Categories: ಲೇಖನ

ನಿಮ್ಮ ದಮ್ಮಯ್ಯ ಬೇಗ ನಾಗರಿಕರಾಗಿರಯ್ಯ…..ಶಾಪ ವಿಮೋಚನೆಗಾಗಿ ಕಾದಿರುವ ನನ್ನ ಹಿರಿಹಿರಿ ಹಿರಿಯಜ್ಜನ ಮನವಿ……

” ಅಯ್ಯ ನಾನಯ್ಯ, ನಿಮ್ಮ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿಯಜ್ಜ……

ಹರಪ್ಪ ಮಹೇಂಜೋದಾರೋ ಕಾಲದ ನಿಮ್ಮ ಪೂರ್ವಿಕ.
ನಮ್ಮ ವನ ದೇವತೆಯ ಶಾಪದಿಂದ ಈಗಲೂ ಮುಕ್ತನಾಗದೆ, ದೈಹಿಕ, ಮಾನಸಿಕ ಯಾತನೆಯಿಂದ ನರಳುತ್ತಾ ಜೀವಿಸುತ್ತಿದ್ದೇನೆ……

ಆಗ ನಮ್ಮ ಕಾಲದಲ್ಲಿ ಎಲ್ಲರೂ ನಾಗರೀಕರಾಗಿಯೇ ಇದ್ದರಯ್ಯ.
ಒಮ್ಮೆ ನಮ್ಮ ಕಾಡಿನಲ್ಲಿ ನನ್ನ ಕೆಲ ಜನರು ಜಿಂಕೆಯೊಂದನ್ನು ಬೇಟೆಯಾಡಿ ಸಮವಾಗಿ ಹಂಚಿಕೊಂಡು ತಿನ್ನುತ್ತಿದ್ದರಯ್ಯ. ಆಗ ನಾನು ದುರಾಸೆಯಿಂದ ಅವರನ್ನೆಲ್ಲಾ ಕೊಂದು ಇಡೀ ಜಿಂಕೆಯನ್ನು ನಾನೊಬ್ಬನೇ ತಿಂದೆನಯ್ಯ….

ಅದನ್ನು ಕಂಡ ನಮ್ಮ ನಾಡಿನ ವನ ದೇವತೆ
” ಎಲೈ ಕಟುಕ, ಹಂಚಿ ತಿನ್ನುವ
ನಾಗರೀಕರನ್ನು ಕೊಂದು ಹೊಂಚಿ ಕಿತ್ತು ತಿನ್ನುವ ಅನಾಗರಿಕನಾದೆ. ಇದನ್ನು ಸೃಷ್ಟಿಕರ್ತ ಸಹಿಸುವುದಿಲ್ಲ. ಎಲ್ಲಿಯವರೆಗೆ ಈ ಭರತ ಖಂಡದಲ್ಲಿ ಜನ ನಾಗರಿಕರಾಗುವುದಿಲ್ಲವೋ ಅಲ್ಲಿಯವರೆಗೂ ನೀನು ಈ ಜನರ ಅನಾಗರೀಕ ವರ್ತನೆಗಳನ್ನು ನೋಡುತ್ತಾ, ಅನುಭವಿಸುತ್ತಾ ದೈಹಿಕ, ಮಾನಸಿಕ ನರಳಾಟಗಳಲ್ಲಿಯೇ ಜೀವಿಸುತ್ತಿರಬೇಕು. ಎಲ್ಲರೂ ನಾಗರೀಕರಾದ ದಿನ ನೀನು ಶಾಪದಿಂದ ಮುಕ್ತನಾಗಿ ಮೋಕ್ಷ ಪಡೆಯುತ್ತೀಯ. ಅಲ್ಲಿಯವರೆಗೂ ನಿನಗೆ ಸಾವಿಲ್ಲ ” ಎಂದು ಶಾಪ ನೀಡಿತಯ್ಯ…..

ಅಂದಿನಿಂದ ಇಂದಿನವರೆಗೆ ಶಾಪ ವಿಮೋಚನೆಗಾಗಿ ಕಾಯುತ್ತಾ ಇದ್ದೇನಯ್ಯ….

ಅಯ್ಯ, ಒಮ್ಮೆ ವೇದ ಉಪನಿಷತ್ತುಗಳು ರಚನೆಯಾದಾಗ, ಅದರ ಆಧಾರದಲ್ಲಿ ಮನುಷ್ಯ ಬದಲಾಗಿ ಧರ್ಮ ಮಾರ್ಗದಲ್ಲಿ ನಡೆದು ನಾಗರಿಕನಾಗಬಹುದು ಎಂದು ಬಹಳ ಆಸೆಪಟ್ಟೆನಯ್ಯ. ಆದರೆ ಹಾಗಾಗಲಿಲ್ಲವಯ್ಯ.
ವಾಲ್ಮೀಕಿ, ವ್ಯಾಸರು ರಾಮಾಯಣ, ಮಹಾಭಾರತ, ಭಗವದ್ಗೀತೆಗಳೆಂಬ ಪವಿತ್ರ ಗ್ರಂಥಗಳನ್ನು ಬರೆದರಯ್ಯ, ಆಗ ನನ್ನ ಆಸೆ ಮತ್ತೊಮ್ಮೆ ಚಿಗುರಿತಯ್ಯ. ಆದರೆ ಆಗಲೂ ನಮ್ಮವರು ನಾಗರಿಕರಾಗಲಿಲ್ಲವಯ್ಯ. ಅವರವರಲ್ಲೇ ಹೊಡೆದಾಡಿ ಸತ್ತರಯ್ಯ……

ಮುಂದೆ ಬಂದನಯ್ಯ ಅದ್ಬುತ ದೂರದೃಷ್ಟಿಯ ವ್ಯಕ್ತಿ ಗೌತಮ ಬುದ್ದ. ಆತನ ಪ್ರಕಾಂಡ ಪಾಂಡಿತ್ಯ, ದಿವ್ಯ ಜ್ಞಾನ ನೋಡಿ ಇನ್ನು ಮಾನವ ಅನಾಗರಿಕನಾಗಿ ಇರಲಾರ. ನನಗೆ ಮುಕ್ತಿಯ ಕಾಲ ಬಂದಿತೆಂದು ಖುಷಿಪಟ್ಟೆನಯ್ಯ, ಇಲ್ಲಯ್ಯ ಆಗಲೂ ನಮ್ಮವರು ಬದಲಾಗಲಿಲ್ಲವಯ್ಯ. ….

ಮಹಾವೀರನಂತ ತೀರ್ಥಂಕರನ ಮಾತಿಗೂ ಇವರು ಕಿವಿಗೊಡಲಿಲ್ಲವಯ್ಯ….

ಅನೇಕ ದಾಸರು, ಆಚಾರ್ಯರು ದಾಸವಾಣಿಗಳು, ಭಕ್ತಿ ಪಂಥಗಳಿಗೂ ಇವರು ಬಗ್ಗಲಿಲ್ಲವಯ್ಯ……

ಒಂದಷ್ಟು ಭರವಸೆ ಮೂಡಿದ್ದು ಸಮಾನತೆಯ ಹರಿಕಾರರಾದ ಅಲ್ಲಮ, ಬಸವಣ್ಣ ಮುಂತಾದವರು ವಚನಗಳ ಮುಖಾಂತರ ಕ್ರಾಂತಿಯ ಅತ್ಯದ್ಭುತ ಸಂದೇಶ ಹರಿದಾಡಿದಾಗ. ನನಗಂತೂ ತುಂಬಾ ನಿರೀಕ್ಷೆಯಿತ್ತಯ್ಯ.
ಊ ಹೂ ಆಗಲೂ ಆಗಲಿಲ್ಲ. ಬಸವಣ್ಣನನ್ನೇ ಕೊಂದರಯ್ಯ…..

ಬಹಳ ಕಾಲ ಯಾರ ಅಂಕೆಗೂ ಸಿಗಲಿಲ್ಲವಯ್ಯ. ಮೊಘಲ್ ದಾಳಿಕೋರರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತಯ್ಯ. ಧರ್ಮ ಸಂಘರ್ಷವು ಜೋರಾಯಿತಯ್ಯ…..

ಮತ್ತೆ ನನಗೆ ಆಸೆ ಚಿಗುರಿದ್ದು ನಾವು ನಾಗರಿಕರೆಂದು ಹೇಳಿಕೊಂಡು ನಮ್ಮನ್ನು ಆಕ್ರಮಿಸಿಕೊಂಡ ಆ ಬಿಳಿ ಚರ್ಮದ ಬ್ರಿಟಿಷರಿಂದ. ಆದರೆ ಅವರು ನಮ್ಮ ಸ್ವಾತಂತ್ರ್ಯ ಕಿತ್ತುಕೊಂಡು ನಮಗಿಂತ ಅನಾಗರಿಕರಾಗಿ ವರ್ತಿಸಿದರಯ್ಯ. ಮೊದಲೇ ಮತಿಗೆಟ್ಟ ನಮ್ಮನ್ನು ಒಡೆದು ಆಳಿ ಪರಿಸ್ಥಿತಿ ಮತ್ತಷ್ಟು ಕೆಡಿಸಿದರಯ್ಯ…..

ಮತ್ತೆ ನಿರಾಸೆ ಕಾಡಿತಯ್ಯ.
ಆಗ ಬಂದನು ನೋಡಿ,
ವೈಚಾರಿಕ ಪ್ರಜ್ಞೆಯ, ಆಧ್ಯಾತ್ಮಿಕ ಮನೋಭಾವದ ವಿವೇಕಾನಂದನೆಂಬ ಕ್ರಾಂತಿಕಾರಿ ಪುರುಷ ಸಿಂಹ. ದೇಶ ವಿದೇಶಗಳಲ್ಲಿ ಜಾಗೃತಿ ಮೂಡಿಸಿದ. ಆದರೆ ಅದೂ ಸಾಕಾಗಲಿಲ್ಲವಯ್ಯ. ನಾಗರೀಕ ಪ್ರಜ್ಞೆ ಮೂಡಲೇ ಇಲ್ಲ. ನನ್ನ ಶಾಪ ವಿಮೋಚನೆ ಆಗಲೇ ಇಲ್ಲವಯ್ಯ……

ಆಗ ಉದಯಿಸಿದನೊಬ್ಬ ಮಹಾತ್ಮ. ಆತನೇ ಮೋಹನ್ ದಾಸ್ ಕರಮಚಂದ್ ಗಾಂಧಿ. ಸತ್ಯ, ಸರಳತೆ, ಅಹಿಂಸೆ ಭೋದಿಸಿದ ಆತನಿಂದ ನಮ್ಮ ಜನ ನಾಗರಿಕರಾಗಿ ನನಗೆ ಮುಕ್ತಿ ಖಚಿತ ಎಂದು ಸಂಭ್ರಮ ಪಟ್ಟೆ. ಇಲ್ಲ ಅದೂ ಆಗಲಿಲ್ಲವಯ್ಯ. ಮೇಲ್ನೋಟಕ್ಕೆ ಗಾಂಧಿ ಟೋಪಿ ಧರಿಸಿದರು. ಆದರೆ ವಾಸ್ತವವಾಗಿ ಆತ್ಮವಂಚಕ ಪಡೆಗಳೇ ಸೃಷ್ಟಿಯಾದವಯ್ಯ…..

ಆ ಸಮಯದಲ್ಲಿಯೇ ಮತ್ತೊಬ್ಬ ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಹುಟ್ಟಿ ಬಂದನಯ್ಯ.
ತನ್ನ ವಿದ್ವತ್ ಪೂರ್ಣ ಪ್ರತಿಭೆಯಿಂದ ನಮ್ಮನ್ನೆಲ್ಲಾ ನಾಗರಿಕರನ್ನಾಗಿ ಮಾಡಲು ಸಂವಿಧಾನವೆಂಬ ನೀತಿ ನಿಯಮಗಳ ಬೃಹತ್ ಗ್ರಂಥ ರಚಿಸಿದನಯ್ಯ. ಅದರಲ್ಲಿ ಸಮಾನತೆಗಾಗಿ ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ಹಲವಾರು ಕ್ರಮ ಕೈಗೊಂಡನಯ್ಯ.
ಊ ಹೂ ಆಗಲೂ ಬದಲಾಗಲಿಲ್ಲವಯ್ಯ ಮತ್ತು ಈ ಕ್ಷಣದವರೆಗೂ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಲೇ ಸಾಗುತ್ತಿದೆಯಯ್ಯ. ಈ ಭರತ ಖಂಡ ಒಡೆದು ಭಾಗವಾಗಿ ಭಾರತ ಎಂದಾಗಿದ್ದರೂ ಅನಾಗರಿಕತೆ ಹೆಚ್ಚುತ್ತಲೇ ಇದೆಯಯ್ಯ……

ಅಯ್ಯಾ,
ವಿಮಾನ, ರಾಕೆಟ್ ಗಳು ಬಂತು, ಮೊಬ್ಯೆಲ್ ಇಂಟರ್ನೆಟ್ ಗಳೂ ಬಂತು, ಬುಲೆಟ್ ಟ್ರೈನ್, ಭವ್ಯ ಬಂಗಲೆಗಳು, ಹೋಟೆಲ್ ಗಳು, ಐಷಾರಾಮಿ ಹಡಗುಗಳು ಎಲ್ಲವೂ ಬಂತು. ಈಗ ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್ ಗಳು ಬರುತ್ತಿವೆಯಯ್ಯ….

ತುಂಬಾ ಸಂತೋಷವಯ್ಯ. ಮಜಾ ಮಾಡಿ.
ಆದರೆ ನಿಜವಾಗಿ ನೀವು ಪ್ರಗತಿ ಎಂದು ಭಾವಿಸುತ್ತಿರುವ ಇದು ಅಭಿವೃದ್ಧಿ ಅಲ್ಲವಯ್ಯ. ಇದೇ ವಿನಾಶವಯ್ಯ. ಸ್ವಾಭಿಮಾನ, ಸ್ವಂತಿಕೆ ಅಡವಿಟ್ಟು ಯಾಂತ್ರಿಕತೆಗೆ ಶರಣಾದ ಗುಲಾಮಗಿರಿಯಯ್ಯ. ಸೃಷ್ಟಿಗೆ ವಿರುದ್ಧವಾಗಿ ನಿಮ್ಮ ಸುಖಲೋಲುಪತೆಗೆ ಬಲಿಯಾಗುತ್ತಿರುವ ಮೂರ್ಖರಯ್ಯ…..

ಅತ್ಯಂತ ವಿದ್ಯಾವಂತ, ಅತ್ಯಂತ ಶ್ರೀಮಂತ, ಅತ್ಯಂತ ಆಧುನಿಕ, ಅದ್ಭುತ ತಾಂತ್ರಿಕವಾಗಿ ಮುಂದುವರಿದ ಪರದೇಶಗಳ ಜನರ ಬಾಂಬು ಬಂದೂಕಿನ ನಿತ್ಯ ನರಳಾಟ ಕೇಳಿಸುತ್ತಿಲ್ಲವೇನಯ್ಯ. ತಂತ್ರಜ್ಞಾನವನ್ನು ಮನುಷ್ಯ ಆಳಬೇಕೆ ವಿನಹ ಮನುಷ್ಯನನ್ನು ತಾಂತ್ರಿಕತೆ ಆಳಬಾರದಯ……

ನಿರ್ಜೀವ ವಸ್ತುಗಳ ಅಭಿವೃದ್ಧಿ ನಾಗರೀಕತೆಯಲ್ಲವಯ್ಯ. ಅದು ಅನುಕೂಲತೆ ಮಾತ್ರವಯ್ಯ….

ಜೀವ ಜೀವಗಳ ಪ್ರೀತಿ, ಸಂಬಂಧ, ಪ್ರಕೃತಿಯೊಂದಿಗಿನ ಆತ್ಮೀಯ ಒಡನಾಟ, ನಿಮ್ಮ ತುಂಬು ವ್ಯಕ್ತಿತ್ವವೇ ನಾಗರಿಕತೆಯಯ್ಯ. ಹೊಡೆದು ತಿನ್ನುವುದು ಅನಾಗರಿಕತೆ. ಹಂಚಿ ತಿನ್ನುವುದು ನಾಗರಿಕತೆ…..

ಅಯ್ಯಾ, ಕೈ ಮುಗಿದು ಕೇಳಿಕೊಳ್ಳುತ್ತೇನೆ, ಈ ಬದುಕು ಸಾಕಾಗಿದೆ. ಸರಿಯಾಗಿ ಕಣ್ಣು ಕಾಣದ, ಕಿವಿ ಕೇಳದ ಈ ವಯೋವೃಧ್ಧನಿಗೆ, ನಿಮ್ಮ ಆತ್ಮವಂಚಕ ಮನಸ್ಸುಗಳ ವಿಕೃತ ಬದುಕಿನಾಟ, ಮಲಿನ ಮನಸ್ಸುಗಳ ದೊಂಬರಾಟ ನೋಡಲು ಆಗುತ್ತಿಲ್ಲವಯ್ಯ…..

ದಯವಿಟ್ಟು ಎಲ್ಲರೂ ಬೇಗ ನಾಗರಿಕರಾಗಿರಯ್ಯ.
ನನ್ನನ್ನು ಇನ್ನಷ್ಟು ಶತಮಾನಗಳು ಕಾಯಿಸದೆ ಬೇಗ ಶಾಪ ಮುಕ್ತನನ್ನಾಗಿ ಮಾಡಿ ಮೋಕ್ಷ ಕರುಣಿಸಿರಯ್ಯ….

ನಿಮ್ಮ ದಮ್ಮಯ್ಯ ಬೇಗ ನಾಗರಿಕರಾಗಿರಯ್ಯ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಮಹಾವೀರ ಜಯಂತಿ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಇಂದು ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅದೇರೀತಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ…

3 hours ago

ನಾನು ಯಾರ ಜಮೀನು ಕಬಳಿಕೆ‌ ಮಾಡಿಲ್ಲ- ಕಾನೂನಾತ್ಮಕವಾಗಿ ಜಮೀನು ಖರೀದಿ ಮಾಡಿದ್ದೇನೆ- ನನ್ನ ಏಳಿಗೆ ಸಹಿಸದವರಿಂದ ನನ್ನ ಮೇಲೆ ಹಲ್ಲೆ ನಡೆದಿದೆ- ಕಾನೂನು ಹೋರಾಟ ಮಾಡಿ ಗೆಲ್ಲುವೆ- ವಕೀಲ ಪ್ರತಾಪ್

ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…

4 hours ago

KIADB ಭೂಸ್ವಾಧೀನ ವಿರೋಧಿಸಿ ತಾಲೂಕು ಕಚೇರಿಗೆ ಟ್ರ್ಯಾಕ್ಟರ್ ರ್ಯಾಲಿ

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ. ನಾರನಹಳ್ಳಿ, ಸೊಣ್ಣೇನಹಳ್ಳಿ  ಗ್ರಾಮಗಳ ವ್ಯಾಪ್ತಿಯ ಸುಮಾರು 2100 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು…

11 hours ago

ಹುಟ್ಟಿಸುವವನೂ ಅವನೇ…. ಸಾಯಿಸುವವನೂ ಅವನೇ…

ದೇವರು ಎಷ್ಟೊಂದು ಒಳ್ಳೆಯವನಲ್ಲವೇ........ ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು…

17 hours ago

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ-ಎನ್.ಶೋಭಾ

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಮಹಿಳಾ ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ ಎಂದು ಆರಕ್ಷಕ ನಿರೀಕ್ಷಕರಾದ ಎನ್.ಶೋಭಾ…

1 day ago

ಮನೆ ಹೊಸ್ತಿಲಿನಲ್ಲಿ ಪೂಜೆಗಿಟ್ಟಿದ್ದ ಒಣಗಿದ ದಾಸವಾಳ ಹೂ ನುಂಗಿ ಆರುವರೆ ತಿಂಗಳ ಮಗು ದಾರುಣ ಸಾವು

ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವನ್ನು ಆಟವಾಡುತ್ತಾ ನುಂಗಿದ ಆರುವರೆ ತಿಂಗಳ ಕಂದಮ್ಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ…

1 day ago