
ನಮ್ಮ ನಾಯಕರು ಮತ್ತು ಉಗ್ರ ಧರ್ಮ ಹಾಗು ರಾಷ್ಟ್ರೀಯವಾದ…..
ನಾಯಕರಣ್ಣ ನಾಯಕರು,
ಇವರೇ ನಮ್ಮ ನಾಯಕರು…..
ತಾವೇ ಸೃಷ್ಟಿಸಿಕೊಂಡ, ನಾವೇ ಭ್ರಮಿಸಿಕೊಂಡ ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು……..
ಕಟೌಟ್ ಕಟ್ಟಿಸಿಕೊಂಡು ನಾಯಕರಾಗುವರಣ್ಣ………,
ಟಿವಿ – ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ನಾಯಕರಾಗುವರಣ್ಣ…………,
ಬೀದಿಗಳಲ್ಲಿ ಪೋಸ್ಟರ್ – ಬ್ಯಾನರ್ ಹಾಕಿ ನಾಯಕರಾಗುವರಣ್ಣ……..,
ದುಡ್ಡು ಚೆಲ್ಲಿ ಜನ ಸೇರಿಸಿ ನಾಯಕರಾಗುವರಣ್ಣ…………,
ಜಾತಿ ಹೆಸರಲ್ಲಿ ಜನ ಸೇರಿಸಿ ನಾಯಕರಾಗುವರಣ್ಣ………….,
ಧರ್ಮದ ಮತ್ತೇರಿಸಿ ನಾಯಕರಾಗುವರಣ್ಣ………….,
ಭಾಷೆಯನ್ನು ದುರುಪಯೋಗ ಮಾಡಿಕೊಂಡೂ ನಾಯಕರಾಗುವರಣ್ಣ…………,
ಜೈಕಾರ ಹಾಕಿಸಿಕೊಂಡು ನಾಯಕರಾಗುವರಣ್ಣ.…………..,
ಟಿವಿ ಚರ್ಚೆಗಳಲ್ಲಿ ಜಗಳವಾಡುತ್ತ, ಬಾಯಿ ಮಾತಿನ ಮೂಲಕವೇ ನಾಯಕರಾಗುವರಣ್ಣ…………,
ಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಾ ನಾಯಕರಾಗುವರಣ್ಣ………….,
ಸಿನಿಮಾಗಳಲ್ಲಿ ನಟಿಸುತ್ತಾ ನಾಯಕರಾಗುವರಣ್ಣ…………,
ಚಿನ್ನ ಬೆಳ್ಳಿಗಳನ್ನು ಮಾರುತ್ತಾ ನಾಯಕರಾಗುವರಣ್ಣ……….,
ಕಂಪ್ಯೂಟರ್ ಗಳನ್ನು ಸೃಷ್ಟಿಸುತ್ತಲೂ ನಾಯಕರಾಗುವರಣ್ಣ…………,
ಭೂಮಿ ಬಗೆದು ಅದಿರು ತೆಗೆದು ನಾಯಕರಾಗುವರಣ್ಣ………….,
ಜಮೀನುಗಳ ವ್ಯಾಪಾರ ಮಾಡಿ ಕಟ್ಟಡಗಳನ್ನು ಕಟ್ಟಿಯೂ ನಾಯಕರಾಗುವರಣ್ಣ,………….
ಶಿಕ್ಷಣ ಸಂಸ್ಥೆಗಳನ್ನು ಮಾಡಿ ನಾಯಕರಾಗುವರಣ್ಣ………..,
ಆಸ್ಪತ್ರೆಗಳನ್ನು ಸ್ಥಾಪಿಸಿಯೂ ನಾಯಕರಾಗುವರಣ್ಣ………..,
ದೇವರುಗಳನ್ನು ನಂಬಿಸಿಯೂ ನಾಯಕರಾಗುವರಣ್ಣ………,.,
ಶೋಷಕರ ಪರ ಹೋರಾಟ ಎಂದು ಬಿಂಬಿಸಿಯೂ ನಾಯಕರಾಗುವರಣ್ಣ……………,
ಟಿವಿ Reality ಶೋ ಗೆದ್ದೂ ನಾಯಕರಾಗುವರಣ್ಣ…………..,
YouTube – X – WhatsApp – Instagram – Facebook ಗಳಲ್ಲಿ ಸರ್ಕಸ್ ಮಾಡಿಯೂ ನಾಯಕರಾಗುವರಣ್ಣ………….,
ಇವರೇ ನಮ್ಮನ್ನಾಳುವ ನಾಯಕರಣ್ಣ………..,
ಗಾಂಧಿ – ಅಂಬೇಡ್ಕರ್ – ನೇತಾಜಿ – ತಿಲಕ್ – ಭಗತ್ ಸಿಂಗ್ – ಆಜಾದ್ ಮುಂತಾದವರೂ ನಾಚುವಂತೆ ಮಿಂಚುವರಣ್ಣ……………,
ಅಸಲಿ ನಾಯಕರ ತ್ಯಾಗ – ತಾಖತ್ತುಗಳು ಮರೆಯಾಗುವಂತೆ ಮೆರೆಯುವರಣ್ಣ ಈ ನಕಲಿ ನಾಯಕರು,…………..
ಆ ಸೂಕ್ಷ್ಮತೆ – ಆ ದೂರದೃಷ್ಟಿ – ಆ ಧೈರ್ಯ – ಆ ವಿಶಾಲ ಮನೋಭಾವ – ಆ ಸಹಿಷ್ಣುತೆ – ಆ ದೇಶಭಕ್ತಿ ಇವರಲ್ಲಿ ಇಲ್ಲವಣ್ಣ,……………,
ಸ್ವಾರ್ಥ ತುಂಬಿದ – ಉಡಾಫೆ ವ್ಯಕ್ತಿತ್ವದ – ಹಣ ಅಧಿಕಾರದ – ದುರಾಸೆ ತುಂಬಿದ – ಗುಲಾಮಿತನದ – ನಾಯಕರಣ್ಣ ನಾಯಕರು ಇವರೇ ನಮ್ಮ ನಾಯಕರು……………..,
ಎಚ್ಚರ – ಎಚ್ಚರ – ಎಚ್ಚರ……….,
ಅಸಲಿ – ನಕಲಿ ಗಳ ವ್ಯತ್ಯಾಸ ಗಮನಿಸಿ………..,
ಮಾತು – ಭಾಷೆ – ವರ್ತನೆ – ನಡವಳಿಕೆ – ಪ್ರಾಮಾಣಿಕತೆ ಸದಾ ಗುರುತಿಸಿ………,
ಸ್ವಾಭಿಮಾನಿ – ಸಮೃದ್ಧ ಕರ್ನಾಟಕದ ಹಿತದೃಷ್ಟಿಯಿಂದ ಇದು ಅತ್ಯಾವಶ್ಯಕ......…..,
ಅಯ್ಯಾ ಎಂದರೆ ಸ್ವರ್ಗ,
ಎಲವೋ ಎಂದರೆ ನರಕ……
ಮಹಾಭಾರತ ಕುರುಕ್ಷೇತ್ರ ನಮಗೆ ಪಾಠವಾಗಲೇ ಇಲ್ಲ…….
ಸಾಮಾಜಿಕ, ಧಾರ್ಮಿಕ, ರಾಜಕೀಯ ಸಿದ್ದಾಂತಗಳ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ನೀರಿನಂತೆ ತಮ್ಮ ಸ್ಥಿತಿಸ್ಥಾಪಕತ್ವ ಕಾಪಾಡಿಕೊಳ್ಳುತ್ತವೆ ಮತ್ತು ತಂತ್ರ ಪ್ರತಿತಂತ್ರದ ಮೂಲಕ ಹೊಸ ಹಾದಿಯನ್ನು ಸೃಷ್ಟಿ ಮಾಡಿಕೊಳ್ಳುತ್ತವೆ. ಅವು ಬಹುತೇಕ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಅವುಗಳ ನಡುವಿನ ಸಹಕಾರ ಅಪರೂಪ.
ಭಾರತದ ಸಧ್ಯದ ಪರಿಸ್ಥಿತಿಯಲ್ಲಿ
ಉಗ್ರ, ಪ್ರಚೋದನಾತ್ಮಕ, ಕೃತಕ ರಾಷ್ಟ್ರೀಯವಾದ, ಧರ್ಮ ಮತ್ತು ಅದರ ವಿರುದ್ಧದ ಚಿಂತನೆಗಳು ಭಾರತವನ್ನು ಸಂಘರ್ಷದ ಮನಸ್ಥಿತಿಗೆ ಈಗಾಗಲೇ ತಲುಪಿಸಿವೆ.
ರಾಜಕಾರಣಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಅಧಿಕಾರ ಹಿಡಿಯಲು ಬಹುಮತ ಗಳಿಸಬೇಕು, ಸಂಸ್ಥೆ ಸಂಘಟನೆಗಳಿಗೆ ತಾವು ಮತ್ತು ತಮ್ಮ ಸಂಘಟನೆ ಪ್ರಬಲ ಮತ್ತು ಜನಪ್ರಿಯವಾಗಬೇಕು, ಮಾಧ್ಯಮಗಳಿಗೆ ಟಿಆರ್ಪಿ ಏರಿಕೆಯಾಗಿ ಹಣ ಮಾಡಬೇಕು, ಸಾಮಾಜಿಕ ಜಾಲತಾಣದ ರಾಜಕೀಯ ಬರಹಗಾರರಿಗೆ ಹೆಸರು ಗಳಿಸಬೇಕು. ಸಾಮಾನ್ಯ ಜನರಿಗೆ ಬದುಕು ಹೇಗೋ ಸುಲಭ ಮತ್ತು ಶ್ರೀಮಂತವಾಗಬೇಕು …..
ಇದರ ಪರಿಣಾಮವೇ ಬಾಯಿಗೆ ಬಂದ ಭಾಷಣ, ಬರಹ, ಘೋಷಣೆ……
ಎಲ್ಲವೂ ಉಗ್ರ ಉಗ್ರ ಉಗ್ರ….
ತಾಳ್ಮೆ, ವಿವೇಚನೆ, ಸಭ್ಯತೆ, ಕನಿಕರ ಎಲ್ಲವೂ ಮಾಯ….
ಗೆಳೆಯರೊಬ್ಬರು ಚರ್ಚೆಯ ಸಂದರ್ಭದಲ್ಲಿ ಹೇಳಿದರು ” ಒಂದು ರಾಷ್ಟ್ರೀಯ ಪಕ್ಷ ಸುಮಾರು 60 ವರ್ಷ ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರನ್ನು ತೋರಿಸಿ ಅವರಲ್ಲಿ ಆಭದ್ರತೆ ಮೂಡಿಸಿ ಅವರ ಮತ ಪಡೆದು ಅಧಿಕಾರ ನಡೆಸಿತು. ಇದೀಗ ಇನ್ನೊಂದು ರಾಷ್ಟ್ರೀಯ ಪಕ್ಷ ಬಹುಸಂಖ್ಯಾತರಿಗೆ ಅಲ್ಪಸಂಖ್ಯಾತರನ್ನು ತೋರಿಸಿ ಬಹುಸಂಖ್ಯಾತರಲ್ಲಿ ಆಭದ್ರತೆ ಮೂಡಿಸಿ ಅಧಿಕಾರ ಪಡೆದಿದೆ.”
ಕೊನೆಗೆ ನಾವು ತಲುಪುವುದೆಲ್ಲಿಗೆ……
ಸಿರಿಯಾ, ಇರಾಕ್, ಲೆಬನಾನ್, ಆಫ್ಘಾನಿಸ್ತಾನ್, ಪಾಕಿಸ್ತಾನ್, ಆಫ್ರಿಕಾದ ಕೆಲವು ದೇಶಗಳಂತೆ…………
ಯಾವುದೇ ಅಭದ್ರತೆಯ ವಾತಾವರಣದಲ್ಲಿ ಅಭಿವೃದ್ಧಿ ಸಾಧ್ಯವೇ ಇಲ್ಲ. ಅಲ್ಪಸಂಖ್ಯಾತರ ಬಗ್ಗೆ ಇಲ್ಲಿನ ಬಹುಸಂಖ್ಯಾತರ ಮುಖ್ಯ ಆರೋಪ ಅವರು ಧರ್ಮಾಂಧರು. ಅವರಲ್ಲಿ ವಿದ್ಯಾವಂತರು ಸಹ ಧರ್ಮದ ಅಮಲಿನಿನ ಸುಳಿಗೆ ಸಿಲುಕುತ್ತಾರೆ. ಈಗ ಇಲ್ಲಿನ ಬಹುಸಂಖ್ಯಾತ ಬುದ್ದಿವಂತರ ವರ್ತನೆ ಗಮನಿಸಿ. ನಾವು ಶಾಂತಿ ಪ್ರಿಯರು ಶಾಂತಿ ಪ್ರಿಯರು ಎಂದು ಹೇಳುತ್ತಾ ಅದೇ ಧರ್ಮದ ಅಮಲಿಗೆ ಬೀಳುತ್ತಿದ್ದಾರೆ.
ದ್ವೇಷದ ಘರ್ಷಣೆಯಿಂದ ಗಳಿಸಿದ ಗೆಲುವು ಗೆಲುವಲ್ಲ. ಸೋಲು ಸೋಲಲ್ಲ. ಅದು ನಿರಂತರ ಪ್ರಕ್ಷುಬ್ಧ ಮನಸ್ಥಿತಿ
ಮಹಾಭಾರತ ಮತ್ತು ಅದರ ಆಂತರ್ಯದ ಕುರುಕ್ಷೇತ್ರ ಇರುವುದು ಓದಲು ಮಾತ್ರವಲ್ಲ ಅನುಸರಿಸಲು ಮತ್ತು ಅಳವಡಿಸಿಕೊಳ್ಳಲು ಸಹ.
ಏನೋ ಕೆಲವು ಪಡ್ಡೆ ಹುಡುಗರ ಹಾರಾಟ ಇದಲ್ಲ. ದೊಡ್ಡ ದೊಡ್ಡ ಜನಪ್ರಿಯ ಪತ್ರಕರ್ತರು ರಾಜಕಾರಣಿಗಳು, ಧರ್ಮಾಧಿಕಾರಿಗಳು, ಸಂಘಟಕರು ವೇದಿಕೆ ಸಿಕ್ಕ ತಕ್ಕಣ, ಕೊಚ್ಚಿ ಕೊಲ್ಲಿ ಕತ್ತರಿಸಿ ಸುಟ್ಟಾಕಿ, ತುಳಿದಾಕಿ ಠಸ್ ಪುಸ್ ಅಂತ ಏನೋ ದೇಶಪ್ರೇಮ ಉಕ್ಕಿ ಹರಿಯುವಂತೆ ಕಿರುಚುತ್ತಾರೆ. ಅವರೇ ಹೋಗಿ ಅದನ್ನು ಮಾಡಬಹುದಲ್ಲ !!!!!😄
ಸ್ವಾತಂತ್ರ್ಯ ನಂತರದ 79 ವರ್ಷಗಳಲ್ಲಿ ಭಾರತ ಬೆಳೆದಿದೆ. ಟೀ ಮಾರುವವರು, ದನ ಕಾಯುವವರು ಅತ್ಯುನ್ನತ ಹುದ್ದೆಗೆ ಏರಿದ್ದಾರೆ ಮತ್ತು ಏರುತ್ತಿದ್ದಾರೆ. ಭಾರತ ವಿಶ್ವದ 4ನೇ ದೊಡ್ಡ ಆರ್ಥಿಕತೆ ಹೊಂದಿದೆ.
ನಮ್ಮ ಸಂವಿಧಾನ ತುಂಬಾ ಬಲಿಷ್ಠವಾಗಿದೆ – ಪ್ರಗತಿಪರವಾಗಿದೆ. ಆದರೆ ಅನುಷ್ಠಾನದಲ್ಲಿ ವಿಫಲವಾಗಿದೆ. ಅದರ ಬಗ್ಗೆ ಹೆಚ್ಚು ಚಿಂತಿಸಬೇಕಿದೆ.
ಇರುವ ನೆಮ್ಮದಿಯನ್ನು ಉಳಿಸಿಕೊಳ್ಳುವುದು ಬಿಟ್ಟು ಅತಿಯಾದ ಆಕ್ರಮಣಕಾರಿ ಮನೋಭಾವದಿಂದ ಇತರರಲ್ಲೂ ಅದೇ ಮನೋಭಾವ ಬೆಳೆಸಿ ಇಡೀ ದೇಶವನ್ನು ಅಸಹನೀಯ ಪರಿಸ್ಥಿತಿಗೆ ತಳ್ಳುವುದು ಬೇಡ. ಸಕ್ಕರೆ ಸಿಹಿಯಾಗಿರುತ್ತದೆ ಎಂದು ತೋರಿಕೆಗಾಗಿ ಮತ್ತೆ ಮತ್ತೆ ಹೇಳುವುದು ಕೃತಕವಾಗುತ್ತದೆ. ನಮ್ಮೆಲ್ಲರಲ್ಲೂ ದೇಶ ಪ್ರೇಮ ಎಂಬುದು ರಕ್ತದ ಕಣಕಣದಲ್ಲೂ, ಪ್ರತಿ ಉಸಿರಿನಲ್ಲೂ ಉಸಿರಾಡುತ್ತಲೇ ಇರುತ್ತದೆ. ಅದನ್ನು ಅನಾವಶ್ಯಕವಾಗಿ ಒತ್ತಾಯ ಪೂರ್ವಕವಾಗಿ ಹೊರಹಾಕಿ ನಗೆಪಾಟಲಿಗೆ ಈಡಾಗಿದ್ದೇವೆ. ದೇಶ ದ್ರೋಹ ಎಂಬ ಪದವನ್ನು ಬೇಕಾಬಿಟ್ಟಿ ಬಳಸಿ ಅದರ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿದ್ದೇವೆ. ದೇಶಭಕ್ತಿಯನ್ನು ಮಾಧ್ಯಮಗಳಿಂದ ಕಲಿಯಬೇಕಿಲ್ಲ. ಮಾಧ್ಯಮಗಳಿಗೆ ತೋರಿಸಬೇಕಿಲ್ಲ. ಅದರ ಅವಶ್ಯಕತೆ ಬಂದಾಗ ಅದು ನಮ್ಮ ಹೃದಯದಲ್ಲಿ ತಾನೇತಾನಾಗಿ ಅರಳುತ್ತದೆ.
ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿ ಪರಿಸ್ಥಿತಿ ಕೈಮೀರಿ ಪಶ್ಚಾತ್ತಾಪ ಪಡುವ ಮುನ್ನ ಎಚ್ಚೆತ್ತುಕೊಳ್ಳೋಣ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ ಎಚ್. ಕೆ