ನಾಳೆ ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಮತದಾನದಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತಗಟ್ಟೆಗಳು ತೆರೆದಿರುತ್ತವೆ.
ನಾಳೆ ಎಲ್ಲೆಲ್ಲಿ ಮತದಾನ ನಡೆಯಲಿದೆ?
ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
*ಮತಗಟ್ಟೆ ಕೇಂದ್ರಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ*
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆಗಳಿಗೆ ಮತಯಂತ್ರ ಹಾಗೂ ಎಲ್ಲಾ ಪೂರ್ವ ಸಿದ್ಧತೆಗಳೊಂದಿಗೆ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ತೆರಳಿದ್ದಾರೆ.
ಮತದಾನ ಹೆಚ್ಚಿಸುವ ಸಲುವಾಗಿ ಹಾಗೂ ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಿಸುವ ಸಲುವಾಗಿ ಮತದಾರರನ್ನು ಆಕರ್ಷಿಸಲು 04 ಯುವ ಮತಗಟ್ಟೆಗಳು, 20 ಮಹಿಳಾ ಮತಗಟ್ಟೆಗಳು(ಸಖಿ), ೦4 ವಿಶೇಷ ಚೇತನ ಮತಗಟ್ಟೆಗಳು, 04 ವಿಷಯಾಧಾರಿತ ಮತಗಟ್ಟೆಗಳು , 04 ಮಾದರಿ ಮತಗಟ್ಟೆಗಳು ಸೇರಿ ಒಟ್ಟು 36 ವಿಶೇಷ ಮತಗಟ್ಟೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ.
ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ವಿಶೇಷ ವಿಷಯಾಧಾರಿತ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯಲ್ಲಿ 8,98,448 ಮತದಾರರು
ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ 8,98,448 ಮತದಾರರು ಇದ್ದಾರೆ. ಇದರಲ್ಲಿ 4,44,084 ಪುರುಷರು, 4,54,221 ಮಹಿಳೆಯರು ಹಾಗೂ 143 ಇತರೆ ಮತದಾರರು ಇದ್ದಾರೆ. ಒಟ್ಟು ಮತದಾರರ ಸಂಖ್ಯೆಯಲ್ಲಿ 18 ರಿಂದ 19 ವರ್ಷದೊಳಗಿನ 23,819 ಯುವ ಮತದಾರರು, 85 ವರ್ಷ ಮೇಲ್ಪಟ್ಟ 10,009 ಹಿರಿಯ ಮತದಾರರು , 13,224 ಅಂಗವಿಕಲ ಮತದಾರರು ಹಾಗೂ 120 ಸೇವಾ ಮತದಾರರು ಇದ್ದಾರೆ.
ಜಿಲ್ಲೆಯ 4 ತಾಲೂಕುಗಳಲ್ಲಿನ ಮತದಾರರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರೇ ಇದ್ದಾರೆ. ದೊಡ್ಡಬಳ್ಳಾಪುರದಲ್ಲಿ ಒಟ್ಟು 2,20,268 ಮತದಾರರಿದ್ದು, ಅದರಲ್ಲಿ 1,11,346 ಮಹಿಳಾ ಮತದಾರರು ಹಾಗೂ 1,08,921 ಪುರುಷ ಮತದಾರರಿದ್ದಾರೆ.
ಹೊಸಕೋಟೆಯಲ್ಲಿ ಒಟ್ಟು 2,39,157 ಮತದಾರರಿದ್ದು, ಅದರಲ್ಲಿ 1,20,474 ಮಹಿಳೆ ಹಾಗೂ 1,18,662 ಪುರುಷ ಮತದಾರರು ಇದ್ದಾರೆ.
ದೇವನಹಳ್ಳಿಯಲ್ಲಿ ಒಟ್ಟು 2,16,704 ಮತದಾರರಿದ್ದು, 1,09,443 ಮಹಿಳಾ ಹಾಗೂ 1,07,245 ಪುರುಷ ಮತದಾರರಿದ್ದಾರೆ.
ನೆಲಮಂಗಲದಲ್ಲಿ 2,22,319 ಮತದಾರರ ಪೈಕಿ 1,12,958 ಮಹಿಳೆ ಹಾಗೂ 1,09,256 ಪುರುಷ ಮತದಾರರಿದ್ದಾರೆ.
ಮತದಾರರ ಲಿಂಗಾನುಪಾತ ವಿವರ
ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತದಲ್ಲಿ 1 ಸಾವಿರ ಪುರುಷರಿಗೆ 1023 ಮಹಿಳೆಯರಿದ್ದಾರೆ. ಅದರಲ್ಲಿ ದೊಡ್ಡಬಳ್ಳಾಪುರದಲ್ಲಿ 1022, ಹೊಸಕೋಟೆಯಲ್ಲಿ 1015, ದೇವನಹಳ್ಳಿ 1020 ಹಾಗೂ ನೆಲಮಂಗಲದಲ್ಲಿ ಅತಿ ಹೆಚ್ಚು 1034 ಲಿಂಗಾನುಪಾತ ಕಂಡುಬಂದಿದೆ.
ಜಿಲ್ಲೆಯ ಮತಗಟ್ಟೆಗಳ ವಿವರ
ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಒಟ್ಟಾಗಿ 1137 ಮತಗಟ್ಟೆಗಳಿವೆ. ಅದರಲ್ಲಿ ದೊಡ್ಡಬಳ್ಳಾಪುರ 276, ಹೊಸಕೋಟೆ 293, ದೇವನಹಳ್ಳಿ 292 ಹಾಗೂ ನೆಲಮಂಗಲ್ಲಿ 276 ಮತಗಟ್ಟೆಗಳಿದೆ.
ಜಿಲ್ಲೆಯಲ್ಲಿ 1137 ಮತಗಟ್ಟೆಗಳ ಪೈಕಿ 960 ಸಾಮಾನ್ಯ ಮತಗಟ್ಟೆಗಳು,177 ಸೂಕ್ಷ್ಮ ಮತಗಟ್ಟೆಗಳು ಹಾಗೂ 13 ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ.
ಪೊಲೀಸ್ ಸಿಬ್ಬಂದಿ ನಿಯೋಜನೆ
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 276 ಮತಗಟ್ಟೆಗಳಿದ್ದು, ಅದರಲ್ಲಿ 25 ಸೂಕ್ಷ್ಮ ಮತಗಟ್ಟೆಗಳಾಗಿವೆ. ಮತಗಟ್ಟೆಗಳಲ್ಲಿ ಭದ್ರತಾ ವ್ಯವಸ್ಥೆಗಾಗಿ ರಾಜ್ಯ ಮೀಸಲು ಪಡೆ ಹಾಗೂ ಜಿಲ್ಲಾ ಪೊಲೀಸ್ ಪೇದೆಗಳು ಹಾಗೂ ಪೊಲೀಸ್ ಅಕಾರಿಗಳನ್ನು ನಿಯೋಜಿಸಲಾಗಿದೆ. 1 ಡಿವೈಎಸ್ಪಿ, 07 ಇನ್ಸ್‌ಪೆಕ್ಟರ್‌ಗಳು, 12 ಸಬ್ ಇನ್ಸೆಕ್ಟರ್‌ಗಳು ಸೇರಿದಂತೆ 400 ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸಿಆರ್‌ಪಿಜಿಯ 2 ಸ್ಕ್ವಾಡ್‌ಗಳು ಮತ್ತು ಮೊಬೈಲ್ ಗಸ್ತು ವ್ಯವಸ್ಥೆ ಮಾಡಲಾಗಿದೆ.
ಮತದಾನದ ದಿನ ಕಾರ್ಮಿಕರಿಗೆ ವೇತನ ಸಹಿತ ರಜೆ
ಮತದಾನ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೋಂದಾಯಿತರಾದ ಮತದಾರರಾಗಿರುವ ಎಲ್ಲಾ ಅರ್ಹ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳು 1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾದಿನಗಳು) ಕಾಯ್ದೆಯ ಕಲಂ-03ಎ ಪ್ರಕಾರ ಮತ ಚಲಾಯಿಸಲು ಅವಕಾಶ ಮಾಡಿ ಕೊಡಬೇಕಾಗಿರುತ್ತದೆ, ಆದ್ದರಿಂದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅರ್ಹರಿರುವ ಎಲ್ಲಾ ಕಾರ್ಮಿಕ ಮತದಾರರಿಗೆ ಏಪ್ರಿಲ್ 26 ರಂದು ವೇತನ ಸಹಿತ ರಜೆ ನೀಡಿ, ಎಲ್ಲಾ ಅರ್ಹ ಕಾರ್ಮಿಕರು ಸಂವಿಧಾನಾತ್ಮಕ/ಶಾಸನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಅನುವು ಮಾಡಿಕೊಡಲು ಚುನಾವಣಾ ಆಯೋಗ ಸೂಚಿಸಿದೆ.
ಈ ವಿಷಯದಲ್ಲಿ ಅರ್ಹ ಯಾವುದೇ ಕಾರ್ಮಿಕರಿಗೆ ಸಂವಿಧಾನಾತ್ಮಕ/ಶಾಸನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ರಜೆ ನೀಡದೆ ಹಾಗೂ ಮತದಾನಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಅಂತಹ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳ ವಿರುದ್ಧ 1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾ ದಿನಗಳು) ಕಾಯ್ದೆಯ ಕಲಂ-03ಎ ಹಾಗೂ 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ135(ಬಿ) ಉಲ್ಲಂಘನೆಗಳಿಗಾಗಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು.
ಆದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಏಪ್ರೀಲ್ 26 ರಂದು ಕಾಯ್ದೆಯನ್ವಯ ಅರ್ಹ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಪೋಷಿಸಬೇಕು ತಪ್ಪಿದಲ್ಲಿ, ಸಂಬಂಧಪಟ್ಟ ಸಂಸ್ಥೆ/ನಿಯೋಜಕರ ವಿರುದ್ದ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ಮತದಾನ ವೇಳೆ ಜಿಲ್ಲೆಯಲ್ಲಿ ಶಾಂತಿ ಪಾಲನೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ಮತ್ತು ಮತದಾನ ಮುಕ್ತಾಯವಾಗುವ 48 ಗಂಟೆಗಳ ಅವಧಿಯೊಳಗಿನ ದಿನದಂದು ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಏಪ್ರಿಲ್ 24 ರಂದು ಸಂಜೆ 5:00 ಗಂಟೆಯಿಂದ ಏಪ್ರೀಲ್ 26ರ ಮಧ್ಯರಾತ್ರಿ 12.00 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಮಾರಾಟ, ಹಂಚಿಕೆ, ಸಾಗಾಣಿಕೆ, ಶೇಖರಣೆ, ಇತ್ಯಾದಿಗಳನ್ನು ನಿಷೇಧಿಸಿ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ/ಬಿಯರ್/ವೈನ್ ತಯಾರಿಕಾ ಡಿಸ್ಟಿಲರಿ/ಬ್ರಿವರಿ/ವೈನರಿಗಳನ್ನು, ಸ್ಟಾರ್ ಹೋಟೆಲ್ಗಳನ್ನು ಮುಚ್ಚಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಆದೇಶಿಸಿದ್ದಾರೆ.
ಏಪ್ರಿಲ್ 24 ರಿಂದ ಏಪ್ರಿಲ್ 26 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ
ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಸಂಬಂಧ 27-ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ಮತದಾನವು ನಡೆಯಲಿರುವ ಹಿನ್ನೆಲೆ, ಏಪ್ರಿಲ್24 ರಂದು ಸಂಜೆ 6.00 ಗಂಟೆಯಿಂದ ಏಪ್ರಿಲ್26 ರ ಮಧ್ಯರಾತ್ರಿ 12:00 ಗಂಟೆಯವರೆಗೆ ಹಾಗೂ ಮತ ಎಣಿಕೆ ದಿನವಾದ ಜೂನ್ 4ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿ ಷರತ್ತಿಗೊಳಪಡಿಸಿ, ನಿಷೇಧಾಜ್ಞೆ ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಆದೇಶಿಸಿದ್ದಾರೆ.
ಷರತ್ತುಗಳು:
1. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೇಲೆ ತಿಳಿಸಿದ ಅವಧಿಯಲ್ಲಿ ಸಾರ್ವಜನಿಕರು ಸಕಾರಣವಿಲ್ಲದೇ ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ, ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮತ್ತು ಮತದಾನ ಕೇಂದ್ರದ ಸುತ್ತ-ಮುತ್ತ ಮುಂತಾದವುಗಳಲ್ಲಿ ಗುಂಪು ಸೇರುವುದನ್ನು ಅಥವಾ ಗುಂಪು ಕೂಡುವುದನ್ನು ನಿಷೇಧಿಸಿದೆ.
2. ಚುನಾವಣಾ ಅಭ್ಯರ್ಥಿ ಬೆಂಬಲಿಗರು ಸೇರಿ 05 ಜನರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರತಕ್ಕದ್ದಲ್ಲ.
3. ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಜಿ, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಿದೆ.
4. ಮತಗಟ್ಟೆಗಳು, ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜರಾಕ್ಸ್ ಅಂಗಡಿ, ಬುಕ್ ಸ್ಟಾಲ್, ಸೈಬರ್ ಕೆಫೆಗಳನ್ನು ನಿರ್ಬಂಧಿಸಿದೆ.
5. ಮತದಾನ ದಿನದಂದು ಮತಗಟ್ಟೆಗಳ 100 ಮೀಟರ್ ಒಳಗೆ ಚುನಾವಣೆ ಪ್ರಚಾರ ನಿಷೇಧಿಸಿದೆ ಹಾಗೂ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್ / ಬ್ಯಾನರ್ ಅಥವಾ ಇನ್ಯಾವುದೇ ವಸ್ತುಗಳನ್ನು ಬಳಸುವ೦ತಿಲ್ಲ.
6. ಕಲ್ಲುಗಳು, ಖಾರ ಪದಾರ್ಥ , ಇಲ್ಲವೆ ಸ್ಫೋಟಕ ವಸ್ತುಗಳು, ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಮತದಾನ ನಡೆಯುವ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
7. ಕಲ್ಲುಗಳನ್ನು ಮತ್ತು ಎಸೆಯುವಂತಹ ವಸ್ತುಗಳನ್ನು, ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
8. ಯಾವುದೇ ರೀತಿಯ ಬಂದ್, ಪ್ರತಿಭಟನೆ, ಮುಷ್ಕರ, ಪ್ರತಿಕೃತಿ ದಹನ, ಪ್ರದರ್ಶನ, ಪೂರಕ ಚಟುವಟಿಕೆಗಳು, ಯಾವುದೇ ಖಾಸಗಿ / ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾನಿಗೊಳಿಸುವ ಹಾಗೂ ವಿರೂಪಗೊಳಿಸುವ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿಷೇಧಿಸಿದೆ.
9. ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು ಅಥವಾ ಪದ ಹಾಡುವುದು. ಚೇಷ್ಟೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರದರ್ಶನ ಅಥವಾ ಪ್ರಸಾರ ಮಾಡುವುದು, ಪ್ರಕಟಣಾ ಪತ್ರಿಕೆಗಳ ಅಥವಾ ಇತರ ಯಾವುದೇ ವಸ್ತುಗಳ ಪ್ರದರ್ಶನ ಭಿತ್ತಿ ಪತ್ರಗಳನ್ನು ಅಂಟಿಸುವುದರಿಂದ, ಸಭ್ಯತನ, ಸದಾಚಾರ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವಂತೆ ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿದೆ.
10. ಯಾವುದೇ ವ್ಯಕ್ತಿಯ ಜಾತಿ-ಧರ್ಮ, ಕೋಮು ಪಂಥಗಳಿಗೆ ಅಥವಾ ಸಾರ್ವಜನಿಕ ನೈತಿಕತೆಗೆ ಬಾಧಕ ಉಂಟುಮಾಡಬಹುದಾಂತಹ ಚಟುವಟಿಕೆಗಳನ್ನು ನಿಷೇಧಿಸಿದೆ.
11. ಈ ಅವಧಿಯಲ್ಲಿ ಯಾವುದೇ ಸಂತೆ, ಜಾತ್ರೆ ಮತ್ತು ಇತರೆ ಜನಸಮೂಹಗಳನ್ನು ನಿಷೇಧಿಸಿದೆ.
12. ಈ ನಿಷೇಧಾಜ್ಞೆಯು ಮದುವೆ, ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶವ ಸಂಸ್ಕಾರಕ್ಕೆ ಮತ್ತು ಚುನಾವಣಾ ಸಂಬಂಧ ಏರ್ಪಡಿಸಲಾಗಿರುವ ಮತ ಕೇಂದ್ರಕ್ಕೆ ಅನ್ವಯಿಸುವುದಿಲ್ಲ.
13. ನಿಷೇಧಾಜ್ಞೆ ಜಾರಿಯಲ್ಲಿರುವ ಸಮಯದಲ್ಲಿ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ.
14. ಮತದಾನ ದಿನದಂದು ಮತಗಟ್ಟೆಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್, ಕಾರ್ಡ್ ಲೆಸ್ ಪೋನ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. (ಚುನಾವಣಾ ಕಾರ್ಯದಲ್ಲಿ ನಿರತರಾದ ಅಧಿಕಾರಿ / ಸಿಬ್ಬಂದಿಗಳನ್ನು ಹೊರತುಪಡಿಸಿ)
15. ಬಹಿರಂಗ ಪ್ರಚಾರ ದಿನಾಂಕ 24.04.2024 ರಂದು ಸಂಜೆ 6-00 ಗಂಟೆಗೆ ಕೊನೆಗೊಳ್ಳಲಿದ್ದು, (ಈ ಜಿಲ್ಲೆಯ ನಾಲ್ಕು ಕ್ಷೇತ್ರದ ಮತದಾರರಲ್ಲದವರು ಆಯಾ ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಹೋಗತಕ್ಕದ್ದು) (ಕ್ರಮ: ಪೊಲೀಸ್ ಇಲಾಖೆ)
16. ಕಲ್ಯಾಣ ಮಂಟಪಗಳು / ಸಮುದಾಯ ಭವನಗಳು / ಹೋಟೆಲ್ಗಳು ಮತ್ತು ಆತಿಥಿ ಗೃಹಗಳಲ್ಲಿ ವಾಸ್ತವ್ಯ ಹೂಡಿದವರ ಪಟ್ಟಿಗಳ ಪರಿಶೀಲನೆ ಮಾಡುವುದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳ ಮತದಾರರಲ್ಲದವರನ್ನು ಮತಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಕಳುಹಿಸಲು ಪೊಲೀಸ್ ಇಲಾಖೆಯವರು ಕ್ರಮವಹಿಸುವುದು.
17. ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ಗಳಲ್ಲಿ ಮತಕ್ಷೇತ್ರದ ಹೊರಗಿನಿಂದ ಬರುವ ಎಲ್ಲಾ ರೀತಿಯ ವಾಹನಗಳನ್ನು ಕಡ್ಡಾಯವಾಗಿ ಸೂಕ್ಷ್ಮವಾಗಿ ಪರಿಶೀಲಿಸತಕ್ಕದ್ದು.
18. ಮತದಾನ ದಿನದಂದು ಪತ್ರಿಕಾ ಮಾದ್ಯಮದವರು ಮತದಾನದ ಗೌಪ್ಯತೆಗೆ ಧಕ್ಕೆ ಬರುವಂತೆ ಛಾಯಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು. ಈ ಆದೇಶವು ಮತದಾನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣಾ ಕಾರ್ಯನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹಾಗೂ ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ. ಆರಕ್ಷಕ ಸಿಬ್ಬಂದಿ ಕಾರ್ಯನಿರ್ವಹಣೆ ವೇಳೆ / ಬಂದೂಕುಗಳನ್ನು ಉಪಯೋಗಿಸುವುದಕ್ಕೆ ಆನ್ವಯಿಸುವುದಿಲ್ಲ ಹಾಗೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು ಅವರ ಚುನಾವಣಾ ಕರ್ತವ್ಯ ನಿರ್ವಹಿಸುವ ಸ್ತಳಕ್ಕೆ ಅನಯಿಸುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ತಿಳಿಸಿದ್ದಾರೆ.