ನಾಳೆ(ಅ.11) ಗಾಂಧಿ ಸ್ಮೃತಿ, ದುಶ್ಚಟ ಮುಕ್ತ ಸಮಾಜಕ್ಕಾಗಿ ಜನ ಜಾಗೃತಿ ಜಾಥಾ-ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಉಮರಬ್ಬ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಸ್ಮೃತಿ, ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಬೃಹತ್ ಜನ ಜಾಗೃತಿ ಜಾಥಾ ಹಾಗೂ ಪಾನಮುಕ್ತರ ಅಭಿನಂದನಾ ಸಮಾರಂಭ ಅ.11ರಂದು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಮದ್ಯಮುಕ್ತ ರಾಜ್ಯವನ್ನಾಗಿಸಲು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗುತ್ತಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಉಮರಬ್ಬ ತಿಳಿಸಿದ್ದಾರೆ.

ಸಂಸ್ಥೆಯ ಕಾರ್ಯಾಲಯದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜವನ್ನು ದುಶ್ಚಟಮುಕ್ತವಾಗಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ವತಿಯಿಂದ ಮದ್ಯ ವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದ ಗಣ್ಯರ ಸಹಭಾಗತ್ವದಲ್ಲಿ ರಾಜ್ಯಮಟ್ಟದ ಜನ ಜಾಗೃತಿ ವೇದಿಕೆ ಸ್ಥಾಪಿಸಿ, ಗಣ್ಯರ ಸಹಭಾಗಿತ್ವದಲ್ಲಿದಶ್ವಟಗಳ ಅನಾಹುತಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅ.2 ಗಾಂಧಿ ಜಯಂತಿ ಅಂಗವಾಗಿ ಮದ್ಯ ವಿರೋಧಿ ಜಾಥಾ, ಜನಜಾಗೃತಿ ಸಮಾವೇಶ ಏರ್ಪಡಿಸಲಾಗುತ್ತಿದೆ. ಇದುವರೆಗೆ ಯೋಜನೆಯ ವತಿಯಿಂದ 1985ಕ್ಕೂ ಹೆಚ್ಚು ಮದ್ಯ ವರ್ಜನ ಶಿಬಿರಗಳನ್ನು ಆಯೋಜಿಸಿದ್ದು, ಇದರಲ್ಲಿ 1.3 ಲಕ್ಷ ಶಿಬಿರಾರ್ಥಿಗಳು ಮದ್ಯ ವರ್ಜಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈವರೆಗೆ 36 ಮದ್ಯ ವರ್ಜನ ಶಿಬಿರಗಳನ್ನು ಆಯೋಜಿಸಿ 2082 ಶಿಬಿರಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯಲ್ಲಿ 719 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಾಗೂ ದುಶ್ಚಟ ವಿಎಓಧ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ. ರಾಜ್ಯದಲ್ಲಿ 50 ಗ್ರಾಮಗಳನ್ನು ಪಾನಮುಕ್ತ ಗ್ರಾಮವನ್ನಾಗಿ ಮಾಡಿದ್ದು, ಮದ್ಯಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಕ್ರಮ ವಹಿಸಬೇಕು. ಶಾಲಾ ಕಾಲೇಜುಗಳ ಬಳಿ ಕಡ್ಡಾಯವಾಗಿ ಮದ್ಯದಂಗಡಿಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಲಾಗುತ್ತಿದೆ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎಚ್‌.ಎಸ್‌.ನಾಗೇಶ್‌ ಮಾತನಾಡಿ, ಅ.11ರಂದು ಗಾಂಧಿ ಸ್ಮೃತಿ, ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಬೃಹತ್‌ ಜನ ಜಾಗೃತಿ ಜಾಥಾ ಹಾಗೂ ಪಾನಮುಕ್ತರ ಅಭಿನಂದನಾ ಸಮಾರಂಭ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಜಾಗೃತಿ ಜಾಥಾ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ಶಾಸಕ ಧೀರಜ್‌ ಮುನಿರಾಜು, ಜಿಲ್ಲಾಧಿಕಾರಿ ಎ.ಬಿ.ಬಸುವರಾಜು, ಗಣ್ಯರಾದ ಕೆ.ಎಂ.ಹನುಮಂತರಾಯಪ್ಪ, ಡಿವೈಎಸ್‌ಪಿ ರವಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ, ಮುಖಂಡರಾದ ಟಿ.ಜಿ.ಮಂಜುನಾಥ್, ರವಿ, ತಾಲೂಕು ಯೋಜನಾಧಿಕಾರಿ ದಿನೇಶ್, ಮೇಲ್ವಿಚಾರಕ ಲೋಹಿತ್‌ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!