ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬಿಜೆಪಿ ಫಲಾನುಭವಿಗಳ ಪ್ರಕೋಷ್ಟದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಧೀರಜ್ ಮುನಿರಾಜು ಅವರು ಬುಧವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 410 ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲೇ ಉದ್ಯೋಗ ನೇಮಕಾತಿ ಪತ್ರ ಪಡೆದುಕೊಂಡರು.
ದೊಡ್ಡಬಳ್ಳಾಪುರ, ಕೋಲಾರದ ನರಸಾಪುರ, ನೆಲಮಂಗಲದ ಸೋಂಪುರ ಹಾಗೂ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಿಂದ ಬಂದಿದ್ದ 80 ಕ್ಕೂ ಅಧಿಕ ಬಹುರಾಷ್ಟ್ರೀಯ ಕಂಪೆನಿಗಳು ಅರ್ಹತೆ, ಸಾಮರ್ಥ್ಯ ಆಧರಿಸಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡವು.
ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ವ್ಯಾಸಂಗ ಮಾಡಿದ ನಿರುದ್ಯೋಗಿ ಯುವಕರು ಉದ್ಯೋಗಕ್ಕೆ ಆಯ್ಕೆಯಾಗುವ ಮೂಲಕ ಸಂತಸ ವ್ಯಕ್ತಪಡಿಸಿದರು. ಮಕ್ಕಳಿಗೆ ಉದ್ಯೋಗ ಸಿಕ್ಕಿದಕ್ಕೆ ಪೋಷಕರು ಕೂಡ ಸಂಭ್ರಮಿಸಿದರು.
ಐಸಿಐಸಿಐ ಬ್ಯಾಂಕ್, ಫ್ಲಿಪ್ ಕಾರ್ಟ್, ಫೈನಾನ್ಸ್ ಕಂಪನಿಗಳು, ಅಮೆಜಾನ್ ಸೇರಿದಂತೆ ಹಲವು ಕಂಪನಿಗಳು ಭಾಗವಹಿಸಿದ್ದವು. 800 ಅಭ್ಯರ್ಥಿಗಳು ಎರಡನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾದರು. ಒಟ್ಟು 2200 ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ನೋಂದಣಿ ಮಾಡಿಕೊಂಡಿದ್ದರು.
ಇದಕ್ಕೂ ಮುನ್ನ ಉದ್ಯೋಗ ಮೇಳವನ್ನು ಬಿಜೆಪಿ ಮಹಿಳಾ ಘಟಕದ ಜಿಲ್ಲಾ ವಕ್ತಾರೆ ಪುಷ್ಪಾ ಶಿವಶಂಕರ್, ಬಿಜೆಪಿ ಹಿರಿಯ ಮುಖಂಡ ಕೆ.ಎಚ್. ಹನುಮಂತರಾಯಪ್ಪ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪುಷ್ಪಾ ಶಿವಶಂಕರ್ ಮಾತನಾಡಿ, ಧೀರಜ್ ಮುನಿರಾಜು ಅವರು ಪಕ್ಷ ಸಂಘಟನೆ ಜೊತೆಯಲ್ಲೇ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಡವರು, ವಿದ್ಯಾರ್ಥಿಗಳು, ಯುವಜನರಿಗೆ ನಾನಾ ರೀತಿಯಲ್ಲಿ ನೆರವಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕುರಿತು ಕಾಳಜಿ ಹೊಂದಿರುವ ಧೀರಜ್ ಅವರನ್ನು ವಿಧಾನಸಭೆ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಮುಖಂಡ ಕೆ.ಎಚ್.ಹನುಮಂತರಾಯಪ್ಪ ಮಾತನಾಡಿ, ಕಮ್ಯುನಿಸ್ಟರು, ಕಾಂಗ್ರೆಸ್, ಜೆಡಿಎಸ್ ಪಕ್ಷದವರು ಕೂಡ ಧೀರಜ್ ಪರವಾಗಿ ಮಾತನಾಡುವಂತಾಗಿದೆ. ಸೇವೆಯಲ್ಲಿ ಸಣ್ಣಪುಟ್ಟದು ಎಂಬುದಿಲ್ಲ. ಜನಸೇವೆ ಮಾಡುವುದಷ್ಟೇ ಮುಖ್ಯ. ಸಣ್ಣ ವಯಸ್ಸಿನಲ್ಲೇ ಅಗಾಧ ಸೇವೆ ಮಾಡುತ್ತಿರುವ ಧೀರಜ್ ಮುನಿರಾಜು ಅವರನ್ನು ಗೆಲ್ಲಿಸಿ ಕಳುಹಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.
ಸಂಸದೀಯ ಮಂಡಳಿ ತೀರ್ಮಾನವೇ ಅಂತಿಮ:
ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಮಂದಿ ಇದ್ದಾರೆ. ಈವರೆಗೆ ಯಾರನ್ನೂ ಅಂತಿಮ ಮಾಡಿಲ್ಲ. ಚುನಾವಣಾ ದಿನಾಂಕ ನಿಗದಿಯಾದ ನಂತರ ನಡೆಯುವ ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮ ಅಭ್ಯರ್ಥಿಗಳನ್ನು ಪ್ರಕಟಿಸುವ ಸಂಪ್ರದಾಯವಿದೆ ಎಂದು ಟಿಕೆಟ್ ಆಕಾಂಕ್ಷಿ ಧೀರಜ್ ಮುನಿರಾಜು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 224 ಕ್ಷೇತ್ರಗಳಲ್ಲಿರುವ ಆಕಾಂಕ್ಷಿಗಳಲ್ಲಿ ಪಕ್ಷಕ್ಕಾಗಿ ದುಡಿದವರು, ಕ್ಷೇತ್ರದ ಬಗ್ಗೆ ಕಾಳಜಿ ಇರುವ ವ್ಯಕ್ತಿ, ಕ್ಷೇತ್ರದ ಜನರ ಹಿತ ಬಯಸುವ ಅಭ್ಯರ್ಥಿ ಬಗ್ಗೆ ಸಂಪೂರ್ಣವಾಗಿ ಸಮೀಕ್ಷೆ ನಡೆಸಿ, ಟಿಕೆಟ್ ನೀಡುವ ಕುರಿತು ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಅಲ್ಲಿಯವರೆಗೂ ಅಭ್ಯರ್ಥಿ ಆಯ್ಕೆ ಅಸಾಧ್ಯ ಎಂದು ಕೆಲ ಊಹಾಪೋಹಗಳಿಗೆ ತೆರೆ ಎಳೆದರು.
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಟಿಕೆಟ್ ಕೊಡಲಿ, ಬಿಡಲಿ ಪಕ್ಷಕ್ಕಾಗಿ ದುಡಿಯುತ್ತಾ ಸಮಾಜ ಸೇವೆ ಮುಂದುವರಿಸುವುದು ನನ್ನ ಧ್ಯೇಯ ಎಂದರು.
ಐಎಎಸ್ ಅಧಿಕಾರಿಯೊಬ್ಬರು ಟಿಕೆಟ್ ಆಕಾಂಕ್ಷಿಯಾಗಿರುವ ವದಂತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ
ಐಎಎಸ್ ಅಧಿಕಾರಿಯೊಬ್ಬರು ಟಿಕೆಟ್ ಆಕಾಂಕ್ಷಿಯಾಗಿರುವ ವದಂತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಯಾರು, ಏನೆಂಬುದು ನನಗೆ ಗೊತ್ತಿಲ್ಲ.
ಪಕ್ಷದದ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಯಾರೇ ಬಂದರು ಸ್ವಾಗತಾರ್ಹ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ 80-85 ಸಾವಿರ ಮತ ತೆಗೆದುಕೊಂಡು ಗೆಲುವು ಸಾಧಿಸುವುದು ನಿಶ್ಚಿತ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮುದ್ದಪ್ಪ, ಉಮಾಮಹೇಶ್ವರಿ, ನಗರಸಭೆ ಸದಸ್ಯರಾದ ಸುಮಿತ್ರಾ ಆನಂದ್, ಹಂಸಪ್ರಿಯಾ, ವತ್ಸಲಾ, ಬಂತಿ ವೆಂಕಟೇಶ್, ಕೃಷ್ಣಮೂರ್ತಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಘಟ್ಟ ಕಾಂತರಾಜು, ನಾಗೇಶ್, ಆನಂದಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.