ನಾನು ಸಚಿವನಾಗಲು ಜಾಲಪ್ಪ ಕೂಡ ಕಾರಣಕರ್ತರು- ಸಿ.ಎಂ ಸಿದ್ದರಾಮಯ್ಯ

ಆರ್.ಜಾಲಪ್ಪ ಅವರ ವ್ಯಕ್ತಿತ್ವ ನೇರ-ನಿಷ್ಠುರ ಮತ್ತು ಹೃದಯವಂತಿಕೆಯಿಂದ ಕೂಡಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಆರ್.ಎಲ್.ಜಾಲಪ್ಪ ಜನ್ಮ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಾಲಪ್ಪ ಅಕಾಡೆಮಿ, ಜಾಲಪ್ಪ ಕಾನೂನು ಮಹಾವಿದ್ಯಾಲಯ, ಶತಮಾನೋತ್ಸವ ಭವನಗಳನ್ನು ಉದ್ಘಾಟಿಸಿ ಹಾಗೂ ದೇವರಾಜ ಅರಸು ವಸತಿ ಶಾಲೆ ನೂತನ ಕಟ್ಟಡಗಳ ಶಿಲಾನ್ಯಾಸ ನೆರವೇರಿಸಿ “ಹೃದಯವಂತ ಆರ್.ಎಲ್.ಜಾಲಪ್ಪ ಜೀವನ‌ ಪಥ” ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜಾಲಪ್ಪನವರಿಗೆ ಸಮಯ ಪ್ರಜ್ಞೆ ಇತ್ತು. ಒಬ್ಬ ದಕ್ಷ ಆಡಳಿತಗಾರರಾಗಿದ್ದ ಜಾಲಪ್ಪ ಅವರು ನಿರ್ವಹಿಸಿದ ಎಲ್ಲಾ ಖಾತೆಗಳಲ್ಲೂ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದು ಮಾತ್ರವಲ್ಲ, ರೈತರಿಗೆ, ಕೃಷಿಗೆ ಅತ್ಯಂತ ಮಹತ್ವ ನೀಡಿದ್ದನ್ನು ಸಿಎಂ ಸ್ಮರಿಸಿದರು.

ನಾನು ಮೊದಲ ಬಾರಿ ಸಚಿವನಾಗಲು ರಾಚಯ್ಯನವರಷ್ಟೇ ಜಾಲಪ್ಪ ಅವರೂ ಕಾರಣ. ಜಾಲಪ್ಪನವರಿಗೆ ಹಿಂದುಳಿದವರ ಏಳಿಗೆಯ ವಿಚಾರದಲ್ಲಿ ದೂರದೃಷ್ಟಿ ಇತ್ತು. ಹೀಗಾಗಿ ಆಗಲೇ ವೈದ್ಯಕೀಯ ಕಾಲೇಜು ಸ್ಥಾಪಿಸಿದರು. ಮೊದಲಿಗೆ 150 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಈಗ 40 ಸಾವಿರದಷ್ಟು ವಿದ್ಯಾರ್ಥಿಗಳು ನಾನಾ ವಿಭಾಗಗಳಲ್ಲಿ ಓದುತ್ತಿರುವುದನ್ನು ಉಲ್ಲೇಖಿಸಿ ಶ್ಲಾಘಿಸಿದರು.

ಬಹಳ ಸ್ವಾಭಿಮಾನಿ ಆಗಿದ್ದ ಜಾಲಪ್ಪನವರು ನನ್ನ ರಾಜಕೀಯ ಏಳಿಗೆಗೆ ಕಾರಣಕರ್ತರು‌. ನನ್ನನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದು ಜಾಲಪ್ಪನವರು ದೇವೇಗೌಡರ ಎದುರು ಹಠ ಹಿಡಿದು ಆಗ್ರಹ ಪೂರ್ವಕವಾಗಿ ಒತ್ತಾಯಿಸಿದ್ದರು. ನನಗೂ, ಜೆ.ಹೆಚ್.ಪಟೇಲರಿಗೂ ನಡುವೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚರ್ಚೆ ನಡೆಯುತ್ತಿದ್ದಾಗ ನನ್ನ ಪರವಾಗಿ ಗಟ್ಟಿಯಾಗಿ ನಿಂತು ದೇವೇಗೌಡರಿಗೆ ನನ್ನನ್ನೇ ಸಿಎಂ ಮಾಡಬೇಕು ಎಂದು ಒತ್ತಾಯಿಸಿದ್ದನ್ನು ನೆನಪಿಸಿಕೊಂಡರು.

ನಾನು ಮೊದಲ ಬಾರಿ ಹಣಕಾಸು ಸಚಿವನಾಗುವಾಗಲೂ ಜಾಲಪ್ಪನವರ ಪ್ರಯತ್ನ‌ ಇದೆ. ನಾನು ಕಂದಾಯ ಸಚಿವನಾಗಬೇಕು ಎಂದುಕೊಂಡಿದ್ದೆ. ಆದರೆ, ನಾನು ಹಣಕಾಸು ಸಚಿವ ಆಗಲೇಬೇಕು ಎಂದು ಸೂಚಿಸಿದರು. ಅವರ ಕಾರಣದಿಂದ ನಾನು ಇಂದು ಹದಿನಾರು ಬಜೆಟ್ ಗಳನ್ನು ಮಂಡಿಸುವಂತಾಯಿತು ಎಂದು ಕೃತಜ್ಞತೆ ಸಲ್ಲಿಸಿದರು.

ಇಂದು ನಾನು ರಾಜಕೀಯವಾಗಿ ಈ ಮಟ್ಟದ ಏಳಿಗೆ ಆಗಿದ್ದರೆ ಅದರಲ್ಲಿ ಜಾಲಪ್ಪನವರ ಪಾತ್ರ ದೊಡ್ಡದಿದೆ ಎಂದರು.

ಅತ್ಯಂತ ಹೃದಯವಂತರಾಗಿದ್ದ ಜಾಲಪ್ಪನವರು ಆತಿಥ್ಯದಲ್ಲೂ ಎತ್ತಿದ ಕೈ. ತುಪ್ಪದ ದೋಸೆ ಮಾಡಿ ಸ್ವತಃ ಬಡಿಸಿದ್ದರು. ಸಾಮಾಜಿಕ ನ್ಯಾಯದ ಪರವಾಗಿ ತಮ್ಮ ರಾಜಕೀಯ ಜೀವನವನ್ನು ಮುಡಿಪಾಗಿ ಇಟ್ಟಿದ್ದರು. ಅತ್ಯಂತ ಧೈರ್ಯವಂತರಾಗಿದ್ದ ಜಾಲಪ್ಪ ಅವರು ಸತ್ಯ ಹೇಳುವಾಗ ಮುಲಾಜಿಲ್ಲದೆ ಎದೆಗಾರಿಕೆ ಪ್ರದರ್ಶಿಸುತ್ತಿದ್ದರು ಎಂದು ಸ್ಮರಿಸಿ ಅಭಿನಂದನೆ ಸಲ್ಲಿಸಿದರು.

ನಂತರ ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕಿನ ಎಪಿಎಂಸಿಗೆ ಜಾಲಪ್ಪ ಅವರ ಹೆಸರನ್ನು ಇಡಬೇಕು. ತಾಲೂಕಿನ ನಿರಾಶ್ರಿತರಿಗೆ ಮನೆಭಾಗ್ಯ ಒದಗಿಸಿಕೊಡಬೇಕು. ಕಾವೇರಿ ನೀರನ್ನು ದೊಡ್ಡಬಳ್ಳಾಪುರಕ್ಕೂ ನೀಡಬೇಕು. ಜಿಲ್ಲಾಸ್ಪತ್ರೆ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ, ಶಿಕ್ಷಣ ಸಚಿವ ಮಧುಬಂಗಾರಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ, ಉಗ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!