ನಾಲ್ವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ ಆರೋಪಿಗೆ ಗಲ್ಲು ಶಿಕ್ಷೆ

ಕೊಡಗಿನ ಪೊನ್ನಂಪೇಟೆ ತಾಲ್ಲೂಕು ಬೇಗೂರು ಗ್ರಾಮ ಬಾಳುಗೋಡು ಎಂಬಲ್ಲಿ ನಾಲ್ವರನ್ನು ಮಂಡೆ ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆ ಮಾಡಿ ದ್ದ ಆರೋಪಿಗೆ ಗಲ್ಲು ಶಿಕ್ಷೆ ಹಾಗೂ ರೂ. 10ಸಾವಿರ ದಂಡವನ್ನು ವಿಧಿಸಿ ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪಿ ತ್ತಿದೆ. ಮೂಲತಃ ಕೇರಳ ಮಾನಂದವಾಡಿಯ ಅತ್ತಿಮಾಲ ಕಾಲೋನಿಯ ನಿವಾಸಿ ಕೃಷ್ಣನ್ ಎಂಬುವವರ ಮಗ ಎ.ಕೆ. ಗಿರೀಶ್ ತನ್ನ ಈ ಅಮಾನುಷ ಕೃತ್ಯಕ್ಕಾಗಿ ಗಲ್ಲು ಶಿಕ್ಷೆ ಹಾಗೂ ದಂಡಕ್ಕೆ ಒಳಗಾದವನಾಗಿದ್ದಾನೆ.

ಬೇಗೂರು ಗ್ರಾಮ ಬಾಳುಗೋಡು ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಕರಿಯ, ಗೌರಿ (70 ವರ್ಷ ಮೇಲ್ಪಟ್ಟವರು) ನಾಗಿ (30) ಕಾವೇರಿ (7), ಗಿರೀಶ್ (38) ಇವರುಗಳು ಒಂಟಿ ಮನೆಯಲ್ಲಿ ವಾಸಿಸುತ್ತಿದ್ದರು. ಇವರ ಪೈಕಿ ಆರೋಪಿ ಗಿರೀಶ್ ಎಂಬಾತ ನಾಗಿಯ ಮೂರನೇ ಗಂಡನಾಗಿದ್ದು, ಒಂದು ವರ್ಷದಿಂದ ಒಟ್ಟಿಗೆ ವಾಸವಾಗಿದ್ದರು. ನಾಗಿ ತನ್ನ ಎರಡನೇ ಗಂಡನಾದ ಸುಬ್ರಮಣಿ ಎಂಬಾತಾನೊಂದಿಗೆ ಪುನಃ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದಿಂದ ಗಿರೀಶ್ ದಿನಾಂಕ 27-03-2025 ರಂದು ರಾತ್ರಿ ಸಮಯದಲ್ಲಿ ಈ ವಿಚಾರವಾಗಿ ನಾಗಿಯೊಂದಿಗೆ ಜಗಳವಾಡಿ ಮಂಡೆ ಕತ್ತಿಯಿಂದ ದೇಹದ ವಿವಿಧ ಭಾಗಗಳಿಗೆ ಕಡಿದು ಕೊಲೆ ಮಾಡಿದ್ದ. ತಡೆಯಲು ಬಂದ ನಾಗಿಯ ಅಜ್ಜ ಕರಿಯ, ಅಜ್ಜಿ ಗೌರಿ ಹಾಗೂ ತನ್ನ ಮಲ ಮಗಳಾದ ಕಾವೇರಿ ಈ ಮೂವರನ್ನು ಕೂಡ ಮಂಡೆ ಕತ್ತಿಯಿಂದ ಬರ್ಭರವಾಗಿ ಕಡಿದು
ಹತ್ಯೆಗೈದಿದ್ದ.

ಹೀಗೆ ಒಟ್ಟು ನಾಲ್ವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ 103(1) BNS Act ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ದಿನಾಂಕ 28-03-2025 ರಂದು ಅರೋಪಿ ಗಿರೀಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಪ್ರಕರಣದ ತನಿಖಾಧಿಕಾರಿ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಶಿವರಾಜ್ ಆರ್ ಮುಧೋಳ್ ಹಾಗೂ ತನಿಖಾ ಸಹಾಯಕರಾದ ಹೆಡ್ ಕಾನ್ಸ್ಟೇಬಲ್ ಅಬ್ದುಲ್ ಮಜೀದ್ ಕೆ.ಎ. ಮತ್ತು ಹೇಮಲತಾ ರೈ ಹಾಗೂ ಗೋಣಿಕೊಪ್ಪಲು ವೃತ್ತ ನಿರೀಕ್ಷಕರ ಕಛೇರಿಯ ಸಿಬ್ಬಂದಿಗಳು ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡು ದಿನಾಂಕ 12-06-2025 ರಂದು ಆರೋಪಿ ಗಿರೀಶನ ವಿರುದ್ದ ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಟರಾಜ್ ಎಸ್. ರವರು ಇಂದು ಆರೋಪಿ ಗಿರೀಶ್ ಗೆ ಗಲ್ಲು ಶಿಕ್ಷೆ ಹಾಗೂ ರೂ. 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದ ಸರ್ಕಾರಿ ಅಭಿಯೋಜಕರಾಗಿ ಯಾಸಿನ್ ಅಹಮ್ಮದ್ ಅವರು ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!