀನಿ ಮಾತಾಡಿ ಎಂದು ಹೇಳುತ್ತಾರೆ. ಆಗ ನೀವು ಆ ಮೊಬೈಲ್ ನಂಬರ್ ಪಡೆದು ಅಥವಾ ವಂಚನೆಕೋರರೇ ನೇರವಾಗಿ ನಿಮ್ಮ ಮೊಬೈಲ್ ಪಡೆದು ಮೋಸ ಮಾಡೊದಕ್ಕೆ ಶುರು ಮಾಡುತ್ತಾರೆ.
ನಿಮ್ಮ ಫೋನ್ ನಂಬರ್ ಸಿಕ್ಕಿದ ಕೂಡಲೇ ನೇರವಾಗಿ ವಾಟ್ಸಾಪ್ ಮೂಲಕ Hi ಮಾಡಿ, ಕರೆ ಮಾಡುತ್ತಾರೆ. ಕರೆ ಮಾಡಿ ನಾನು ಮಂತ್ರಿ ಕಡೆಯವರು ಅಥವಾ ಕೆಪಿಎಸ್ಸಿಯಲ್ಲಿ ಕೆಲಸ ಮಾಡುತ್ತೇನೆ. ಹೀಗೆ ನಾನಾ ರೀತಿಯಾಗಿ ಹೇಳಿ, ಮಂತ್ರಿಗಳ ಕೋಟಾದಡಿ ನೇರ ನೇಮಕಾತಿ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಬಡವರನ್ನು ನೇಮಕ ಮಾಡಲಾಗುತ್ತಿದೆ. ನಿಮಗೆ ಆಸಕ್ತಿ ಇದ್ದಲ್ಲಿ ನಾವು ಹೇಳಿದ ದಾಖಲಾತಿಗಳನ್ನು ಪಿಡಿಎಫ್ ಮೂಲಕ ವಾಟ್ಸಾಪ್ ಮಾಡಬೇಕು. ನಾವು ಯಾರಿದಂಲೂ ಒಂದು ರೂಪಾಯಿ ಹಣ ಪಡೆಯುವುದಿಲ್ಲ. ಕೆಲಸ ಸಿಕ್ಕಿದ ಮೇಲೆ ನಮಗೆ ಕೆಟ್ಟ ಹೆಸರು ತರಬಾರದು. ಮೊದಲು ಕೆಲಸಕ್ಕೆ ಸೇರೋದು ನಿಮ್ಮ ತಂದೆ-ತಾಯಿಗೆ ಇಷ್ಷ ಇದಿಯಾ…? ನಿಮ್ಮ ತಂದೆ- ತಾಯಿಯ ಒಪ್ಪಿಗೆ ಪಡೆದು ನಮಗೆ ತಿಳಿಸಿ ಎಂದು ನಂಬಿಸುತ್ತಾರೆ. ಒಂದು ವೇಳೆ ಎಲ್ಲರ ಒಪ್ಪಿಗೆ ಇದೆ ಎಂದು ತಿಳಿಸಿದರೆ ಸಾಕು ಅಲ್ಲಿಂದ ನಿಮಗೆ ಟಾರ್ಚರ್ ಶುರುವಾಗುತ್ತದೆ.
ವಂಚನೆಕೋರರು ಯಾವುದೇ ಕಾರಣಕ್ಕೂ ಹುದ್ದೆಗೆ ಸಂಬಂಧಿಸಿದ ಅಧಿಕೃತ ನೇಮಕಾತಿ ನೋಟಿಫಿಕೇಶನ್, ಪೇಪರ್ ಸ್ಟೇಟ್ ಮೆಂಟ್ ಸೇರಿದಂತೆ ಯಾವುದನ್ನೂ ನಿಮಗೆ ಕಳಿಸುವುದಿಲ್ಲ. ಹಾಗೇ ನಿಮಗೆ ಎಲ್ಲಿಯೂ ಸಹ ಅವರ ಮೇಲೆ ಅನುಮಾನ ಬರದ ಹಾಗೇ ಮಾತನಾಡುತ್ತಾರೆ. ನೀವು ಬೇರೆಯವರ ಬಳಿ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕುವುದಕ್ಕೂ ಬಿಡದೇ ನಿಮಗೆ ಅವರ ಮೂಲಕ ಪದೇಪದೇ ಕರೆಗಳು ಬರುತ್ತಿರುತ್ತವೆ.
ನೀವು ವಾಟ್ಸಾಪ್ ಮೂಲಕ ಕೆವೈಸಿ ದಾಖಲೆಗಳು, ಮಾರ್ಕ್ಸ್ ಕಾರ್ಡ್, ಇ-ಮೇಲ್ ಐಡಿ, ಫೋಟೋ, ಸಹಿ ಕಳುಹಿಸಿದ್ದರೂ ಸಹ ನಿಮಗೆ ಮತ್ತೆ ಕರೆ ಮಾಡಿ ನಿಮ್ಮ ಹೆಸರು, ಮೊಬೈಲ್ ನಂಬರ್ ಮಾರ್ಕ್ಸ್, ರಿಜಿಸ್ಟರ್ ನಂಬರ್ ಸೇರಿದಂತೆ ಎಲ್ಲವೂ ಕೇಳಿ ಅವರೇ ಕಂಪ್ಯೂಟರ್ ನಲ್ಲಿ ನಮೂದಿಸುವ ನಾಟಕ ಮಾಡುತ್ತಾರೆ. ಈ ಹುದ್ದೆಗೆ ಮೂರರಿಂದ ನಾಲ್ಕು ಲಕ್ಷವಾಗುತ್ತದೆ. ಆದರೆ, ನಾನು ನಿಮ್ಮ ಬಳಿ ಒಂದು ರೂಪಾಯಿ ಕೂಡ ಪಡೆಯುವುದಿಲ್ಲ. ನನಗೆ ಅದು ಬೇಕಾಗುವುದಿಲ್ಲ ಎಂದು ನಂಬಿಸುತ್ತಾರೆ.
ಇಷ್ಟೆಲ್ಲಾ ಆದ ಮೇಲೆ ಇಲ್ಲಿಂದ ಈಚೆಗೆ ಹಣ ಕೇಳೋದಕ್ಕೆ ಶುರು ಮಾಡುತ್ತಾರೆ. ಅಪ್ಲಿಕೇಷನ್ ಫೀಜ್ ಇಷ್ಟಾಗುತ್ತೆ, ಅಧಿಕಾರಿಗಳು ಸಹಿ ಹಾಕಲು ಅಷ್ಟು ಆಗುತ್ತದೆ ಹೀಗೆ ಬೇರೆ ಬೇರೆ ಕೆಲಸಗಳಿಗೆ ಹಣ ಹಾಗುತ್ತದೆ ಎಂದು ಹೇಳಿ ಹಂತಹಂತವಾಗಿ ಹಣ ಪೀಕಲು ಮುಂದಾಗುತ್ತಾರೆ. ಫೋನ್ ಪೇ, ಗೂಗಲ್ ಪೇ ಮಾಡಿಸಿಕೊಳ್ಳುವುದಿಲ್ಲ. ಮನಿ ಟ್ರಾನ್ಸ್ ಫರ್ ಮಾಡಿ ಎಂದು ಪ್ರೈವೆಟ್ ಬ್ಯಾಂಕ್ ಅಕೌಂಟ್ ನಂಬರ್ ಕಳುಹಿಸುತ್ತಾರೆ. ಹಣ ಹಾಕುವುದು ತಡ ಮಾಡಬಾರದು ಕೆಲಸ ಆಗಲ್ಲ. ನೀವು ಹಾಕುವ ಹಣ ಮತ್ತೆ ನಿಮಗೆ ವಾಪಸ್ ಬರುತ್ತೆ, ಯಾವುದೇ ಕಾರಣಕ್ಕೂ ಹೆದರಬೇಡಿ ಎಂದು ನಂಬಿಸುತ್ತಾರೆ.
ಹಣ ಹಾಕೋವರೆಗೂ ಫೋನ್ ಕಟ್ ಮಾಡದೇ ನಮ್ಮ ಬಳಿ ಮಾತಾಡುತ್ತಿರುತ್ತಾರೆ. ಹಣ ಕಳುಹಿಸಿರುವುದು ದೃಢಪಡಿಸಿಕೊಂಡು ಫೋನ್ ಕಟ್ ಮಾಡುತ್ತಾರೆ.
ಆಮೇಲೆ ಅವರೇ ಒಂದು ದಿನಾಂಕ ನಿಗದಿ ಮಾಡಿ ಇಂತಾ ದಿನಾಂಕದಂದು ನಿಮ್ಮ ಪೋಷಕರೊಡನೆ ಎಲ್ಲಾ ಮೂಲ ದಾಖಲಾತಿಗಳನ್ನು ತೆಗೆದುಕೊಂಡು ವಿಧಾನಸೌಧಕ್ಕೆ ಅಥವಾ ಸಂಬಂಧಪಟ್ಟ ಇಲಾಖೆ, ಆಫೀಸ್ ಬಳಿ ಬಂದು ಅಧಿಕೃತ ನೇಮಕಾತಿ ಪ್ರತಿಯನ್ನು ಪಡೆದುಕೊಳ್ಳಿ ಎಂದು ತಿಳಿಸುತ್ತಾರೆ.
ಇಷ್ಟೆಲ್ಲಾ ಆದಮೇಲೆ ಒಂದು ವೇಳೆ ನೀವು ಇದಕ್ಕೆ ಅನುಮಾನಗೊಂಡು ಪ್ರಶ್ನೆ ಮಾಡೋದಕ್ಕೆ ಹೋಗಿ, ನಮಗೆ ಯಾವ ಹುದ್ದೆ ಬೇಡ ನಾವು ಕೊಟ್ಟಿರುವ ಹಣ ನಮಗೆ ವಾಪಸ್ ಮಾಡಿ ಎಂದಾಗ ಆಗ ಆ ಧಗಾಕೋರರು ಆಯ್ತು ಹಣ ವಾಪಸ್ ಮಾಡ್ತೀವಿ ಅಂತ ಹೇಳುತ್ತಾರೆ ಅಷ್ಟೆ. ಅಲ್ಲಿಂದಾಚೆಗೆ, ಅವರಿಗೆ ನೀವು ಎಷ್ಟು ಫೋನ್ ಮಾಡಿದರೂ ನಿಮ್ಮ ಫೋನ್ ಸ್ವೀಕರಿಸುವುದಿಲ್ಲ.
ಆದ್ದರಿಂದ, ಯಾರೂ ಸಹ ಇಂತಹ ವಂಚಕರಿಂದ ಮೋಸ ಹೋಗದೇ ಜಾಗೃತರಾಗಿರಬೇಕು. ವಂಚಕರಿಂದ ಫೋನ್ ಕರೆ ಬಂದರೆ ಕೂಡಲೇ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ಪೊಲೀಸ್ ಇಲಾಖೆಯು ಇಂತಹ ವಂಚಕರ ಮೇಲೆ ನಿಗಾ ಇಡಬೇಕು. ಒಂದು ವೇಳೆ ವಂಚಕರ ವಿರುದ್ಧ ದೂರು ಬಂದಲ್ಲಿ ಕೂಡಲೇ ವಂಚಕರನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಕಾನೂನಿನ ಶಿಕ್ಷೆ ವಿಧಿಸಿ ಮುಂದೆ ಈ ರೀತಿ ಯಾರಿಗೂ ಮೋಸಕ್ಕೆ ಒಳಗಾಗದ ರೀತಿ ನೋಡಿಕೊಳ್ಳಬೇಕು……