ನಿರಾಶ್ರಿತ ರೋಗ ಪೀಡಿತ ಹಿರಿಯ ನಾಗರಿಕ ವ್ಯಕ್ತಿಯ ರಕ್ಷಣೆ

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಇವರಿಗೆ ಬಂದ ಸಾರ್ವಜನಿಕ ಕರೆಯ ಮೇರೆಗೆ ನಗರದ ವೀರಭದ್ರನ ಪಾಳ್ಯದಲ್ಲಿ ನಿರಾಶ್ರಿತರಾಗಿ ಹತ್ತು ದಿನಗಳಿಂದ ಊಟ-ವಸತಿ, ರಕ್ಷಣೆಯಿಲ್ಲದೆ ಗಾಳಿ -ಚಳಿಯಲ್ಲಿ ನಲುಗಿದ್ದಂತಹ ಹಿರಿಯ ನಾಗರಿಕ ವ್ಯಕ್ತಿಯನ್ನು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯರ ಸಹಾಯವಾಣಿ ,ಸನ್ನದ್ಧ ಟ್ರಸ್ಟ್ ನ ಸಮಯ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳ ಕಾಳಜಿಯ ಸಹಕಾರದೊಂದಿಗೆ ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ.

ಹಿರಿಯ ನಾಗರಿಕ ವ್ಯಕ್ತಿಯು ನನಗೆ ಮಕ್ಕಳು ಮೊಮ್ಮಕ್ಕಳು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.
ವ್ಯಕ್ತಿಯು ಚೇತರಿಸಿಕೊಂಡ ನಂತರ ಪೋಷಕರು ದೊರೆತಲ್ಲಿ ಅವರ ಕುಟುಂಬಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ವ್ಯಕ್ತಿಯ ಗುರುತು ಬಲ್ಲವರು 9980860605 ನನಗೆ ನೇರವಾಗಿ ಕರೆ ಮಾಡಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ತಿಳಿಸಿದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಈ ರೀತಿಯ ಇನ್ನೂರಕ್ಕೂ ಹೆಚ್ಚು ನಿರಾಶ್ರಿತ ಹಿರಿಯ ನಾಗರಿಕ ಹಾಗೂ ಮಾನಸಿಕ ಖಿನ್ನತೆಗೊಳಗಾದವರನ್ನು ರಕ್ಷಿಸಿ ಪುನರ್ವಸತಿ ಗೊಳಿಸಿರುವುದು ಇಲಾಖೆಯ ಹೆಮ್ಮೆಯ ವಿಚಾರವಾಗಿದೆ.

ರಕ್ಷಣಾ ಕಾರ್ಯದಲ್ಲಿ ಇಲಾಖೆಯ ಜೊತೆ ಸಹಕಾರಿಯಾದ ಸನ್ನದ್ಧ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಭಾಸ್ಕರ್ ಎನ್ , ಹಿರಿಯ ನಾಗರಿಕರ ಸಹಾಯವಾಣಿ ಜಿಲ್ಲಾ ಸಂಯೋಜಕರಾದ ಸುರೇಶ್ , ದೊಡ್ಡಬಳ್ಳಾಪುರ ನಗರ ಪುನರ್ವಸತಿ ಕಾರ್ಯಕರ್ತರಾದ ವಿನಯ್ ಕುಮಾರ್, ಮಂಜುನಾಥ್, ರವಿಕುಮಾರ್ , ಸಮಾಜಸೇವಕ ಕೊಯಿರ ಕೃಷ್ಣಪ್ಪ ಹಾಜರಿದ್ದರು.

ಸಂಕಷ್ಟದಲ್ಲಿ ಸಿಲುಕಿದೆ ಹಿರಿಯ ನಾಗರಿಕರನ್ನು ಎಲ್ಲಾ ಸಂದರ್ಭದಲ್ಲಿ ರಕ್ಷಿಸಲು ಇಲಾಖೆ ಬದ್ದವಾಗಿದ್ದು ಮೌಲ್ಯಯುತ ಸಮಾಜದಲ್ಲಿ ಈ ರೀತಿ ಹಿರಿಯ ನಾಗರಿಕರನ್ನು ನಿರಾಶ್ರಿತರನ್ನಾಗಿ ಮಾಡುವುದು ಸರಿಯಲ್ಲ ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ,ಯಾವುದೇ ಹಿರಿಯ ನಾಗರಿಕರಿಗೆ ಆಶ್ರಯ ರಕ್ಷಣೆ ಮತ್ತು ಪೋಷಣೆಯ ಅವಶ್ಯಕತೆ ಕಂಡುಬಂದರೆ ತಕ್ಷಣವೇ ಹಿರಿಯ ನಾಗರಿಕರ ರಾಷ್ಟ್ರೀಯ ಸಹಾಯವಾಣಿ 14567 ಹಾಗೂ ಹಿರಿಯ ನಾಗರಿಕರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಾಯವಾಣಿಗೆ 1090ಗೆ ಕರೆ ಮಾಡಬಹುದಾಗಿದೆ”. ಎಂದು ಇಲಾಖೆ ಪ್ರಕಟಿಸಿದೆ.

Leave a Reply

Your email address will not be published. Required fields are marked *