ಮಾಡಿದ್ದುಣ್ಣೋ ಮಹಾರಾಯ…….
ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ…….
ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ……..
ಸಿನಿಮಾ, ಜಾಹೀರಾತುಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರದರ್ಶಿಸುವ ಮಂದಿಯ ವಿರುದ್ಧ ದೂರು ಕೊಡಬೇಕಿದೆ,
ಅದೇ ಸಿನಿಮಾಗಳಲ್ಲಿ ಮಚ್ಚು, ಲಾಂಗು ಬಾಂಬು, ಬಂದೂಕು, ರಕ್ತ, ಹಿಂಸೆ, ಸೇಡು ತೋರಿಸಿ ಸಮಾಜವನ್ನು ದಾರಿ ತಪ್ಪಿಸುವವರ ವಿರುದ್ಧ ದೂರು ನೀಡಬೇಕಿದೆ,
ಧಾರವಾಹಿಗಳಲ್ಲಿ ಮಾನವೀಯ ಮೌಲ್ಯಗಳನ್ನು ನಾಶಪಡಿಸಿ ಅದರ ವಿರುದ್ಧ ಮೌಲ್ಯಗಳನ್ನು ಪ್ರತಿಪಾದಿಸುವ, ಕೌಟುಂಬಿಕ ಮೌಲ್ಯಗಳನ್ನು ಅಪವಿತ್ರಗೊಳಿಸಿ ಅನೈತಿಕ ಸಂಬಂಧಗಳನ್ನು ನೈತಿಕ ಗೊಳಿಸುವ ಕಥೆಗಳ ವಿರುದ್ಧ ದೂರು ನೀಡಬೇಕಿದೆ,
ರಿಯಾಲಿಟಿ ಶೋಗಳ ಹೆಸರಿನಲ್ಲಿ ಬಿಗ್ ಬಾಸ್ ರೀತಿಯ ಅತ್ಯಂತ ಕೀಳು ಅಭಿರುಚಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವವರ ವಿರುದ್ಧ ದೂರು ನೀಡಬೇಕಿದೆ,
ಸರ್ಕಾರದ ಪ್ರತಿ ಕಚೇರಿಯಲ್ಲಿ ಲಂಚಕ್ಕಾಗಿ ಒತ್ತಾಯಿಸುವ, ಕಿರುಕುಳಕೊಡುವ ಅಧಿಕಾರಿಗಳ ವಿರುದ್ಧ ದೂರು ನೀಡಬೇಕಿದೆ,
ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಸಾಮಾನ್ಯ ಅಂಗಡಿಗಳಲ್ಲಿಯೇ ಮಾದಕ ದ್ರವ್ಯ ಮಾರಾಟ ಮಾಡುವ ದಗಾಕೋರರ ವಿರುದ್ಧ ದೂರು ನೀಡಬೇಕಾಗಿದೆ,
ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳಲ್ಲಿ ಅತ್ಯಂತ ಕೆಟ್ಟ ರೀತಿಯ ಸುದ್ದಿಗಳನ್ನು ಬ್ರೇಕಿಂಗ್ ನ್ಯೂಸ್ ಮಾಡುವ, ತೀರಾ ಮೂರನೆಯ ದರ್ಜೆ ಭಾಷೆ ಬಳಸುವ ಪತ್ರಕರ್ತರ ವಿರುದ್ಧ ದೂರು ನೀಡಬೇಕಿದೆ,
ಎಲ್ಲಾ ಧರ್ಮಗಳ ಅನೇಕ ಧಾರ್ಮಿಕ ಕೇಂದ್ರಗಳಲ್ಲಿ ಜನರ, ಭಕ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಅವರಲ್ಲಿ ಮೌಢ್ಯ ಬಿತ್ತಿ ಶೋಷಿಸುತ್ತಿರುವ ಧರ್ಮಾಧಿಕಾರಿಗಳ ವಿರುದ್ಧ ದೂರು ನೀಡಬೇಕಿದೆ,
ಇಡೀ ಸಮಾಜವನ್ನೇ ನಿಯಂತ್ರಣಕ್ಕೆ ಪಡೆದು ಹೆಜ್ಜೆ ಹೆಜ್ಜೆಗೂ ಜನರನ್ನು ವಂಚಿಸುತ್ತಿರುವ, ಭ್ರಷ್ಟಗೊಳಿಸುತ್ತಿರುವ ಭೂ ಮಾಫಿಯಾ, ವೈದ್ಯಕೀಯ ಮಾಫಿಯಾ, ಶಿಕ್ಷಣ ಮಾಫಿಯಾ ವಿರುದ್ಧ ದೂರು ನೀಡಬೇಕಿದೆ……
ಚುನಾವಣೆಗಳಲ್ಲಿ ಸುಳ್ಳು ಭರವಸೆ ನೀಡಿ, ಹಣ ಹೆಂಡ ಸೀರೆ ಪಂಚೆ ಕೊಟ್ಟು, ಜಾತಿ ಧರ್ಮದ ಹೆಸರಿನಲ್ಲಿ ವಿಭಜಿಸಿ, ಮತ ಪಡೆದು ಜನಪ್ರತಿನಿಧಿಗಳಾಗುತ್ತಿರುವ ಕೆಟ್ಟ ರಾಜಕೀಯ ನಾಯಕರ ವಿರುದ್ಧ ದೂರು ನೀಡಬೇಕಾಗಿದೆ,
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ, ಮತದಾನವನ್ನು ಪವಿತ್ರ ಗೊಳಿಸುವ ನೀತಿಗೆ, ಜವಾಬ್ದಾರಿಗೆ ವಿರುದ್ಧವಾಗಿ ರಾಜಕಾರಣಿಗಳ ಆಮಿಷಕ್ಕೆ ಬಲಿಯಾಗಿ ತಮ್ಮ ವ್ಯಕ್ತಿತ್ವವನ್ನೇ, ಮನುಷ್ಯತ್ವವನ್ನೇ ಮಾರಿಕೊಳ್ಳುತ್ತಿರುವ ಮತದಾರರ ವಿರುದ್ಧ ದೂರು ನೀಡಬೇಕಿದೆ,
ಸರ್ಕಾರಿ ಜಮೀನುಗಳನ್ನು, ಕೆರೆ ಕಾಲುವೆಗಳನ್ನು ಅನಧಿಕೃತವಾಗಿ ಆಕ್ರಮಿಸಿ. ವಂಚಿಸುತ್ತಿರುವ ಖದೀಮರ ವಿರುದ್ಧ ದೂರು ನೀಡಬೇಕಾಗಿದೆ,……,
ಹೀಗೆ ದೂರು ನೀಡುತ್ತಾ ಹೋದರೆ ನೂರಾರು ದೂರುಗಳು ದಾಖಲಾಗುತ್ತವೆ. ಆದರೆ ಹೀಗೆ ಈ ಸಮಾಜ ಕಲುಷಿತವಾಗಲು ಕಾರಣರಾದವರು ಯಾರು ಗೊತ್ತಾ, ಇದೇ ರಾಜಕಾರಣಿಗಳು, ಇದೇ ಅಧಿಕಾರಿಗಳು, ಇದೇ ಸಿನಿಮಾ, ಧಾರಾವಾಹಿ ನಟ ನಟಿಯರು, ಇದೇ ಪತ್ರಕರ್ತರು, ಇದೇ ಸ್ವಾಮೀಜಿಗಳು ಇದೇ ಇತರರು,…..,
ರಾಜ್ಯದ ಎಲ್ಲಾ ಸಂಪನ್ಮೂಲಗಳ ಮೇಲೆ ಅಧಿಕಾರ ಹೊಂದಿರುವ, ಜನರ ಮೇಲೆ ಹಿಡಿತ ಸಾಧಿಸುವ, ಸಮಾಜವನ್ನು ಸರಿ ದಿಕ್ಕಿಗೆ ಮುನ್ನಡೆಸಿಕೊಂಡು ಹೋಗುವ ಬಹುತೇಕ ನಾಯಕತ್ವ ಇವರುಗಳಲ್ಲೇ ಕೇಂದ್ರೀಕೃತವಾಗಿದೆ. ಇವರೇ ಸಮಾಜವನ್ನು ಹಾದಿ ತಪ್ಪಿಸಿ ಈಗ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕೆಲವರು ಇವರದೇ ಭಾಷೆಯಲ್ಲಿ, ಇವರದೇ ಪ್ರತಿಬಿಂಬಿತವಾಗಿ ಒಂದಷ್ಟು ಕೆಟ್ಟ, ಕೊಳಕ, ಅಶ್ಲೀಲ ಪ್ರತಿಕ್ರಿಯೆ ನೀಡಿದರೆ ಅವರ ವಿರುದ್ಧ ಅದೇ ದುಷ್ಟಕೂಟಕ್ಕೆ ಇದೇ ಜನ ದೂರು ನೀಡುತ್ತಾರೆ. ನ್ಯಾಯಾಲಯಗಳ ಮುಖಾಂತರ ಸುದ್ದಿ ಪ್ರಸಾರಕ್ಕೆ ನಿರ್ಬಂಧ ತರುತ್ತಾರೆ.
ಕೇಳಿನೋಡಿ,
ಈ ಸಿನಿಮಾ ನಟ ನಟಿಯರು, ರಾಜಕಾರಣಿಗಳು, ಧರ್ಮಾಧಿಕಾರಿಗಳು, ಪತ್ರಕರ್ತರು, ಸರ್ಕಾರಿ ಅಧಿಕಾರಿಗಳನ್ನು,
ಈ ಸಮಾಜಕ್ಕೆ ಇವರ ಕೊಡುಗೆ ಏನು, ಈ ಮಣ್ಣಿನ ಮೌಲ್ಯಗಳನ್ನು ಉಳಿಸಲಿಕ್ಕೆ ಇವರು ಮಾಡಿರುವ ಘನ ಕಾರ್ಯಗಳೇನು, ಸಿನಿಮಾಗಳ ಮುಖಾಂತರ ಈ ಸಮಾಜಕ್ಕೆ ಇವರು ನೀಡಿರುವ ಸಂದೇಶವೇನು, ಧಾರ್ಮಿಕ ಕ್ಷೇತ್ರಗಳ ಮೂಲಕ ಈ ಸಮಾಜದ ಜನರ ನಡುವೆ ಉಳಿಸಿರುವ ಸೌಹಾರ್ದತೆ ಏನು, ಈ ಅಧಿಕಾರಿಗಳು ಈ ಸಮಾಜಕ್ಕೆ ಎಷ್ಟು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ, ಈ ಪತ್ರಕರ್ತರು ಈ ಸಮಾಜದ ಯಾವ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ,…..,
ಈಗ ನೋಡಿದರೆ ಈ ಸಮಾಜದ ಮುಗ್ಧ ಜನರ, ಮೌಢ್ಯ ಜನರ, ಅಜ್ಞಾನಿಗಳ, ಭಾವಾವೇಷದ ಪ್ರತಿಕ್ರಿಯೆಗೆ ಪೊಲೀಸರಿಗೆ, ನ್ಯಾಯಾಲಯಕ್ಕೆ ದೂರು ನೀಡುತ್ತಾರೆ. ತಾವೇ ಬಿತ್ತಿದ ಕಹಿ ಈಗ ತಮ್ಮ ಬುಡಕ್ಕೆ ಬೆಂಕಿ ಇಡುವ ಫಲ ನೀಡುತ್ತಿದೆ.
( ಕೆಲವು ಸಿನಿಮಾ ನಟ ನಟಿಯರು, ಧರ್ಮಾಧಿಕಾರಿಗಳು, ರಾಜಕಾರಣಿಗಳು ಪೊಲೀಸರಿಗೆ ತಮ್ಮ ಮೇಲೆ ಸಾಮಾಜಿಕ ಜಾಲತಾಣಗಳ ಅಶ್ಲೀಲ ಪ್ರತಿಕ್ರಿಯೆಗೆ ದೂರು ನೀಡಿದ ಘಟನೆಯನ್ನು ಆದರಿಸಿ……)
ಯೋಚಿಸುವ ಸರದಿ ನಮ್ಮದು……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ