ನಾವು ಯಾರು ? ನಮ್ಮ ಯೋಗ್ಯತೆ ಏನು ?………
ಕೆಲವರ ಬಗ್ಗೆ ಹಲವು ಉದಾಹರಣೆಗಳು…….
ಇದು ಆ ರೀತಿಯ ಜನಗಳಿಗೆ ಮಾತ್ರ ಅನ್ವಯ….
ಮೂಕ ಪ್ರಾಣಿಗಳಿಗೆ ಆಹಾರದಲ್ಲಿ ವಿಷವಿಕ್ಕುವ ಅನಾಗರಿಕರು ನಾವು ಅನಾಗರಿಕರು……….
ಅನ್ನಭಾಗ್ಯದ ಹಸಿದ ಹೊಟ್ಟೆಯ ಅಕ್ಕಿ ಕದಿಯುವ ಕಳ್ಳರು ನಾವು ಕಳ್ಳರು….
ಕೊರೋನಾ ಕಷ್ಟದ ಸಮಯದಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ದುಡ್ಡು ಹೊಡೆಯುವ ನೀಚರು ನಾವು ನೀಚರು…..
ಬುದ್ಧಿಮಾಂದ್ಯ ಬೀದಿ ಹೆಣ್ಣಿನ ಅತ್ಯಾಚಾರ ಮಾಡುವ ಕೀಚಕರು ನಾವು ಕೀಚಕರು……
ವೃದ್ಧಾಪ್ಯದ ಪಿಂಚಣಿಯಲ್ಲಿ ಕಮೀಷನ್ ಹೊಡೆಯುವ ಕಿರಾತಕರು ನಾವು ಕಿರಾತಕರು……
ಡೆತ್ ಸರ್ಟಿಫಿಕೇಟ್ ನೀಡಲೂ ಲಂಚ ಪಡೆಯುವ ಭ್ರಷ್ಟರು ನಾವು ಭ್ರಷ್ಟರು……
ಗಂಡ ಹೆಂಡತಿಯ ಸ್ವಾರ್ಥಕ್ಕಾಗಿ ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸುವ ಕೊಳಕರು ನಾವು ಕೊಳಕರು……
ಹಣಕ್ಕಾಗಿ ಮನುಷ್ಯನ ಕಿಡ್ನಿಯನ್ನೇ ಕದಿಯುವ ಕಟುಕರು ನಾವು ಕಟುಕರು……
ಮೂರು ವರ್ಷದ ಹಸುಳೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡುವ ರಾಕ್ಷಸರು ನಾವು ರಾಕ್ಷಸರು……
ವೇಶ್ಯೆಯರ ಬಳಿಯೂ ಹಣ ಕೀಳುವ ತಲೆಹಿಡುಕರು ನಾವು ತಲೆಹಿಡುಕರು……
ಎಳೆಯ ಮಕ್ಕಳನ್ನು ದುಡಿಸಿಕೊಳ್ಳುವ ದುಷ್ಟರು ನಾವು ದುಷ್ಠರು…….
ಬೆಕ್ಕಿನ ಚಲನೆಯನ್ನು ಹುಲಿ ಎಂದು ಬ್ರೇಕಿಂಗ್ ನ್ಯೂಸ್ ಮಾಡುವ ಪ್ರಚಂಡರು ನಾವು ಪ್ರಚಂಡರು…..
ರಸ್ತೆಯಲ್ಲಿ ಮಕ್ಕಳನ್ನು ಕೊಚ್ಚಿಕೊಂದ ನಾಯಿಗಳಿದ್ದರೂ ಸಮಸ್ಯೆ ಪರಿಹರಿಸದ ಮತಿಹೀನರು ನಾವು ಮತಿಹೀನರು……
ತಿನ್ನುವ ಆಹಾರ ಕಲಬೆರಕೆ ಮಾಡುವ ಮುಠ್ಠಾಳರು ನಾವು ಮುಠ್ಠಾಳರು…….
ಕೃಷಿಭೂಮಿಯನ್ನು 30×40 ಸೈಟ್ ಮಾಡಿ ಮಾರಿಕೊಂಡು ಹಣ ಉಡಾಯಿಸಿದ ಪಾಪಿಗಳು ನಾವು ಪಾಪಿಗಳು…….
ಸಂಸಾರದ ಸಹಜ ಗಲಾಟೆಯನ್ನು ಸುದ್ದಿಮಾಡಿ ಕಾಸು ಮಾಡುವ ದಗಾಕೋರರು ನಾವು ದಗಾಕೋರರು…….
ಆತ್ಮಹತ್ಯೆಯಿಂದ ಸತ್ತ ರೈತನ ಹೆಣದ ಮುಂದೆ ರಾಜಕೀಯ ಮಾಡುವ ವಿಕೃತರು ನಾವು ವಿಕೃತರು……
ಕಾಡನ್ನು ಕಡಿದು ಶೋಕಿಗಾಗಿ ರೆಸಾರ್ಟ ನಿರ್ಮಿಸುವ ಖದೀಮರು ನಾವು ಖದೀಮರು…….
ಹುಲಿ ಚರ್ಮದ ಮೇಲೆ ಕುಳಿತು ವೇದ ಮಂತ್ರ ಪಠಿಸುವ ಅನಾಗರಿಕರು ನಾವು ಅನಾಗರಿಕರು….
ಕೈ ತೋರಿಸಿ ಭವಿಷ್ಯ ಕೇಳುವ ಶತಮೂರ್ಖರು ನಾವು ಶತಮೂರ್ಖರು…..
ದೇವರ ವಿಗ್ರಹವನ್ನು ಮುಟ್ಟಲೂ ಮೈಲಿಗೆ ಎನ್ನುವ ಮೂಢರು ನಾವು ಮೂಢರು…….
ಆಸ್ಪತ್ರೆಗಿಂತ ಮಸೀದಿ ಮಂದಿರ ಚರ್ಚುಗಳನ್ನೇ ಭವ್ಯವಾಗಿ ನಿರ್ಮಿಸಿ ಅನಾರೋಗ್ಯವಾದಾಗ ಕೊಳಕು ಆಸ್ಪತ್ರೆಗೆ ಧಾವಿಸುವ ಆತ್ಮವಂಚಕರು ನಾವು ಆತ್ಮವಂಚಕರು…….
ಗ್ರಂಥಾಲಯಗಳನ್ನು ಪಾಳು ಮಂಟಪಗಳಾಗಿಸಿ ಬಾರುಗಳನ್ನು ಲವಲವಿಕೆಯಿಂದ ಇರುವಂತೆ ನೋಡಿಕೊಂಡಿರುವ ಬುದ್ದಿವಂತರು ನಾವು ಬುದ್ದಿವಂತರು……
ಸಿಗರೇಟು ಕ್ಯಾನ್ಸರ್ ಗೆ ಕಾರಣ ಎಂದು ಪಾಕೆಟ್ ಮೇಲೆ ಬರೆದುಕೊಡು ಅಂಗಡಿಗಳಲ್ಲಿ ಮಾರುವ ದನದಾಹಿಗಳು ನಾವು ದನದಾಹಿಗಳು…..
ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎನ್ನುತ್ತಾ ಸತ್ಯ ಹೇಳುವವನ್ನು ಹಿಂಸಿಸುವ ಮನೋ ವಿಕೃತರು ನಾವು ಮನೋ ವಿಕೃತರು…….
ವಾಸ್ತವ ಜಗತ್ತಿಗಿಂತ ಭ್ರಮಾ ಲೋಕವೇ ಅಪ್ಯಾಯಮಾನ ಎಂದು ಅರ್ಥಮಾಡಿಕೊಂಡ ಮೂರ್ಖರು ನಾವು ಮೂರ್ಖರು…..
ಅಸಮಾನತೆ, ಮೌಢ್ಯತೆಯನ್ನು ನಮ್ಮ ಸಂಸ್ಕೃತಿ ಎಂದು ಹೆಮ್ಮೆ ಪಡುವ ಮನೋ ವೈಕಲ್ಯದವರು ನಾವು ಮನೋ ವೈಕಲ್ಯದವರು……
ಇದು ಉದಾಹರಣೆಗಳು ಮಾತ್ರ.
ಸಹಜತೆ ಇನ್ನೂ ಭಯಂಕರವಾಗಿದೆ.
ಒಂದು ವೇಳೆ ಈ ಸಮಾಜ ಇದಕ್ಕಿಂತ ಉತ್ತಮವಾಗಿದೆ ಎಂಬ ಅಭಿಪ್ರಾಯ ನಿಮ್ಮದಾದರೆ ತುಂಬಾ ಸಂತೋಷ. ಅದನ್ನು ಗೌರವಿಸುತ್ತೇನೆ. ನಿಮ್ಮ ಅದೃಷ್ಟಕ್ಕೆ ಅಭಿನಂದನೆಗಳು. ಈ ಲೇಖನ ನಿಮಗೆ ಅನ್ವಯಿಸುವುದಿಲ್ಲ.
ನಾನು ಕಂಡ ನನ್ನ ಅನುಭವಗಳನ್ನು ಮಾತ್ರ ಇಲ್ಲಿ ಹೇಳಲಾಗಿದೆ. ಒಳ್ಳೆಯವರ ಸುದ್ದಿ ನನಗೆ ಬೇಡ. ಅವರಿಂದ ಸಮಾಜಕ್ಕೆ ಯಾವುದೇ ತೊಂದರೆ ಇಲ್ಲ. ಕೆಟ್ಟವರ ಬಗ್ಗೆ ಮಾತ್ರ ನನ್ನ ಚಿಂತೆ. ಏಕೆಂದರೆ ನಾನು ಸಹ ಕೆಟ್ಟವನು ಮತ್ತು ಕೆಟ್ಟ ಸಮಾಜದಲ್ಲಿ ಜೀವಿಸುತ್ತಿದ್ದೇನೆ………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ