
ದೊಡ್ಡಬಳ್ಳಾಪುರ ತಾಲ್ಲೂಕಿಗೆ ಕರ್ನಾಟಕ ಸಂಭ್ರಮ 50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಕನ್ನಡ ಜ್ಯೋತಿ ರಥ ಆ.7 ರಂದು ಬುಧವಾರ ಆಗಮಿಸಲಿದೆ. ದೇವನಹಳ್ಳಿ ತಾಲ್ಲೂಕಿನಿಂದ ಆಗಮಿಸುವ ಕನ್ನಡ ರಥವನ್ನು ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕಿನ ಗಡಿಭಾಗದಲ್ಲಿ ಸ್ವಾಗತಿಸಲಾಗುತ್ತದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಕನ್ನಡ ಜ್ಯೋತಿ ರಥ ತಾಲ್ಲೂಕಿನಲ್ಲಿ ಸಂಚರಿಸುವ ಬಗ್ಗೆ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕನ್ನಡ ಜ್ಯೋತಿ ರಥದ ಬಾಶೆಟ್ಟಹಳ್ಳಿಯಿಂದ ಪ್ರಾರಂಭವಾಗುತ್ತದೆ. ನಂತರ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣ ವೃತ್ತ, ಡಿ.ಕ್ರಾಸ್, ರಂಗಪ್ಪ ಸರ್ಕಲ್, ಅರಳುಮಲ್ಲಿಗೆ ಬಾಗಿಲು, ಎಂ.ಎಸ್.ವಿ ಶಾಲೆ, ಕೊಂಗಾಡಿಯಪ್ಪ ಪ್ರೌಢಶಾಲೆ, ತಾಲ್ಲೂಕು ಕಚೇರಿ ವೃತ್ತ, ಬಸವ ಭವನ ವರೆಗೆ ಸಂಚರಿಸಲಿದೆ ಎಂದರು.
ನಂತರ ದೊಡ್ಡಬಳ್ಳಾಪುರ ನಗರದಿಂದ ದೊಡ್ಡಬೆಳವಂಗಲ ಮೂಲಕ ಮಧುರೆ ಹೋಬಳಿಯ ಕನಸವಾಡಿಗೆ ತಲುಪುತ್ತದೆ. ಆ.8 ರಂದು ಗುರುವಾರ ಬೆಳಗ್ಗೆ 9 ಗಂಟೆಗೆ ಕನಸವಾಡಿಯಿಂದ ನೆಲಮಂಗಲ ತಾಲ್ಲೂಕಿಗೆ ಬೀಳ್ಕೊಡಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬಿದ ನಿಮಿತ್ತ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಡಿಸಿರುವ ಕರ್ನಾಟಕ ಸಂಭ್ರಮ-50 ರ ಕನ್ನಡ ಜ್ಯೋತಿ ರಥದ ಮೆರವಣಿಗೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಆಡಳಿತ ಹಾಗೂ ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವರು. ಮಹಿಳಾ ಸಂಘಗಳಿಂದ ಪೂರ್ಣ ಕುಂಭ ಸ್ವಾಗತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾತಂಡಗಳು ಸಾಂಸ್ಕೃತಿಕ ಮೆರಗು ನೀಡಲಿವೆ ಎಂದರು.
ಪೂರ್ವ ಸಿದ್ದತಾ ಸಭೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡಪರ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.