ನಾಳೆಯಿಂದ(ಮಾ.21) ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಆರಂಭ: ಸುವ್ಯಸ್ಥಿತವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ- ದೊಡ್ಡಬಳ್ಳಾಪುರ ತಾ. ಬಿಇಒ ಸಯೀದಾ ಅನೀಸ್ ಮುಜಾವರ ಹೇಳಿಕೆ

2025-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯು  ಮಾರ್ಚ್ 21 ರಿಂದ ಏಪ್ರಿಲ್ 04 ರವರೆಗೆ ನಡೆಯಲಿದ್ದು, ಪರಿಕ್ಷೆಯು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಯೀದಾ ಅನೀಸ್ ಮುಜಾವರ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದು, ನಗರ ವ್ಯಾಪ್ತಿಯಲ್ಲಿ-05 ಗ್ರಾಮೀಣ ವ್ಯಾಪ್ತಿಯಲ್ಲಿ-09 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ ಎಂದರು.

ತಾಲ್ಲೂಕಿನಲ್ಲಿ ಒಟ್ಟು 67 ಪ್ರೌಢಶಾಲೆಗಳಿದ್ದು, ಅದರಲ್ಲಿ ಸರ್ಕಾರಿ – 17 ಇತರೆ ಸರ್ಕಾರಿ-04 ಅನುದಾನಿತ-12 ಮತ್ತು ಅನುದಾನರಹಿತ-34 ಶಾಲೆಗಳಿಂದ 3800(ಗಂಡು-1921 ಹೆಣ್ಣು-1879) ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ಹೊಸದಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಖಾಸಗಿಯಾಗಿ ಒಟ್ಟು 44 (ಗಂಡು-24 ಹೆಣ್ಣು-20) ಹಾಗೂ ಪುನಾವರ್ತಿತ ವಿದ್ಯಾರ್ಥಿಗಳು 99 (ಗಂಡು-75 ಹೆಣ್ಣು-24) ಒಟ್ಟಾರೆ ತಾಲ್ಲೂಕಿನಲ್ಲಿ ಗಂಡು 2020 ಹೆಣ್ಣು 1923 ಸೇರಿದಂತೆ ಒಟ್ಟು 3943 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷಾ ಕಾರ್ಯಕ್ಕಾಗಿ 14 ಪರೀಕ್ಷಾ ಕೇಂದ್ರಗಳಿಗೆ 14 ಮುಖ್ಯ ಅಧಿಖಕ್ಷಕರು, 14 ಕಸ್ಟೋಡಿಯನ್, 06, ಮಾರ್ಗಾಧಿಕಾರಿಗಳು, 14 ಮೊಬೈಲ್ ಸ್ವಾಧೀನಾಧಿಕಾರಿಗಳು, 14 ಸ್ಥಾನಿಕ ಜಾಗೃತದಳ, 01 ವಿಚಕ್ಷಣ ದಳಗಳಿಗೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಬೇಸಿಗೆಯ ಬಿಸಿಲಿನಿಂದ ಬಳಲುವ ವಿದ್ಯಾರ್ಥಿಗಳಿಗೆ, ಪರೀಕ್ಷಾ ಆತಂಕದಲ್ಲಿರುವ ವಿದ್ಯಾರ್ಥಿಗಳು ಕಂಡುಬಂದಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಕೈಗೊಳ್ಳಲು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರೀಕ್ಷಾ ಕೊಠಡಿಗಳಿಂದ ದೂರವಿಡಲು ಕ್ರಮವಹಿಸುವುದು. ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ನಿಷೇಧಾಜ್ಞೆಯನ್ನು ಹಾಗೂ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದರು.

ಪರೀಕ್ಷೆ ಪ್ರಾರಂಭದಲ್ಲಿಯೇ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ನಿಖರವಾಗಿ ಗುರುತಿಸಿ, ತಪಾಸಣೆಗೆ ಒಳಪಡಿಸಿ ಪರೀಕ್ಷಾ ಕೊಠಡಿಗಳಿಗೆ ಕಳುಹಿಸುವುದು. ವಿದ್ಯಾರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ತರದಂತೆ ನೋಡಿಕೊಳ್ಳುವುದು. ಸಿಸಿಟಿವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವುದನ್ನು ಪ್ರತಿ ಪರೀಕ್ಷಾ ದಿನಗಳಂದು ಬೆಳಗ್ಗೆ 8-30 ಗಂಟೆಗೆ ಖಚಿತಪಡಿಸಕೊಳ್ಳುವುದು. ಜಾಗರೂಕತರಯಿಂದ, ಬದ್ಧತೆಯಿಂದ, ಪಾರದರ್ಶಕವಾಗಿ ನಿಯಮಾನುಸಾರ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾ ಹಂತದಲ್ಲಿ ಸಿದ್ಧ ಮಾಡಲಾದ ವೆಬ್‌ಕಾಸ್ಟಿಂಗ್ ವ್ಯವಸ್ಥೆ  ಮೂಲಕ ಪರೀಕ್ಷೆ ವೀಕ್ಷಣೆ ನಡೆಸಲಾಗುವುದು. ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸುವಂತಹ ಕ್ರಿಯಾಶೀಲ ಸಿಬ್ಬಂದಿಯನ್ನು ನೇಮಿಸಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ 7 ತಂಡಗಳ ಜಾಗೃತ ದಳದ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಭೇಟಿ ನೀಡುವ ಪರೀಕ್ಷಾ ಕೇಂದ್ರಗಳ ವೇಳಾ ಪಟ್ಟಿ ಹಂಚಿಕೆಯನ್ನು ಮಾಡಲು ತಿಳಿಸಲಾಗಿದೆ ಎಂದರು.

ಜಿಲ್ಲಾ ಹಂತದಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿ, ಪ್ರತೀ ಪರೀಕ್ಷಾ ಕೇಂದ್ರಕ್ಕೆ ಒಂದರಂತೆ ಲ್ಯಾಪ್‌ಟಾಪ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಸ್ಥಗಿತಗೊಳ್ಳದಂತೆ ಕ್ರಮವಹಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!