
ಬೇಡಿಕೆಗೆ ತಕ್ಕ ಸೂಕ್ತ ಬಸ್ ಗಳ ವ್ಯವಸ್ಥೆ ಇಲ್ಲ. ಗಂಟೆಗಟ್ಟಲೆ ಕಾದರೂ ಸಮಯಕ್ಕೆ ಸರಿಯಾಗಿ ಬಾರದ ಸಾರಿಗೆ ಬಸ್ ಗಳು. ಆಗೊಮ್ಮೆ ಈಗೊಮ್ಮೆ ಬಸ್ ಬಂದರೂ ಹತ್ತಲು ಜಾಗ ಇರೋದಿಲ್ಲ. ಹೆಜ್ಜೆ ಇಡಲು ಜಾಗವಿರದೆ ಬಸ್ ಫುಲ್ ರಷ್ ಆಗಿರುತ್ತದೆ. ಪ್ರತಿ ಬಸ್ ಸ್ಟಾಪ್ ನಲ್ಲೂ ನೂರಾರು ಮಂದಿ ಪ್ರಯಾಣಿಕರು ಕಾದು ನಿಂತೇ ಇರುತ್ತಾರೆ. ಕೆಲವೊಂದು ಬಸ್ ಗಳ ಕಂಡಿಷನ್ ಸರಿ ಇಲ್ಲದೇ ಮಾರ್ಗ ಮಧ್ಯದಲ್ಲಿ ಕೆಟ್ಟು ನಿಲ್ಲುತ್ತವೆ. ಹೀಗೆ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿನ ಸಾರಿಗೆ ವ್ಯವಸ್ಥೆ ಇರುತ್ತದೆ….
ಇಂದು(ಸೋಮವಾರ) ಬೆಳಗ್ಗೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು, ಆಸ್ಪತ್ರೆ, ಸರ್ಕಾರಿ ಕಚೇರಿಗಳು ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ತೆರಳಲು ವೃದ್ಧರು, ರೋಗಿಗಳು, ಮಹಿಳೆಯರು, ಮಕ್ಕಳು ಸೇರಿತೆ ಇತರೆ ಪ್ರಯಾಣಿಕರು ಬಸ್ ಗಳಿಗಾಗಿ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ 11ನೇ ಮೈಲಿ(ಮಲ್ಲೋಹಳ್ಳಿ ಕಾಲೋನಿ) ಬಸ್ ನಿಲ್ದಾಣದಲ್ಲಿ ಕಾದು ನಿಂತಿದ್ದರು.
ನೆಲಮಂಗಲದಿಂದ ದೊಡ್ಡಬಳ್ಳಾಪುರಕ್ಕೆ ಬರುವ ಬಸ್ಸಿನಲ್ಲಿ ಫುಲ್ ರಷ್ ಇತ್ತು. ಕೆಲವರು ಸಮಯವಿಲ್ಲವೆಂದು ರಷ್ ಇದ್ದ ಬಸ್ ಹತ್ತಿ ಫುಟ್ ಬೋರ್ಡ್ ನಲ್ಲಿ ನೇತಾಡುತ್ತಾ ಹೊರಟರೆ, ಇನ್ನು ಕೆಲವರು ಇನ್ನೊಂದು ಬಸ್ಸಿಗಾಗಿ ಕಾದು ಕುಳಿತ್ತಿದ್ದರು. ಹೀಗೆ ಪ್ರತಿನಿತ್ಯ ಬಸ್ಸಿಗಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.
ಸಾರಿಗೆ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಹಾಗೂ ಬೇಡಿಕೆಗೆ ತಕ್ಕಂತೆ ಬಸ್ ಗಳನ್ನು ರೋಡಿಗಿಳಿಸಬೇಕು ಎಂದು ಪ್ರಯಾಣಿಕರು ಕೋರಿದ್ದಾರೆ.